ಚನ್ನಪಟ್ಟಣ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮಿಣ ಉದ್ಯೋಗ ಖಾತ್ರಿಯ ಕೂಲಿ ಕೆಲಸವನ್ನು ಸಮರ್ಪಕ ಜಾರಿಗೊಳಿಸುವಂತೆ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಇಗ್ಗಲೂರು ಮತ್ತು ಸರಗೂರು ಗ್ರಾಮ ಘಟಕದಿಂದ ನಗರದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಚನ್ನಪಟ್ಟಣ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮಿಣ ಉದ್ಯೋಗ ಖಾತ್ರಿಯ ಕೂಲಿ ಕೆಲಸವನ್ನು ಸಮರ್ಪಕ ಜಾರಿಗೊಳಿಸುವಂತೆ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಇಗ್ಗಲೂರು ಮತ್ತು ಸರಗೂರು ಗ್ರಾಮ ಘಟಕದಿಂದ ನಗರದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ತಾಪಂ ಕಚೇರಿ ಆವರಣದಲ್ಲಿ ಸಂಘದ ನೇತೃತ್ವದಲ್ಲಿ ಜಮಾಯಿಸಿದ ಇಗ್ಗಲೂರು ಗ್ರಾಮದ ಕೂಲಿ ಕಾರ್ಮಿಕರು ನರೇಗಾ ಯೋಜನೆಯ ಕೂಲಿ ಕೆಲಸವನ್ನು ಸಮಪರ್ಕವಾಗಿ ನೀಡುವಂತೆ ಆಗ್ರಹಿಸಿದರು.

ಕೃಷಿಯಲ್ಲಿ ಕೆಲಸ ಸಿಗದ ಕೂಲಿಕಾರರು ಬೇರೆಡೆ ವಲಸೆ ಹೋಗುವುದನ್ನು ತಪ್ಪಿಸಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮಿಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ಜಾರಿ ತರಲಾಗಿದೆ. ಇದು ಕೂಲಿಕಾರರು ವಾಸಿಸುವ ಸ್ಥಳದಲ್ಲಿ ಉದ್ಯೋಗ ನೀಡುವುದರ ಮೂಲಕ ಅವರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ. ಆದರೆ, ಇಗ್ಗಲೂರು ಗ್ರಾಮ ಪಂಚಾಯಿತಿಯ ಕೂಲಿ ಕಾರ್ಮಿಕರಿಗೆ ಕೆಲಸ ಕೊಡದೆ ವಿನಾ ಕಾರಣ ಅಲೆದಾಡಿಸಲಾಗುತ್ತಿದೆ. ಕೆಲಸ ಮಾಡಿದ ಕೂಲಿ ಹಣವನ್ನು ಕಡಿಮೆ ಪಾವತಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ನರೇಗಾ ಯೋಜನೆಯ ಅನ್ವಯ ೧೦೦ ದಿನ ಉದ್ಯೋಗ ಕೊಡಬೇಕೆಂಬ ಆದೇಶವಿದ್ದರು ವರ್ಷದಲ್ಲಿ ೩೦ ರಿಂದ ೫೦ ದಿನಗಳು ಮಾತ್ರ ಕೆಲಸ ಸಿಗುತ್ತಿದೆ. ಕೂಲಿಕಾರರು ಕೆಲಸವಿಲ್ಲದೆ ಅಲೆಯುವಂತಾಗಿದೆ. ಕಳೆದ ಕೆಲ ತಿಂಗಳಿನಿಂದ ಇಗ್ಗಲೂರು ಗ್ರಾಮದ ಕೂಲಿ ಕಾರ್ಮಿಕರಿಗೆ ಕೆಲಸವನ್ನೇ ನೀಡುತ್ತಿಲ್ಲ ಎಂದು ದೂರಿದರು.

ಬೇಡಿಕೆಗಳು: ನರೇಗಾ ಯೋಜನೆಯಲ್ಲಿ ಕೆಲಸ ಕೇಳಿ ನಮೂನೆ ೦೬ ರಲ್ಲಿ ಅರ್ಜಿ ಸಲ್ಲಿಸಿದ ಎಲ್ಲ ಕುಟುಂಬಗಳಿಗೂ ೧೦೦ ದಿನ ತುಂಬುವವರೆಗೂ ಕೆಲಸ ನೀಡಬೇಕು. ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ನೆರಳು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಒದಗಿಸಬೇಕು. ಕಾಯಕ ಬಂಧುಗಳಿಗೆ ಗುರುತಿನ ಚೀಟಿ ನೀಡಿ ಕೊಡಬೇಕಾದ ಪ್ರೋತ್ಸಾಹ ಧನವನ್ನು ಅವರ ಖಾತೆಗೆ ಜಮಾ ಮಾಡಬೇಕು. ಕೆಲಸ ಮುಗಿದ ನಂತರ ಕೂಲಿಕಾರರನ್ನು ಕಾಯಿಸದೇ ಎನ್.ಎಂ.ಎಂ.ಎಸ್ ಹಾಜರಾತಿಯನ್ನು ತೆಗೆಯಬೇಕು. ಉದ್ದೇಶ ಪೂರ್ವಕವಾಗಿ ಹಾಜರಾತಿ ಹಾಕದೇ ಕೂಲಿಕಾರರನ್ನು ಕಾಯಿಸುವ ಕಾಯಕ ಮಿತ್ರರ ಮೇಲೆ ಕ್ರಮ ಕೈಗೊಳ್ಳಬೇಕು. ಎನ್‌ಎಂಆರ್ ತೆಗೆದು ಕೆಲಸ ಮಾಡಿ ೭ ದಿನ ತುಂಬಿದ ತಕ್ಷಣ ಮತ್ತೆ ಎನ್‌ಎಂಆರ್ ಸೃಜನೆ ಮಾಡಿ ಕೆಲಸ ನೀಡಬೇಕು. ಹಲವಾರು ತಾಂತ್ರಿಕ ಸಮಸ್ಯೆಗಳ ನೆಪ ಒಡ್ಡಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲು ನಿರಾಕರಿಸುತ್ತಿರುವ ಅಧಿಕಾರಗಳ ಮೇಲೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಪಂ ಇಒ ಸಂದೀಪ್ ಅವರಿಗೆ ಮನವಿಪತ್ರ ಸಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಇಒ ಸಂದೀಪ್ ನರೇಗಾ ಕೂಲಿ ಕಾರ್ಮಿಕರಿಗೆ ೧೦೦ ದಿನ ಕೆಲಸ ನೀಡಲು ಕ್ರಮ ಕೈಗೊಳ್ಳಲಾಗುವುದು. ಹಣ ಸಂದಾಯ ಸೇರಿದಂತೆ ಏನಾದರೂ ಸಮಸ್ಯೆ ಆಗಿದ್ದರೆ ಅದನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಪುಟ್ಟಮಾದು, ಮುಖಂಡರಾದ ಮಂಜುಳ, ಲಕ್ಷಿಮ್ಮ, ಶಿವಮ್ಮ, ಜಯಮ್ಮ, ಬೋರೇಗೌಡ, ಚಿಕ್ಕಬೋರೇಗೌಡ, ಪುಟ್ಟಸ್ವಾಮಿಗೌಡ, ಭಾಗ್ಯಮ್ಮ, ಸೌಮ್ಯ ಇತರರು ಇದ್ದರು.

ಪೊಟೋ೩ಸಿಪಿಟಿ೧:

ಚನ್ನಪಟ್ಟಣ ತಾಲೂಕು ಪಂಚಾಯಿತಿ ಕಚೇರಿ ಆವರಣದಲಿ ನರೇಗಾ ಕೂಲಿ ಕೆಲಸವನ್ನು ಸಮರ್ಪಕ ಜಾರಿಗೊಳಿಸುವಂತೆ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಇಗ್ಗಲೂರು ಮತ್ತು ಸರಗೂರು ಗ್ರಾಮ ಘಟಕದಿಂದ ಪ್ರತಿಭಟನೆ ನಡೆಸಿದರು.