ಯತ್ನಾಳ ಉಚ್ಛಾಟನೆ ನಿರ್ಧಾರ ಪುನರ್ ಪರಿಶೀಲಿಸಲು ಆಗ್ರಹಿಸಿ ಪ್ರತಿಭಟನೆ

| Published : Apr 02 2025, 01:00 AM IST

ಸಾರಾಂಶ

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಉಚ್ಚಾಟನೆ ಬಗ್ಗೆ ಹೈಕಮಾಂಡ್ ಪುನರ್ ಪರಿಶೀಲಿಸಬೇಕು, ಉತ್ತರ ಕರ್ನಾಟಕದ ಪ್ರಭಾವಿ ನಾಯಕರಾದ ಬಸನಗೌಡ ಯತ್ನಾಳರನ್ನು ಪಕ್ಷದ ಉಚ್ಚಾಟನೆ ಮಾಡುವುದರೊಂದಿಗೆ ಸಾಕಷ್ಟು ಕಾರ್ಯಕರ್ತರು ನೊಂದಿದ್ದಾರೆ ಎಂದು ಬಿಜೆಪಿ ಮುಖಂಡ ಲೋಕಣ್ಣ ಕತ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಉಚ್ಚಾಟನೆ ಬಗ್ಗೆ ಹೈಕಮಾಂಡ್ ಪುನರ್ ಪರಿಶೀಲಿಸಬೇಕು, ಉತ್ತರ ಕರ್ನಾಟಕದ ಪ್ರಭಾವಿ ನಾಯಕರಾದ ಬಸನಗೌಡ ಯತ್ನಾಳರನ್ನು ಪಕ್ಷದ ಉಚ್ಚಾಟನೆ ಮಾಡುವುದರೊಂದಿಗೆ ಸಾಕಷ್ಟು ಕಾರ್ಯಕರ್ತರು ನೊಂದಿದ್ದಾರೆ ಎಂದು ಬಿಜೆಪಿ ಮುಖಂಡ ಲೋಕಣ್ಣ ಕತ್ತಿ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ತಾಲೂಕಾಧ್ಯಕ್ಷರಿಗೆ ಮನವಿ ಸಲ್ಲಿಸುವ ವೇಳೆ ಮಾತನಾಡಿದ ಅವರು, ಬಿಜೆಪಿ ಕೇಂದ್ರದ ಶಿಸ್ತು ಸಮಿತಿ ಯತ್ನಾಳರನ್ನು ೬ ವರ್ಷ ಪಕ್ಷದಿಂದ ಉಚ್ಚಾಟನೆ ಮಾಡಿದ್ದು, ಕೇಂದ್ರದ ವರಿಷ್ಠರು ಈ ಕುರಿತು ತೆಗೆದುಕೊಂಡ ನಿರ್ಧಾರ ಮರು ಪರಿಶೀಲಿಸಬೇಕು, ನೇರ ನಿಷ್ಠುರವಾದಿ ಹಿರಿಯ ನಾಯಕರನ್ನು ಕಳೆದುಕೊಂಡರೆ ಪಕ್ಷಕ್ಕೆ ನಷ್ಟವಾಗಲಿದೆ, ಅದರಲ್ಲೂ ಲಿಂಗಾಯತ ಸಮುದಾಯದ, ಪ್ರಭಾವಿ ನಾಯಕರಾಗಿದ್ದು, ಕೇಂದ್ರದ ವರಿಷ್ಠರು ತೆಗೆದುಕೊಂಡ ನಿರ್ಧಾರ ಮರು ಪರಿಶೀಲಿಸಬೇಕು ಎನ್ನುವುದು ಎಲ್ಲರ ಅಭಿಪ್ರಾಯವಾಗಿದೆ ಎಂದು ಹೇಳಿದರು.

ಪಂಚಮಸಾಲಿ ಮುಖಂಡ ಪ್ರಕಾಶ ಚುಳಕಿ ಮಾತನಾಡಿ, ನೇರ, ನಿಷ್ಠುರವಾದಿ, ಹಿಂದುತ್ವವಾದಿ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಉಚ್ಚಾಟನೆ ತೀರ್ಮಾನ ಮರು ಪರಿಶೀಲಿಸಿ, ತೀರ್ಮಾನದಿಂದ ಹಿಂದೆ ಸರಿಯಬೇಕು, ಪಕ್ಷಕ್ಕಾಗುವ ಹಾನಿ ಸೇರಿದಂತೆ ಎಲ್ಲ ಕೋನಗಳಿಂದಲೂ ಮತ್ತೊಮ್ಮೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತವೆಂದು ಒತ್ತಾಯಿಸಿದರು.

ಬಿಜೆಪಿ ಮುಖಂಡ ಸಂತೋಷ ದೇಶಪಾಂಡೆ, ವಕೀಲರಾದ ಅರುಣ ಮುಧೋಳ ಮಾತನಾಡಿ, ಶಾಸಕ ಯತ್ನಾಳ ಅವರು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಪಕ್ಷ ವಿರೋಧಿ ಹೇಳಿಕೆಯನ್ನೂ ನೀಡಿಲ್ಲ, ಅವರನ್ನು ಉಚ್ಚಾಟನೆ ಮಾಡಿರುವುದು ಲಕ್ಷಾಂತರ ಬಿಜೆಪಿ ಕಾರ್ಯಕರ್ತರಿಗೆ ನೋವಾಗಿದೆ. ಕೂಡಲೇ ವರಿಷ್ಠರು ಉಚ್ಚಾಟನೆ ಆದೇಶ ಹಿಂಪಡೆಯಬೇಕು ಎಂದರು.

ಎಲ್ಲ ಮುಖಂಡರು ಸೇರಿ ಬಸವೇಶ್ವರ ಪತ್ರಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ತಾಲೂಕಾ ಬಿಜೆಪಿ ಅಧ್ಯಕ್ಷ ಸಂಗನಗೌಡ ಕಾತರಕಿ ಅವರಿಗೆ ಮನವಿ ಸಲ್ಲಿಸಲಾಯಿತು.

ಪಿಕೆಪಿಎಸ್ ಅಧ್ಯಕ್ಷ ಹೊಳಬಸು ಕಾಜಗಾರ್, ಪರಮಾನಂದ ಟೊಪನ್ನವರ, ರಮೇಶ ದೇವರಡ್ಡಿ, ಲೋಕಣ್ಣ ಗಡದಿನ್ನಿ, ವಿರೇಶ ಪಂಚಕಟ್ಟಿಮಠ, ಹಣಮಂತ ಹೂಗಾರ, ಸುರೇಶ ಹುಗ್ಗಿ, ದಶರಥ ದೊಡಮನಿ, ದುರ್ಗಪ್ಪ ಮಾದರ, ಭೀಮಶಿ ಅವರಾದಿ, ರವಿ ಚೌಧರಿ, ಚೇತನ್ ಕಣಬೂರ, ಮಹಾನಿಂಗ ಸಕ್ರಿ, ಸಂಜು ಅಪ್ಪನ್ನವರ, ಮಲ್ಲು ಹೆಗ್ಗಳಕಿ, ಸುಮಿತ್ ತುಂಗಳ, ಕಿರಣ ಗಣಪ್ಪಗೋಳ ಬಿಜೆಪಿ ಹಾಗೂ ಪಂಚಮಸಾಲಿ ಮುಖಂಡರು ಇದ್ದರು.