ಎಸಿಪಿ ಚಂದನ್ ಅಮಾನತಿಗೆ ಒತ್ತಾಯಿಸಿ ಪ್ರತಿಭಟನೆ

| Published : Aug 05 2024, 12:31 AM IST

ಸಾರಾಂಶ

ಹಿಂದೂ ಕಾರ್ಯಕರ್ತರ ವಿರುದ್ಧ ದೌರ್ಜನ್ಯ ಎಸಗಿದ ಎಸಿಪಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ವಿವಿಧ ಹಿಂದೂಪರ ಸಂಘಟನೆಗಳಿಂದ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಬೆಂಗಳೂರಿಗೆ ಅಕ್ರಮ, ಕಳಪೆ ಮಾಂಸ ಸರಬರಾಜು ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಮೇಲೆ ದೌರ್ಜನ್ಯ ಎಸಗಿದ ಎಸಿಪಿ ಚಂದನ್ ಕುಮಾರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಇಲ್ಲಿನ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟಿಸಿ, ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಬೆಂಗಳೂರಿಗೆ ಕಳೆದ ಹಲವು ವರ್ಷಗಳಿಂದ ಅಕ್ರಮವಾಗಿ ಹೊರರಾಜ್ಯಗಳಿಂದ ಅಕ್ರಮ ಮಾಂಸ ಆಮದು ಮಾಡಿಕೊಂಡು ಆಹಾರ ಇಲಾಖೆ ನಿಯಮ ಉಲ್ಲಂಘಿಸಿ ನಗರದ ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ಸರಬರಾಜು ಮಾಡಲಾಗುತ್ತಿದೆ. ಸಾಗಾಣಿಕೆ ಪೂರೈಕೆ ಅವಧಿಯಲ್ಲಿ ಕೆಟ್ಟು ಹೋಗಿರುವ ಮಾಂಸವನ್ನು ವಿವಿಧ ರಾಸಾಯನಿಕಗಳಿಂದ ತೊಳೆದು ಸರಬರಾಜು ಮಾಡಲಾಗುತ್ತಿದೆ. ಇದು ಸಾರ್ವಜನಿಕರ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಮಾಂಸ ವ್ಯಾಪಾರಸ್ಥರು ಹಲವು ಬಾರಿ ಸರ್ಕಾರಕ್ಕೆ ದೂರು ನೀಡಿದ್ದರೂ ಸಹ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸಮಿತಿ ಪರಶುರಾಮ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜು.26ರಂದು ಬೆಂಗಳೂರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ರಾಜಸ್ಥಾನದಿಂದ ಪೂರೈಕೆಯಾದ 60 ಬಾಕ್ಸ್ ಅಕ್ರಮ ಮಾಂಸವನ್ನು ರೈಲ್ವೆ ಪಾರ್ಸೆಲ್ ಆಫೀಸ್‌ಗೆ ಕಳುಹಿಸದೇ ಬ್ಯಾಕ್ ಗೇಟ್‌ನಿಂದ ಡೆಲಿವರಿ ಮಾಡಲಾಗಿದೆ. ಸಾರ್ವಜನಿಕರು ಮಾಂಸದ ದುರ್ವಾಸನೆ ಬರುತ್ತಿದೆ, ಅದರ ಗುಣಮಟ್ಟವನ್ನು ಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿದಾಗ ಅಬ್ದುಲ್ ರಜಾಕ್ ಎಂಬ ವ್ಯಾಪಾರಿ ಗುಣಮಟ್ಟ ಪರಿಶೀಲಿಸಲು ಆಹಾರ ಇಲಾಖೆ ನಿರೀಕ್ಷಕರಿಗೆ ಅವಕಾಶ ನೀಡಿಲ್ಲ ಮತ್ತು ಅಧಿಕಾರಿಗಳಿಗೆ ಎಲ್ಲ ಬಾಕ್ಸ್ ಮಾದರಿ ತೆಗೆದುಕೊಳ್ಳಲು ಅಡ್ಡಿಪಡಿಸಿ ಆತ ಹೇಳಿದ ಕೇವಲ ನಾಲ್ಕು ಬಾಕ್ಸ್ ಸ್ಯಾಂಪಲ್ ಮಾತ್ರ ತೆಗೆದುಕೊಂಡು ಹೋಗಿದ್ದಾರೆ. ಉಳಿದ ಮಾಂಸದ ಬಾಕ್ಸ್ ವಶಪಡಿಸಿಕೊಳ್ಳದೇ ವಾಪಾಸ್‌ ಕಳುಹಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ. ಇದೊಂದು ಕೋಟ್ಯಂತರ ರುಪಾಯಿ ಅಕ್ರಮದ ದಂಧೆಯಾಗಿದ್ದು ಕೂಡಲೇ ಇದರಲ್ಲಿ ತೊಡಗಿದವರನ್ನು ಬಂಧಿಸಿ ಪ್ರಕರಣವನ್ನು ಉನ್ನತ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.

ರಾಷ್ಟ್ರರಕ್ಷಣಾ ಪಡೆ ಅಧ್ಯಕ್ಷ ಪುನಿತ್ ಕೆರೆಹಳ್ಳಿಯವರು ಕಾನೂನು ಚೌಕಟ್ಟಿನಲ್ಲಿ ಈ ಅಕ್ರಮ ಮಾಂಸದ ದಂಧೆ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ ಕಾರಣಕ್ಕೆ ಪೊಲೀಸರು ಅವರ ವಿರುದ್ಧ ಶಾಂತಿ ಭಂಗ, ಕರ್ತವ್ಯಕ್ಕೆ ಅಡ್ಡಿಪಡಿಸುವ ಪ್ರಕರಣ ದಾಖಲಿಸಿ ಬಂಧಿಸಿ ಠಾಣೆಯಲ್ಲಿ ಪೂರ್ಣ ನಗ್ನಗೊಳಿಸಿ ವಿಡಿಯೋ ಮಾಡಿ ಅಪಮಾನಿಸಲಾಗಿದೆ ಮತ್ತು ಎಸಿಪಿ ಚಂದನ್ ಕುಮಾರ್‌ ಬರ್ಬರ ಹಲ್ಲೆ ಮಾಡಿದ್ದು, ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ತಪ್ಪಿತಸ್ತ ಪೊಲೀಸ್ ಅಧಿಕಾರಿ ಅಮಾನತ್ತುಗೊಳಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಕೈಗೊಂಡ ನಿರ್ಧಾರ ತೀವ್ರ ಖಂಡನೀಯವಾಗಿದ್ದು ಪ್ರಭು ಶ್ರೀರಾಮಚಂದ್ರ ವನವಾಸದಲ್ಲಿ ರಾಮನಗರದ ಶ್ರೀರಾಮ ದೇವರ ಬೆಟ್ಟದಲ್ಲಿ ಸರಿಸುಮಾರು ಒಂದು ವರ್ಷ ಕಾಲ ವಾಸವಾಗಿದ್ದ ಐತಿಹಾಸಿಕ ಸ್ಥಳವಾಗಿದೆ. ಪವಿತ್ರ ಪಾವನ ಭೂಮಿಯಾಗಿದೆ. ಸ್ವತಃ ಸುಗ್ರೀವ ಸ್ಥಾಪಿಸಿದ ಶ್ರೀರಾಮ ಮೂರ್ತಿ ಮಂದಿರ ಸ್ಥಳದಲ್ಲಿದ್ದು ಇದರಿಂದಾಗಿ ರಾಮನಗರ ಎಂಬ ಹೆಸರು ಬಂದಿತು. ಆದರೆ ಸರ್ಕಾರ ಶ್ರೀರಾಮನ ಬಗೆಗಿನ ದ್ವೇಷದಿಂದ ರಾಮನಗರದ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಲು ಹೊರಟಿರುವುದು ಅತ್ಯಂತ ಖಂಡನೀಯವಾಗಿದ್ದು, ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಬಾರದು ಎಂದರು.

ಈ ವೇಳೆ ಸಮಿತಿ ಬಿ.ವಿ.ಮಂಜುನಾಥ್, ಪುರಸಭಾ ಸದಸ್ಯ ಪಾಲಾಕ್ಷಪ್ಪ ಭದ್ರಾಪುರ, ವಿಹಿಂಪ ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ್, ವೀರಶೈವ ಜಂಗಮ ಪುರೋಹಿತ ಸಂಘದ ಅಧ್ಯಕ್ಷ ಪ್ರಭುಸ್ವಾಮಿ, ಶಕ್ತಿ ಸಂಗ್ರಾಮ ವೇದಿಕೆ ಅಧ್ಯಕ್ಷ ಆನಂದ್, ಜಿಲ್ಲಾ ಕಾರ್ಯಾಧ್ಯಕ್ಷ ಶಿವಯ್ಯಶಾಸ್ತ್ರಿ, ರವಿನಾಯ್ಕ್, ಕೆ.ಆರ್.ಎಸ್ ಪಕ್ಷದ ಶಶಿಕುಮಾರ್, ಜನಜಾಗೃತಿ ವೇದಿಕೆ ಅಧ್ಯಕ್ಷ ಸುರೇಶ್ ಬೇವೂರು, ಪ್ರಕಾಶ್ ಜಿನ್ನು, ರವೀಂದ್ರ ಬುದ್ಯಶರತ್‌ ಮಡಿವಾಳ್, ವಿಶ್ವನಾಥ್, ಎಸ್.ವಿ.ಕೆ.ಮೂರ್ತಿ, ರಾಜ್ ಭಜರಂಗಿ, ಶರತ್, ಪ್ರದೀಪ್ ಇತರರಿದ್ದರು.