ಸಾರಾಂಶ
ನಾಗಮೋಹನದಾಸ್ ಆಯೋಗದ ಪರಿಶಿಷ್ಟ ಜಾತಿ ಒಳಮೀಸಲಾತಿ-2025ರ ವರದಿಯನ್ನು ಮರು ಪರಿಶೀಲಿಸಿ ಜಾರಿಗೆ ತರಬೇಕು ಎಂದು ಆಗ್ರಹಿಸಿ ಛಲವಾದಿ ಮಹಾಸಭಾ ತಾಲೂಕು ಘಟಕ, ಭೀಮವಾದ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ನಾಗಮೋಹನದಾಸ್ ಆಯೋಗದ ಪರಿಶಿಷ್ಟ ಜಾತಿ ಒಳಮೀಸಲಾತಿ-2025ರ ವರದಿಯನ್ನು ಮರು ಪರಿಶೀಲಿಸಿ ಜಾರಿಗೆ ತರಬೇಕು ಎಂದು ಆಗ್ರಹಿಸಿ ಛಲವಾದಿ ಮಹಾಸಭಾ ತಾಲೂಕು ಘಟಕ, ಭೀಮವಾದ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಅಂಬೇಡ್ಕರ್ ಉದ್ಯಾನವನದಿಂದ ಕೋರ್ಟ್ ಸರ್ಕಲ್, ಘಟಪ್ರಭಾ ರಸ್ತೆ ಮೂಲಕ ಮಿನಿವಿಧಾನ ಸೌಧದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿ, ನಾಗಮೋಹನದಾಸ್ ವರದಿ ವಿರುದ್ಧ ಘೋಷಣೆ ಕೂಗಿದರು. ಬಳಿಕ ತಹಸೀಲ್ದಾರರ ಮೂಲಕ ಸಿಎಂ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದ ಈ ಒಳಮೀಸಲಾತಿ ಸಮೀಕ್ಷೆ ವರದಿ ಅವೈಜ್ಞಾನಿಕವಾಗಿದೆ. ಬಲಗೈ ಜಾತಿಯಲ್ಲಿರುವ 49 ಮೂಲ ಉಪಜಾತಿಗಳನ್ನು ಒಂದೇ ಗುಂಪಿನಡಿ ಗುರುತಿಸಿಲ್ಲ. ಕೆಲವರನ್ನು ಶೇ.1ರ ಮೀಸಲಾತಿ ಗುಂಪಿಗೆ ಸೇರಿಸಿ ಏಕಪಕ್ಷೀಯ ವರದಿ ಸಿದ್ಧಪಡಿಸಲಾಗಿದೆ. ಹೊಲೆಯ ಸಮುದಾಯಕ್ಕೆ ಮರಣಶಾಸನದಂತಿರುವ ಈ ವರದಿಯನ್ನು ಯಥಾವತ್ತಾಗಿ ಜಾರಿ ಮಾಡದೇ ತಿರಸ್ಕರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಪುರಸಭೆ ಮಾಜಿ ಅಧ್ಯಕ್ಷ ಉದಯ ಹುಕ್ಕೇರಿ, ಮುಖಂಡರಾದ ಕೆಂಪಣ್ಣ ಶಿರಹಟ್ಟಿ, ಅಕ್ಷಯ ವೀರಮುಖ ಮಾತನಾಡಿ, ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ದುರದ್ದೇಶದಿಂದ ಅನ್ಯಾಯವೆಸಗಿ ಶೋಷಿಸಲಾಗುತ್ತಿದೆ. ಇದರಿಂದ ನಮ್ಮ ಮುಂದಿನ ಪೀಳಿಗೆಗೆ ತೊಂದರೆಯಾಗುತ್ತದೆ. ಈ ಸಮೀಕ್ಷೆಯಲ್ಲಿ ತಾಂತ್ರಿಕ ದೋಷಗಳು ಕಂಡು ಬಂದಿದ್ದು ಉಪ ಸಮಿತಿ ರಚಿಸಿ ಸಮೀಕ್ಷೆಯನ್ನು ಮರು ಪರಿಶೀಲನೆ ಮಾಡಿ ಬಲಗೈ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿ ತೀವೃ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.ಕೆಡಿಪಿ ಜಿಲ್ಲಾ ಸಮಿತಿ ಸದಸ್ಯ ಬಸವರಾಜ ಕೋಳಿ, ಮುಖಂಡ ಶ್ರೀಕಾಂತ ತಳವಾರ ಮಾತನಾಡಿ, ಈ ಸಮೀಕ್ಷೆಯಲ್ಲಿ ತಾರತಮ್ಯ ಮಾಡಲಾಗಿದೆ. ರಾಜ್ಯದಲ್ಲಿ ಛಲವಾದಿ ಸಮುದಾಯ ಹೆಚ್ಚಿಗೆ ಇದ್ದರೂ ಒಳಮೀಸಲಾತಿ ಪ್ರಮಾಣದಲ್ಲಿ ಛಲವಾದಿ ಸಮುದಾಯಕ್ಕೆ ದ್ರೋಹವಾಗಿದೆ. ಮುಖ್ಯಮಂತ್ರಿ ಮರು ಪರಿಶೀಲನೆ ನಡೆಸಿ, ನಮ್ಮ ಸಮಾಜಕ್ಕೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಭದ್ರತೆಗೆ ಸಹಕರಿಸಬೇಕು ಎಂದು ಒತ್ತಾಯಿಸಿದರು.ಮುಖಂಡರಾದ ಕಲ್ಲಪ್ಪ ಕಟ್ಟಿ, ಸುನೀಲ ಬೈರಣ್ಣವರ, ಶ್ರೀನಿವಾಸ ವ್ಯಾಪಾರಿ, ರಮೇಶ ಹುಂಜಿ, ಕೆ.ವೆಂಕಟೇಶ, ಕಿರಣ ಬಾಗೇವಾಡಿ, ಸತೀಶ ದಿನ್ನಿಮನಿ, ಮಂಜುನಾಥ ಪಡದಾರ, ಶಿವಾನಂದ ಮರಿನಾಯಿಕ, ಸಂಜು ಜೀವಣ್ಣವರ, ಅಶೋಕ ತಳವಾರ, ಗಣಪತಿ ಕಾಂಬಳೆ, ಚಿದಾನಂದ ಹಿರೇಕೆಂಚನವರ, ಮಾರುತಿ ಚಿಕ್ಕೋಡಿ, ವಿದ್ಯಾದರ ರಾಣವ್ವಗೋಳ, ವಾಸುದೇವ ನಿಂಗಪ್ಪಗೋಳ, ನಾಗೇಶ ವಾಳವಿ, ಅನಿಲ ಕಾಂಬಳೆ, ರೇಖಾ ಬಂಗಾರಿ, ರೇಖಾ ದಾದುಗೋಳ, ಕವಿತಾ ಬೇವಿನಕಟ್ಟಿ, ಮಂಗಲ ಮಾನೆ ಮತ್ತಿತರರು ಉಪಸ್ಥಿತರಿದ್ದರು.