ಸಾರಾಂಶ
ಕನ್ನಡಪ್ರಭ ವಾರ್ತೆ ಕುಷ್ಟಗಿ
ತಾಲೂಕಾಸ್ಪತ್ರೆಯ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ವೈದ್ಯರ ಕೊರತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ (ಸ್ವಾಭಿಮಾನಿ ಬಣ)ದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಜಿಲ್ಲಾ ಯುವ ಘಟಕದ ಅಧ್ಯಕ್ಷ ದೇವರಾಜ ಹಜಾಳದಾರ ಮಾತನಾಡಿ, ಇಲ್ಲಿಯ ಕೆಲ ವೈದ್ಯರು ಚಿಕಿತ್ಸೆಗಾಗಿ ಹಣ ಪಡೆದುಕೊಳ್ಳುತ್ತಿದ್ದು, ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಬಹಳಷ್ಟಿದೆ. ಕೂಡಲೇ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.ಮುಖ್ಯ ವೈದ್ಯಾಧಿಕಾರಿ ಡಾ. ಕೆ.ಎಸ್. ರೆಡ್ಡಿ ಅವರನ್ನು ಈ ಆಸ್ಪತ್ರೆಯಿಂದ ವರ್ಗಾವಣೆ ಮಾಡಬೇಕು. ಇಲ್ಲಿನ ವೈದ್ಯರು ಖಾಸಗಿ ಆಸ್ಪತ್ರೆ ನಡೆಸುವುದನ್ನು ನಿಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಆಸ್ಪತ್ರೆಗೆ ಕೂಡಲೇ ಎಂ.ಡಿ. ವೈದ್ಯರನ್ನು ನೇಮಿಸಬೇಕು. ಚರ್ಮರೋಗ, ಚಿಕ್ಕ ಮಕ್ಕಳ ವೈದ್ಯರು, ಕಣ್ಣು ತಪಾಸಣಾ ವೈದ್ಯರನ್ನು ನೇಮಿಸಬೇಕು. ಹೆಚ್ಚುವರಿಯಾಗಿ ಶಸ್ತ್ರಚಿಕಿತ್ಸೆ ಮತ್ತು ಹೆರಿಗೆಗಾಗಿ ಮಹಿಳಾ ಸರ್ಜನ್ ವೈದ್ಯರನ್ನು ನೇಮಿಸಬೇಕು. ಸಿಟಿ ಸ್ಕ್ಯಾನರ್, ಎಕ್ಸರೇ, ಇತರೆ ಮಸೀನ್‌ಗಳನ್ನು ಆಪರೇಟ್ ಮಾಡಲು ನುರಿತ ಸಿಬ್ಬಂದಿ ನೇಮಕ ಮಾಡಬೇಕು ಎಂದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಕುಡಿಯುವ ನೀರು, ರೋಗಿಗಳ ಕೊಠಡಿ ಸ್ವಚ್ಛತೆ, ಶೌಚಾಲಯಗಳ ಸ್ವಚ್ಛತೆಗೆ ಕ್ರಮ ವಹಿಸಬೇಕು. ಸೇವೆಯಲ್ಲಿರುವ ವೈದ್ಯರು ಚಿಕಿತ್ಸೆ ನೀಡುವ ವೇಳಾಪಟ್ಟಿಯನ್ನು ನಾಮಫಲಕ್ಕೆ ಅಳವಡಿಸಿ ಅದರಂತೆ ಕಾರ್ಯನಿರ್ವಹಿಸಲು ಕ್ರಮವಹಿಸಬೇಕು. ಪ್ರತಿ ದಿನ ಒಳರೋಗಿಗಳನ್ನು ತಪ್ಪದೇ ತಪಾಸಣೆ ಮಾಡಬೇಕು. ಮತ್ತು ಹೆಚ್ಚುವರಿಯಾಗಿ ವೈದ್ಯರನ್ನು ನೇಮಿಸಬೇಕು. ರೋಗಿಗಳಿಗೆ ಚೀಟಿ ಬರೆದುಕೊಡುವ ಪದ್ಧತಿಯನ್ನು ಕೈಬಿಡಲು ವೈದ್ಯರಿಗೆ ಸೂಚನೆ ನೀಡಬೇಕು. ಒಳ ರೋಗಿಗಳಿಗೆ ಬೇಡ್ ಶೀಟ್ ನೀಡಬೇಕು. ಇದರ ಜೊತೆಗೆ ಅನೇಕ ಸೌಲಭ್ಯಗಳ ಕೊರತೆ ಇದ್ದು ಎಲ್ಲಾ ಸೌಲಭ್ಯಗಳನ್ನು ಈಡೇರಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು.ಪ್ರತಿಭಟನಾ ಸ್ಥಳಕ್ಕೆ ಶಾಸಕ ದೊಡ್ಡನಗೌಡ ಪಾಟೀಲ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿ, ವೈದ್ಯರ ನೇಮಕಾತಿಯ ಕುರಿತು ನಾನು ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಅದು ಸರ್ಕಾರದ ಹಂತದಲ್ಲಿದೆ. ಈ ಆಸ್ಪತ್ರೆಗೆ ಬೇಕಾಗುವಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತಹ ವ್ಯವಸ್ಥೆಯನ್ನು ಶೀಘ್ರ ಮಾಡಲಾಗುತ್ತದೆ. ಹಣ ಪಡೆದುಕೊಳ್ಳುತ್ತಿರುವ ವೈದ್ಯರ ವಿರುದ್ಧ ಕ್ರಮಕ್ಕೆ ಮುಂದಾಗುವುದಾಗಿ ಭರವಸೆ ನೀಡಿದರು.
ಇದಕ್ಕೆ ಒಪ್ಪಿದ ಪ್ರತಿಭಟನಾಕಾರರು ಹೋರಾಟ ಹಿಂಪಡೆದರು.ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಆನಂದ ಗೋಟೂರು, ಡಾ. ಕೆ.ಎಸ್. ರೆಡ್ಡಿ, ಜಿಪಂ ಮಾಜಿ ಸದಸ್ಯ ಕೆ. ಮಹೇಶ, ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು. ಪ್ರತಿಭಟನಾಕಾರರಾದ ಶರಣು ಹಿರೇಮಠ, ಲಕ್ಷ್ಮಣ ನಾಯಕ, ರಮೇಶ ಕಟ್ಟಿಮನಿ, ನೀಲಪ್ಪ ಆಡೀನ್, ಬಸವರಾಜ ಲಿಂಗಸ್ಗೂರು, ಸೇರಿದಂತೆ ಅನೇಕರು ಇದ್ದರು.