ಸ್ಟೈಪಂಡ್ ಪರಿಷ್ಕರಣೆಗೆ ಒತ್ತಾಯಿಸಿ ಪ್ರತಿಭಟನೆ

| Published : Aug 13 2024, 12:46 AM IST

ಸಾರಾಂಶ

ಅಸಮರ್ಥನೀಯ ಸ್ಟೈಪಂಡ್ ನೀಡುತ್ತಿರುವುದನ್ನು ವಿರೋಧಿಸಿದರು. ಇತರೆ ರಾಜ್ಯಗಳಲ್ಲಿನ ವೈದ್ಯರು ಶೇ.೫೦ರಷ್ಟು ಹೆಚ್ಚುವರಿ ಸ್ಟೈಪಂಡ್ ಪಡೆಯುತ್ತಿದ್ದಾರೆ. ನಮಗೆ ಅತ್ಯಂತ ಕಡಿಮೆ ನೀಡಲಾಗುತ್ತಿದೆ. ಇದು ಹಣದುಬ್ಬರದಿಂದ ಉಲ್ಬಣಗೊಂಡ ಜೀವನ ವೆಚ್ಚಗಳು, ಶೈಕ್ಷಣಿಕ ವೆಚ್ಚಗಳು ಮತ್ತು ಕುಟುಂಬದ ಅಗತ್ಯಗಳನ್ನು ಸರಿದೂಗಿಸಲು ವಿಫಲವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದ ಎಲ್ಲಾ ಸರ್ಕಾರಿ ಕಾಲೇಜುಗಳು, ವೈದ್ಯಕೀಯ ಕಾಲೇಜುಗಳ ರೆಸಿಡೆಂಟ್ ಡಾಕ್ಟರ್ಸ್‌ಗಳಿಗೆ ಸ್ಟೈಪಂಡ್ ಪರಿಷ್ಕರಣೆಗಾಗಿ ಒತ್ತಾಯಿಸಿ ಇಂಟರ್ನ್ಸ್, ಸ್ನಾತಕೋತ್ತರ ಪದವೀಧರರು, ಸೂಪರ್ ಸ್ಪೆಷಾಲಿಟಿ ನಿವಾಸಿಗಳು ಮತ್ತು ಹಿರಿಯ ನಿವಾಸಿ ವೈದ್ಯರು ಮಿಮ್ಸ್ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಮಿಮ್ಸ್ ವೈದ್ಯಕೀಯ ಅಧೀಕ್ಷಕರ ಕಚೇರಿ ಬಳಿ ಸೇರಿದ ನಿವಾಸಿ ವೈದ್ಯರು, ಅಸಮರ್ಥನೀಯ ಸ್ಟೈಪಂಡ್ ನೀಡುತ್ತಿರುವುದನ್ನು ವಿರೋಧಿಸಿದರು. ಇತರೆ ರಾಜ್ಯಗಳಲ್ಲಿನ ವೈದ್ಯರು ಶೇ.೫೦ರಷ್ಟು ಹೆಚ್ಚುವರಿ ಸ್ಟೈಪಂಡ್ ಪಡೆಯುತ್ತಿದ್ದಾರೆ. ನಮಗೆ ಅತ್ಯಂತ ಕಡಿಮೆ ನೀಡಲಾಗುತ್ತಿದೆ. ಇದು ಹಣದುಬ್ಬರದಿಂದ ಉಲ್ಬಣಗೊಂಡ ಜೀವನ ವೆಚ್ಚಗಳು, ಶೈಕ್ಷಣಿಕ ವೆಚ್ಚಗಳು ಮತ್ತು ಕುಟುಂಬದ ಅಗತ್ಯಗಳನ್ನು ಸರಿದೂಗಿಸಲು ವಿಫಲವಾಗಿದೆ. ಅಗತ್ಯ ಸೇವೆಗಳನ್ನು ಒದಗಿಸುವ ಮತ್ತು ದೀರ್ಘಾವಧಿ ಕೆಲಸ ಮಾಡಿದರೂ, ನಮ್ಮ ಸ್ಟೈಪಂಡ್ಗಳು ಬದಲಾಗಿಲ್ಲ ಮತ್ತು ಸಾಕಷ್ಟಿಲ್ಲ. ಅಲ್ಲದೇ, ವೈದ್ಯಕೀಯ ಕೋರ್ಸುಗಳ ಶುಲ್ಕವು ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹೆಚ್ಚಿರುವುದಾಗಿ ಆರೋಪಿಸಿದರು.

ಸ್ಟೈಪಂಡ್ ಹೆಚ್ಚಳಕ್ಕೆ ವಿನಂತಿಸಿ ರಾಜ್ಯ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ನಾವು ಆ.೫ರಿಂದಲೇ ಶಾಂತಿಯುತ ಪ್ರತಿಭಟನೆ ಪ್ರಾರಂಭಿಸಿದ್ದೇವೆ. ಎಲ್ಲಾ ವೈದ್ಯಕೀಯ ಕಾಲೇಜುಗಳ ಡೀನ್‌ಗಳಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಪ್ರತಿಭಟನೆ ವೇಳೆ ಕಾಲೇಜು ಮತ್ತು ಆಸ್ಪತ್ರೆ ಆವರಣದಲ್ಲಿ ವೈದ್ಯರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದ್ದಾರೆ. ಆದರೂ ಸರ್ಕಾರ ಈ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಇಂದಿನಿಂದ ನಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ಇಂದಿನಿಂದ ತುರ್ತು ಸೇವೆಗಳನ್ನು ಹೊರತುಪಡಿಸಿ ಸಾಮಾನ್ಯ ರೋಗಿಗಳಿಗೆ ನಮ್ಮ ಸೇವೆ ನೀಡದೆ ಹಿಂದೆ ಸರಿಯುತ್ತಿದ್ದೇವೆ. ಇದರಿಂದ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಆಗುವ ಯಾವುದೇ ಅನಾನುಕೂಲಕ್ಕೆ ವಿಷಾದಿಸುತ್ತೇವೆ. ಈಗಲಾದರೂ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಅಸೋಸಿಯೇನ್ ಅಧ್ಯಕ್ಷ ಡಾ.ಸಿರೀಶ್ ಶಿವರಾಮಯ್ಯ, ಡಾ. ಆರ್.ಬಸಲಿಂಗಪ್ಪ, ಮುಕ್ಕುಪ್ಪಿ, ಡಾ.ಹೇಮಂತ್ ರೆಡ್ಡಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.