ಬಳ್ಳಾರಿ ಸೇರಿದಂತೆ ರಾಜ್ಯದಲ್ಲಿ ಈ ಬಾರಿ ಬಹುತೇಕ ರೈತರು ಮೆಕ್ಕೆಜೋಳ ಬೆಳೆ ಬೆಳೆದಿದ್ದಾರೆ.
ಬಳ್ಳಾರಿ: ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಿ, ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಕೃಷಿ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಬಳ್ಳಾರಿ ಸೇರಿದಂತೆ ರಾಜ್ಯದಲ್ಲಿ ಈ ಬಾರಿ ಬಹುತೇಕ ರೈತರು ಮೆಕ್ಕೆಜೋಳ ಬೆಳೆ ಬೆಳೆದಿದ್ದಾರೆ. ಈ ಭಾಗದಲ್ಲಿ ಇತ್ತೀಚಿಗೆ ಕೆಲವು ವರ್ಷಗಳಿಂದ ಮೆಣಸಿನಕಾಯಿ ಬೆಳೆಯುವ ರೈತರಿಗೆ ಸರಿಯಾದ ಬೆಲೆ ಸಿಗದೆ ಇರುವ ಕಾರಣ ಸಾಕಷ್ಟು ನಷ್ಟಕ್ಕೀಡಾದರು. ಆದ್ದರಿಂದ ಮೆಣಸಿನಕಾಯಿ ಬೆಳೆ ಬೆಳೆಯುವ ರೈತರು ಸಹ ಈ ಬಾರಿ ಮೆಕ್ಕೆಜೋಳ ಬೆಳೆ ಬೆಳೆದಿದ್ದಾರೆ. ಮುಂಗಾರಿನ ಪ್ರಾರಂಭದ ಹಂತದಲ್ಲಿ ಮೆಕ್ಕೆಜೋಳಕ್ಕೆ ಉತ್ತಮವಾಗಿದ್ದ ಬೆಲೆ ಇತ್ತು, ಆದರೆ ಈಗ ಬಹಳಷ್ಟು ಕುಸಿದಿದೆ. ರೈತರ ಉತ್ಪಾದನಾ ವೆಚ್ಚವೂ ಬಹಳಷ್ಟು ಹೆಚ್ಚಾಗಿರುವುದರಿಂದ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು.ಸರ್ಕಾರ ನೀಡುವ ಬೆಂಬಲ ಬೆಲೆಯು ರೈತರನ್ನು ಸ್ವಲ್ಪ ಸಂಕಷ್ಟಗಳಿಂದ ಪಾರು ಮಾಡುವಂತಿತ್ತು. ಆದರೆ ಸರ್ಕಾರದ ವತಿಯಿಂದ ನಡೆಯುವ ಬೆಳೆ ಖರೀದಿ ಸಹ ಸರಿಯಾದ ಸಮಯಕ್ಕೆ ನಡೆಯದಿರುವುದರಿಂದ ಖಾಸಗಿ ವ್ಯಾಪಾರಸ್ಥರಿಗೆ ಅನುಕೂಲವಾದಂತಿದೆ. ಹಾಗಾಗಿ ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸುವತ್ತ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಈ. ಹನುಮಂತಪ್ಪ ಹಾಗೂ ಜಿಲ್ಲಾಧ್ಯಕ್ಷ ಗೋವಿಂದ ಮಾತನಾಡಿದರು. ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಲ್‌ಗೆ ₹3 ಸಾವಿರ ಬೆಂಬಲ ಬೆಲೆ ನೀಡಬೇಕು.ಇಂತಿಷ್ಟೇ ಎಂದು ನಿಗದಿಗೊಳಿಸದೆ ರೈತರು ಬೆಳೆದ ಎಲ್ಲ ಮೆಕ್ಕೆಜೋಳ ಖರೀದಿ ಮಾಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಮುಖಂಡ ಕಲ್ಲುಕಂಬ ಪಂಪಾಪತಿ, ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ, ಕುರುಗೋಡು ತಾಲೂಕು ಕಾರ್ಯದರ್ಶಿ ಎಚ್.ಎನ್. ಬಸವರಾಜ್, ಸದಸ್ಯರಾದ ಮಾಬುಸಾಬ್, ಡಿ. ಕಾಳಿಂಗಪ್ಪ, ಮಹಾಲಿಂಗಪ್ಪ, ನಟರಾಜ್, ದಾನಪ್ಪ ಭಾಗವಹಿಸಿದ್ದರು.