ಸರ್ಕಾರ ಕೂಡಲೆ ಖರೀದಿ ಕೇಂದ್ರ ತೆರೆಯಲು ಮುಂದಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕುವ ಮೂಲಕ ಹೋರಾಟ ಮಾಡಲಾಗುವುದು ಎಂದು ರೈತ ಮುಖಂಡರು ಎಚ್ಚರಿಸಿದರು.
ಲಕ್ಷ್ಮೇಶ್ವರ: ಬೆಂಬಲ ಬೆಲೆ ಅಡಿಯಲ್ಲಿ ಗೋವಿನಜೋಳ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ವಿವಿಧ ರೈತಪರ ಹೋರಾಟಗಾರರು ಪಟ್ಟಣದ ಶಿಗ್ಲಿ ಕ್ರಾಸ್ ಬಳಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಬುಧವಾರ 12ನೇ ದಿನಕ್ಕೆ ಕಾಲಿಟ್ಟಿತು.
ಈ ವೇಳೆ ರೈತಪರ ಹೋರಾಟಗಾರರು ಪಹಣಿ ಚಳವಳಿ ನಡೆಸುವ ಮೂಲಕ ರೈತರು ಪಹಣಿಯಲ್ಲಿ ಗೋವಿನ ಜೋಳದ ಬೆಳೆ ಬೆಳೆದು ಬೀದಿಗೆ ಬಂದಿದ್ದೇವೆ. ಸರ್ಕಾರ ಈಗಲಾದರೂ ರೈತರ ಗೋವಿನ ಜೋಳದ ಬೆಳೆ ಖರೀದಿಗೆ ಮುಂದಾಗಿ ರೈತರ ಸಂಕಷ್ಟ ನೀಗಿಸುವ ಕಾರ್ಯ ಮಾಡಬೇಕು.ರೈತರ ಸಹನೆಗೆ ಒಂದು ಮಿತಿ ಇದೆ. ಅದನ್ನು ತಪ್ಪಾಗಿ ಅರ್ಥೈಸಿಕೊಂಡಲ್ಲಿ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ. ಸರ್ಕಾರ ಕೂಡಲೆ ಖರೀದಿ ಕೇಂದ್ರ ತೆರೆಯಲು ಮುಂದಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕುವ ಮೂಲಕ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ರೈತ ಮುಖಂಡ ಮಂಜುನಾಥ ಮಾಗಡಿ, ಎಂ.ಎಸ್. ದೊಡ್ಡಗೌಡರ, ನಾಗರಾಜ ಚಿಂಚಲಿ, ರವಿಕಾಂತ ಅಂಗಡಿ, ಶರಣು ಗೋಡಿ, ನೀಲಪ್ಪ ಶೆರಸೂರಿ, ಸುರೇಶ ಹಟ್ಟಿ, ಮುದಕಣ್ಣ ಗದ್ದಿ, ಬಸವರಾಜ ಹಿರೇಮನಿ, ದಾದಾಪೀರ್ ಮುಚಾಲೆ ಸೇರಿದಂತೆ ಅನೇಕರು ಇದ್ದರು. ಹೋರಾಟದ ವೇದಿಕೆಯಲ್ಲಿ ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು.ಅಕ್ರಮ ಪಡಿತರ ಅಕ್ಕಿ ವಶ
ಮುಳಗುಂದ: ಪಟ್ಟಣದ ಬಜಾರ್ ರಸ್ತೆಯ ಕಾಳು ಕಡಿ ವ್ಯಾಪಾರಿ ಸುನೀಲ ಬಸಪ್ಪ ಲಾಳಿ ಎಂಬವರ ಅಂಗಡಿ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 9 ಕ್ವಿಂಟಲ್ ಪಡಿತರ ಅಕ್ಕಿ ವಶಪಡಿಸಿಕೊಂಡಿದ್ದಾರೆ.ಮಂಗಳವಾರ ಸಂಜೆ ಖಚಿತ ಮಾಹಿತಿ ಆಧಾರದ ಮೇಲೆ ಜಿಲ್ಲಾ ಆಹಾರ ಇಲಾಖೆ ಉಪನಿರ್ದೇಶಕ ಎಂ.ಎಸ್. ರಮೇಶ ಹಾಗೂ ತಂಡ ದಾಳಿ ಮಾಡಿ, ಪಡಿತರ ಗ್ರಾಹಕರಿಂದ ಕಡಿಮೆ ದರಕ್ಕೆ ಪಡೆದು ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡಿ ಲಾಭ ಪಡೆದುಕೊಳ್ಳುತ್ತಿದ್ದ ಎಂದು ಪ್ರಕರಣದಲ್ಲಿ ದಾಖಲಿಸಲಾಗಿದೆ.ಸಂಗ್ರಹಿಸಿದ 9 ಕ್ವಿಂಟಲ್ ಪಡಿತರ ಅಕ್ಕಿಯ ಮೊತ್ತ ₹20,362 ಅಂದಾಜಿಸಲಾಗಿದೆ ಎಂದು ಜಿಲ್ಲಾ ಆಹಾರ ಇಲಾಖೆ ಉಪನಿರ್ದೇಶಕ ಎಂ.ಎಸ್. ರಮೇಶ ತಿಳಿಸಿದ್ದಾರೆ. ಈ ಕುರಿತು ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಮುಂದಿನ ಕ್ರಮ ಜರುಗಿಸಲಾಗಿದೆ.ದಾಳಿಯಲ್ಲಿ ಜಿಲ್ಲಾ ಆಹಾರ ಇಲಾಖೆ ಅಧಿಕಾರಿ ಎಂ.ಎಸ್. ರಮೇಶ, ಗದಗ ತಾಲೂಕು ಆಹಾರ ಇಲಾಖೆ ಅಧಿಕಾರಿ ಎಂ.ಎಸ್. ಹಿರೇಮಠ, ಪೊಲೀಸ್ ಸಿಬ್ಬಂದಿ ಗಂಗಾಧರ ಕರಲಿಂಗಣ್ಣನವರ, ಗ್ರಾಮ ಲೆಕ್ಕಾಧಿಕಾರಿ ಪ್ರಿಯಾಂಕಾ ನರಗುಂದ ಹಾಗೂ ಇತರೆ ಸಿಬ್ಬಂದಿ ಇದ್ದರು.