ಕುಕನೂರು: ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ರಾಜ್ಯ ದಲಿತ ಸಂಘರ್ಷ ಸಮಿತಿ–ಅಂಬೇಡ್ಕರ್ ಧ್ವನಿ, ಚಂದ್ರಕಾಂತ ಎಸ್. ಕಾದ್ರೋಳ್ಳಿ ಬಣದವರು ತಾಲೂಕಿನ ಚಂಡೂರು ಗ್ರಾಮದಲ್ಲಿ ದಲಿತರ ಜಮೀನಿನಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆ ಕಾರ್ಯ ಆಗುತ್ತಿದ್ದು, ಅದನ್ನು ನಿಲ್ಲಿಸಿ ದಲಿತರಿಗೆ ಭೂಮಿ ವಾಪಸ್ ಮಾಡುವಂತೆ ಆಗ್ರಹಿಸಿ ಮಂಗಳವಾರ ಅನಿರ್ಧಿಷ್ಠಾವಧಿ ಧರಣಿ ಕೈಗೊಂಡು ಪ್ರತಿಭಟಿಸಿದರು.
ಧರಣಿ ಉದ್ದೇಶಿಸಿ ಮಾತನಾಡಿದ ಸಮಿತಿಯ ಜಿಲ್ಲಾಧ್ಯಕ್ಷ ನಿಂಗಪ್ಪ ಬೆಣಕಲ್ಲ, ದಲಿತರ ಭೂಮಿಯಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆ ಕಾರ್ಯ ಮಾಡಬಾರದು.ತಾಲೂಕಿನ ಚಂಡೂರು ಗ್ರಾಮದ ದಲಿತ ರೈತರ ಭೂಮಿಯಲ್ಲಿ ಟೋರೆಂಟ್ ಸೋಲಾರ್ ಪವರ್ ಲಿಮಿಟೆಡ್ ಕಂಪನಿಯಿಂದ ಸೋಲಾರ್ ಪ್ಯಾನಲ್ ಅಳವಡಿಕೆ ಕಾರ್ಯ ಜರುಗುತ್ತಿದೆ. ಆದರೆ ಈ ಭೂಮಿ ದಲಿತ ವರ್ಗದವರಿಗೆ ಸೇರಿದ್ದಾಗಿದೆ. ಆದರೆ ನಿಜವಾದ ಭೂ ಮಾಲೀಕರ ಒಪ್ಪಿಗೆ ಪಡೆಯದೇ ಸೋಲಾರ್ ಅಳವಡಿಕೆ ಕಾರ್ಯ ಆಗುತ್ತಿದೆ. ಚಂಡೂರು ಗ್ರಾಮದ ದಲಿತ ರೈತ ಗೋವಿಂದಪ್ಪ ಹರಿಜನ ಅವರ ಪಿತ್ರಾರ್ಜಿತ ಆಸ್ತಿಯಾದ ಸರ್ವೆ ನಂ.76ರಲ್ಲಿ 17 ಎಕರೆ 39 ಗುಂಟೆ ಭೂಮಿಯು 1954ರಿಂದ 1979ರವರೆಗೆ ಗೋವಿಂದಪ್ಪ ಅವರ ಹೆಸರಿನಲ್ಲಿ ದಾಖಲಾಗಿತ್ತು. 1979ರ ನಂತರ ಯಾವುದೇ ಕಾನೂನುಬದ್ಧ ಖರೀದಿ ಪ್ರಕ್ರಿಯೆ, ಮ್ಯೂಟೇಷನ್ ಅಥವಾ ವಾರಸುದಾರರ ಅನುಮತಿ ಇಲ್ಲದೆ ಕರಿಯಪ್ಪ ಜ್ಯೋತಿ ಎಂಬುವವರು ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ.ಈ ಭೂಮಿಯಲ್ಲಿ ಟೋರೆಂಟ್ ಸೋಲಾರ್ ಪವರ್ ಲಿಮಿಟೆಡ್ ಕಂಪನಿಯಿಂದ ಸೋಲಾರ್ ಪ್ಯಾನೆಲ್ ಅಳವಡಿಕೆ ಕಾಮಗಾರಿ ನಡೆಯುತ್ತಿರುವುದು ದಲಿತ ರೈತರ ಹಕ್ಕುಗಳ ಮೇಲಿನ ಸ್ಪಷ್ಟ ಅನ್ಯಾಯವಾಗಿದೆ. ಮೂಲ ಭೂ ಮಾಲೀಕರ ಅನುಮತಿ ಇಲ್ಲದೆ ನಡೆಯುತ್ತಿರುವ ಕಾಮಗಾರಿ ತಕ್ಷಣವೇ ನಿಲ್ಲಿಸಿ, ಭೂಮಿಯ ದಾಖಲೆಗಳ ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನಾ ಸ್ಥಳಕ್ಕೆ ಉಪತಹಸೀಲ್ದಾರ ಮುರುಳೀಧರಾವ್ ಆಗಮಿಸಿ ಮನವಿ ಸ್ವೀಕರಿಸಿದರು. ತಹಸೀಲ್ದಾರರು ಬರಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ನ್ಯಾಯ ಸಿಗುವವರೆಗೂ ಧರಣಿ ಮುಂದುವರೆಯುವುದಾಗಿ ತಿಳಿಸಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ–ಅಂಬೇಡ್ಕರ್ ಧ್ವನಿ, ಚಂದ್ರಕಾಂತ ಎಸ್. ಕಾದ್ರೋಳ್ಳಿ ಬಣದ ಜಿಲ್ಲಾ ಕಾರ್ಯದರ್ಶಿ ಕರಿಯಪ್ಪ ಡಿ ಮಣ್ಣಿನವರ, ಜಿಲ್ಲಾ ಪ್ರಧಾನ ಸಂಚಾಲಕ ಮೈಲಾಪ್ಪ ಮಾದಿನೂರು, ಕುಕನೂರು ತಾಲೂಕಾಧ್ಯಕ್ಷ ಶ್ರೀಕಾಂತ ಹೊಸಮನಿ, ಕಾರ್ಯದರ್ಶಿ ಲೋಹಿತ್ ಬಳಗೇರಿ, ರೈತರಾದ ಈರಪ್ಪ ಹಿರೇಮನಿ, ಶಶಿಕಲಾ ಮಠದ, ಸಂಜೀವ ಮೂರ್ತಿ, ಯಲ್ಲಪ್ಪ ಮೆಳ್ಳಿಕೇರಿ, ಮಾರುತಿ ದೊಡ್ಡಮನಿ ಇತರರಿದ್ದರು.