ಸಾರಾಂಶ
ಕಲುಷಿತ ನೀರು ಹರಿಬಿಡುವ ಅಕ್ಕಿಗಿರಣಿಗಳು: ಆರೋಗ್ಯದ ಮೇಲೆ ದುಷ್ಪರಿಣಾಮದ ಆತಂಕ
ಕನ್ನಡಪ್ರಭ ವಾರ್ತೆ ಕಾರಟಗಿ
ತಾಲೂಕಿನ ರವಿನಗರದಲ್ಲಿರುವ ಅಕ್ಕಿಗಿರಿಣಿಗಳಿಂದ ಹೊರ ಬಿಡುವ ತ್ಯಾಜ್ಯ-ಕಲುಷಿತ ನೀರು ವಿವಿಧ ಗ್ರಾಮಗಳಿಗೆ ಕುಡಿವ ಮತ್ತು ಬತ್ತದ ಗದ್ದೆಗಳಿಗೆ ಹರಿಯುವ ಕಾಲುವೆ ನೀರಿನಲ್ಲಿ ಸೇರಿ ಬೆಳೆ ಹಾಳಾಗುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೂಡಲೇ ಎಲ್ಲ ಅಕ್ಕಿಗಿರಿಣಿಗಳನ್ನು ನವಲಿ ಬಳಿಯ ರೈಸ್ ಟೆಕ್ ಪಾರ್ಕ್‌ಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಮತ್ತು ರಾಜ್ಯ ಮಾಹಿತಿ ಹಕ್ಕು ವೇದಿಕೆ ಕಾರ್ಯಕರ್ತರು ಗುರುವಾರ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.ತಾಲೂಕಿನ ಮರ್ಲಾನಹಳ್ಳಿ ಗ್ರಾಪಂ ವ್ಯಾಪ್ತಿಯ ರವಿನಗರ ಬಳಿ ಇರುವ ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ ಶಾಲೆ ಮುಂದೆ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ ಕೆಲ ಹೊತ್ತು ಆರ್.ಜಿ. ಮುಖ್ಯರಸ್ತೆಯಲ್ಲಿ ಧರಣಿ ನಡೆಸಿದರು. ಅಕ್ಕಿಗಿರಣಿಗಳಿಂದ ಹೊರ ಬರುವ ತ್ಯಾಜ್ಯ, ಕಲುಷಿತ ನೀರು ಸರಿಯಾಗಿ ಯಾವುದೇ ಮಾನದಂಡಗಳನ್ನು ಅನುಸರಿಸದೆ ಅಕ್ಕಿಗಿರಣಿಗಳು ಹೊರ ಹರಿ ಬಿಡುತ್ತವೆ. ತ್ಯಾಜ್ಯದ ನೀರು ಹರಿಯುತ್ತ ಕಾಲುವೆ ಸೇರಿ ಕಾಲುವೆಯ ನೀರನ್ನು ಸಹ ಕಲುಷಿತಗೊಳಿಸುತ್ತಿದೆ.
ಈ ನೀರನ್ನು ನಚ್ಚಿಕೊಂಡು ಸಾವಿರಾರೂ ಹೆಕ್ಟೇರ್ ಪ್ರದೇಶದಲ್ಲಿ ಬತ್ತ ಬೆಳೆಯುತ್ತಿದ್ದರೆ ಕೆಳಭಾಗದ ಕ್ಯಾಂಪ್ ಮತ್ತು ಹಳ್ಳಿಗಳ ನಿವಾಸಿಗಳನ್ನು ಇದನ್ನೇ ಕುಡಿಯುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಜಿಲ್ಲೆಯ ಅಧಿಕಾರಿಗಳು ಈ ಸತ್ಯ ಗೊತ್ತಿದ್ದರೂ ಯಾರೂ ಕ್ಯಾರೆ ಎನ್ನುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಕಲುಷಿತ ನೀರನ್ನು ಪ್ರದರ್ಶನ ಮಾಡಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಸಂಘದ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಡಮನಿ ಮಾತನಾಡಿ, ತಾಲೂಕಿನ ಮರ್ಲಾನಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ೬ ರೈಸ್‌ಮಿಲ್‌ಗಳಿಂದ ಈ ಕಲುಷಿತ ನೀರು ಮತ್ತು ಧೂಳಿನಿಂದ ಸ್ಥಳೀಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ, ಗ್ರಾಪಂಗೆ ದೂರು ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಈ ಕೂಡಲೇ ಜಿಲ್ಲಾಡಳಿತ ಸಮಸ್ಯೆ ಪರಿಹರಿಸಬೇಕು. ಸಚಿವ ಶಿವರಾಜ ತಂಗಡಗಿ ಅವರಿಗೆ ಮನವಿ ಕೊಟ್ಟರು ಪ್ರಯೋಜನವಾಗಿಲ್ಲ. ಮುಂದಿನ ನಾಲ್ಕೈದು ದಿನಗಳಲ್ಲಿ ತಹಸೀಲ್ದಾರ್ ಸ್ಥಳಕ್ಕೆ ಆಗಮಿಸಿ ಸಮಸ್ಯೆಗಳ ಬಗ್ಗೆ ಗ್ರಾಮಸಭೆ ಮಾಡಬೇಕು. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಶೀಘ್ರವೇ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಮಾಹಿತಿ ಹಕ್ಕು ವೇದಿಕೆ ಜಿಲ್ಲಾಧ್ಯಕ್ಷ ಶಿವನಾರಾಯಣ ಮಾತನಾಡಿದರು.ಸ್ಥಳಕ್ಕೆ ಭೇಟಿ ನೀಡಿದ ಪಿಐ ಸುಧೀರ್ ಬೆಂಕಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ನಾಲ್ಕು ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಹನುಮಯ್ಯ ನಾಯಕ್, ಹನುಮಂತಪ್ಪ, ಕರಿಯಪ್ಪ, ವಿ.ಬಿ. ಶ್ರೀನಿವಾಸ್, ಹಂಪೇಶ್ ಹರಿಗೋಲು, ಬಸವರಾಜ, ದೊಡ್ಡಪ್ಪಗೌಡ, ಪಂಪಣ್ಣ ನಾಯಕ, ಮರಿಸ್ವಾಮಿ, ಬೆಟ್ಟಪ್ಪ, ಅಜಯ್ ಕುಮಾರ್, ರಾಮಕೃಷ್ಣ, ಕೃಷ್ಣಮೂರ್ತಿ, ನಾಗರಾಜು, ಮಹೇಶ್, ರೆಡ್ಡಿ, ವೀರೇಶ್ ಸೇರಿ ಇತರರಿದ್ದರು.