ಸಾರಾಂಶ
ಶಿಗ್ಗಾಂವಿ: ಶತ ಶತಮಾನಗಳಿಂದ ಸಮಾಜದಲ್ಲಿ ಶೋಷಣೆ ಅನುಭವಿಸಿದ ದಲಿತ ಸಮುದಾಯಕ್ಕೆ ಕನಿಷ್ಠ ಘನತೆಯ ಬದುಕು ನಡೆಸಲು ವಸತಿ, ನಿವೇಶನ ಕೊನೆಗೆ ಸತ್ತಾಗ ಗೌರವದಿಂದ ಅಂತ್ಯ ಸಂಸ್ಕಾರ ನಡೆಸಲು ಸ್ಮಶಾನ ಭೂಮಿ ಒದಗಿಸುವಲ್ಲಿ ಸರಕಾರಗಳು ವಿಫಲವಾಗಿವೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಆಕ್ರೋಶವ್ಯಕ್ತಪಡಿಸಿದರು. ನಗರದ ತಹಸೀಲ್ದಾರ್ ಕಚೇರಿ ಎದುರು ದಲಿತ ಹಕ್ಕುಗಳ ಸಮಿತಿ (ಡಿಎಚ್ಎಸ್) ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ರಾಜ್ಯದಲ್ಲಿರುವ ದಲಿತ ಸಮುದಾಯದಲ್ಲಿರುವ ಭೂ ಹಿಡುವಳಿದಾರರಿಗೆ ಗಂಗಾ ಕಲ್ಯಾಣ ಕೊಳವೆ ಬಾವಿ ಸೌಕರ್ಯ ಹಾಗೂ ದಲಿತ ಸಮುದಾಯದವರಿಗೆ ಸ್ಮಶಾನ ಇರದ ಎಲ್ಲ ಗ್ರಾಮದಲ್ಲಿಯೂ ಸ್ಮಶಾನ ಭೂಮಿ ಒದಗಿಸಲು ಮತ್ತು ಸ್ವಯಂ ಉದ್ಯೋಗಕ್ಕೆ ಆರ್ಥಿಕ ಸಹಾಯ ಒದಗಿಸಬೇಕು ಎಂದು ಒತ್ತಾಯಿಸಿದರು.ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣ ಸಮಗ್ರ ಸಮೀಕ್ಷೆಯಲ್ಲಿ ಪರಿಶಿಷ್ಟ್ಟ ಜಾತಿಗಳು ಅನುಭವಿಸಿರುವ ಸಾಮಾಜಿಕ ತಾರತಮ್ಯ, ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಶೇ. ೭೫ರಷ್ಟು ಜನರು ಇಂದಿಗೂ ಅಸ್ಪೃಶ್ಯತೆಯನ್ನು ಅನುಭವಿಸುತ್ತಿರುವುದನ್ನು ಗುರುತಿಸಲಾಗಿದೆ. ಅಸ್ಪೃಶ್ಯತೆ ಆಚರಣೆಗಳಲ್ಲಿ ದೇವಾಲಯಗಳ ಪ್ರವೇಶದ ನಿಷೇಧ, ಸಾಮೂಹಿಕ ಆಹಾರ ಸೇವನೆಯಲ್ಲಿ ನಿಷೇಧ, ಪಂಕ್ತಿಬೇಧ ಪ್ರತ್ಯೇಕ ಟೀ ಲೋಟ ನೀಡುವುದು. ಪ್ರತ್ಯೇಕ ಆಸನ ವ್ಯವಸ್ಥೆ, ಮನೆಗಳಿಗೆ ಪ್ರವೇಶ ನಿಷೇಧ, ರಸ್ತೆಗಳ ಬಳಕೆಗೆ ನಿಷೇಧ, ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿಷೇಧ. ಶಾಲೆಗಳಲ್ಲಿ ತಾರತಮ್ಯ, ಜೀತ ಪದ್ಧತಿ ಆಚರಣೆ, ಬಲತ್ಕಾರ ಮತ್ತು ದೌರ್ಜನ್ಯಗಳ ಹೆಸರಿನಲ್ಲಿ ತಾರತಮ್ಯಗಳು, ಜೊತೆಗೆ ಮೇಲ್ಟಾತಿಯ ಅಧಿಕಾರಿಗಳು ದಲಿತರಿಗೆ ಸಿಗಬೇಕಾದ ಸೌಕರ್ಯಗಳನ್ನು ನಿರಾಕರಿಸುವುದು ಸೇರಿದಂತೆ ಅನೇಕ ರೀತಿಯ ಅಸ್ಪೃಶ್ಯತೆ ಮತ್ತು ತಾರತಮ್ಯ ಆಚರಣೆಗಳು ಜಾರಿಯಲ್ಲಿವೆ. ಜನರು ಇಂದಿಗೂ ಸಹ ಅಸ್ಪೃಶ್ಯತೆಯನ್ನೇ ಅನುಭವಿಸುತ್ತಿದ್ದಾರೆ ಎಂಬುದಕ್ಕೆ ಇತ್ತೀಚಿನ ಉದಾಹರಣೆ ಎಂದರೆ, ಯಲಬುರ್ಗಾ ತಾಲೂಕಿನ ಸಂಗನಾಳದಲ್ಲಿ ದಲಿತ ಯುವಕ ಕೂದಲು ಕಟ್ ಮಾಡಿ ಎಂದಿದಕ್ಕೆ ಅಸ್ಪೃಶ್ಯರಿಗೆ ಮಾಡುವುದಿಲ್ಲ ಎಂದು ವಾದ ನಡೆದು ದಲಿತ ಯುವಕನ ಕೊಲೆಯಾಗಿದೆ. ದಲಿತ ಮಹಿಳೆಯರು ದುಪ್ಪಟ್ಟು ದೌರ್ಜನ್ಯ, ಅಪಮಾನ ಮತ್ತು ಲಿಂಗ ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ. ದೇವದಾಸಿ ಪದ್ಧತಿ ಈಗಲೂ ಮುಂದುವರೆದಿದೆ. ದೇವದಾಸಿ ಸಮೀಕ್ಷೆಯನ್ನು ನಿಖರವಾಗಿ ನಡೆಸಲು ಆಗ್ರಹಿಸಿದರು. ಎಸ್.ಸಿ.ಎಸ್.ಪಿ./ಟಿ.ಎಸ್.ಪಿ. ಉಪ ಯೋಜನೆಯ ೧೨ ವರ್ಷದ ರಾಜ್ಯ ಬಜೆಟ್ ೧ ಲಕ್ಷ ೭೫ ಸಾವಿರ ಕೋಟಿ ಹಣ ಸಮರ್ಪಕವಾಗಿ ಜಾರಿಗೊಳಿಸದೆ ದುರ್ಬಳಕೆ ಮತ್ತು ಭ್ರಷ್ಠಾಚಾರ ಕಾರಣಗಳಿಂದಾಗಿ ದಲಿತರಿಗೆ ತಲುಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕಳೆದ ೩ ವರ್ಷದಲ್ಲಿ ೩೬ ಸಾವಿರ ಕೋಟಿ ದಲಿತರ ಹಣವನ್ನು ಅನ್ಯ ಯೋಜನೆಗೆ ಬಳಕೆ ಮಾಡಲಾಗಿದೆ. ಈ ಕುರಿತು ವಿಧಾನಸಭೆಯ ವಿಶೇಷ ಅಧಿವೇಶನ ಕರೆದು ಲೋಪದೋಷ ಸರಿಪಡಿಸಬೇಕು ಎಂದರು.ಜಿಲ್ಲಾ ಸಂಚಾಲಕರಾದ ವೀರಣ್ಣ ಗಡ್ಡಿಯವರ ಮಾತನಾಡಿ, ದಲಿತರು ಸಾಗುವಳಿ ಮಾಡುತ್ತಿರುವ ದರಖಾಸ್ತು ಭೂಮಿ (ಡಿ.ಸಿ. ಭೂಮಿ), ಬಗರ್ ಹುಕ್ಕುಂ ಭೂಮಿಗೆ ಮಂಜೂರಾತಿ ನೀಡಬೇಕು. ಸರ್ಕಾರಿ ಭೂಮಿ, ಗೋಮಾಳ, ಅರಣ್ಯ ಭೂಮಿ ಸಾಗುವಳಿ ದಾರರಿಗೆ ಹಕ್ಕುಪತ್ರ ನೀಡಬೇಕು. ಸಾಗುವಳಿ ಮಾಡುತ್ತಿರುವ ಫಡ ಭೂಮಿಯನ್ನು ಸಕ್ರಮಗೊಳಿಸಬೇಕು. ಗಂಗಾ ಕಲ್ಯಾಣ ಕೊಳವೆಬಾವಿಗಳಿಗೆ ಅರ್ಜಿ ಸಲ್ಲಿಸಿರುವ ಎಲ್ಲಾ ಅರ್ಜಿದಾರರಿಗೂ ಜೇಷ್ಠ್ಠತಾ ಪಟ್ಟಿ ಆಧಾರದಲ್ಲಿ ಏಕ ಕಾಲಕ್ಕೆ ಮಂಜೂರು ಮಾಡಿ ಆರ್ಥಿಕ ಸಹಾಯ ನೀಡಬೇಕು. ಆಗತ್ಯವಿರುವ ಗ್ರಾಮಗಳಿಗೆ ಸ್ಮಶಾನ ಭೂಮಿ ಮಂಜೂರು ಮಾಡಿ ಅಭಿವೃದ್ಧಿಗೊಳಿಸಬೇಕು.
ತಹಸೀಲ್ದಾರ್ ಮೂಲಕ ರಾಜ್ಯದ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಎಸ್ಎಫ್ಐ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಎಸ್., ಅರುಣ ನಾಗವತ್, ಡಿಎಚ್ಎಸ್ ಜಿಲ್ಲಾ ಮುಖಂಡರಾದ ಮಂಜುಳಾ ಹಾನಗಲ್, ಕೃಷ್ಣ್ಣಪ್ಪ ಗದಗ, ಡಿವೈಎಫ್ಐ ತಾಲೂಕು ಮುಖಂಡರಾದ ಕಿಶೋರ್ ಧೋತ್ರರೆ, ಕಸ್ತೂರಿ ಜಿ. ವಡ್ಟರ, ಮಂಜುಳಾ ತಡಸ, ಮಕಬುಲ್ ಅಹಮದ್, ಸಂಗೀತಾ ಬಗರಿಕಾರ್, ಹನಮಂತಪ್ಪ ವಾಲಗದ, ಗುತ್ತೆಮ್ಮ, ರೇಣುಕಾ ಕಾಳೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))