ಚಿಕ್ಕಮಗಳೂರುನಗರ ಹೊರವಲಯದ ಗವನಹಳ್ಳಿ ಬಳಿ ನಿರ್ಮಿಸುತ್ತಿರುವ ಸಿಎನ್‌ಜಿ ಗ್ಯಾಸ್ ಸ್ಟೇಷನ್‌ಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗರು ಸೋಮವಾರ ಪ್ರತಿಭಟನೆ ನಡೆಸಿದರು.

- ಗವನಹಳ್ಳಿ ಬಳಿ ಗ್ಯಾಸ್‌ ಸ್ಟೇಷನ್‌ ನಿರ್ಮಾಣಕ್ಕೆ ವಿರೋಧ, ಬಿಜೆಪಿ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ

--

- ಗ್ಯಾಸ್‌ ಬಂಕ್ ಬೇಡ ಎಂಬ ಫ್ಲೆಕ್ಸ್ ಪ್ರದರ್ಶನ

- ಕಾಮಗಾರಿ ಸ್ಥಗಿತಕ್ಕೆ ಪ್ರತಭಟನಾಕಾರರ ಘೋಷಣೆ ಕೂಗಿ ವಿರೋಧ

- ಗ್ಯಾಸ್ ಬಂಕ್ ನಿರ್ಮಾಣ ವಿರುದ್ಧ ಡಿಸಿಗೆ ತಕರಾರು ಅರ್ಜಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಗರ ಹೊರವಲಯದ ಗವನಹಳ್ಳಿ ಬಳಿ ನಿರ್ಮಿಸುತ್ತಿರುವ ಸಿಎನ್‌ಜಿ ಗ್ಯಾಸ್ ಸ್ಟೇಷನ್‌ಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗರು ಸೋಮವಾರ ಪ್ರತಿಭಟನೆ ನಡೆಸಿದರು.ಗ್ಯಾಸ್ ಸ್ಟೇಷನ್‌ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ ಹಲವಾರು ಬಿಜೆಪಿ ಮುಖಂಡರು, ಸ್ಥಳೀಯ ನಿವಾಸಿಗಳು ಗ್ಯಾಸ್‌ ಬಂಕ್ ಬೇಡ ಎಂಬ ಫ್ಲೆಕ್ಸ್ ಪ್ರದರ್ಶಿಸಿದರು. ಕಾಮಗಾರಿ ಸ್ಥಗಿತಕ್ಕೆ ಆಗ್ರಹಿಸಿ ಘೋಷಣೆ ಹಾಕಿದರು.

ಇದೇ ಸಂದರ್ಭದಲ್ಲಿ ಸ್ಥಳೀಯ ನಿವಾಸಿ ಕೇಶವ್ ಮಾತನಾಡಿ, ಗ್ಯಾಸ್ ಸ್ಟೇಷನ್ ನಿರ್ಮಿಸುತ್ತಿರುವ ಪಕ್ಕದಲ್ಲಿ ನನ್ನ ಮನೆ, ಸುತ್ತಮುತ್ತ ಸಾರ್ವಜನಿಕರ ಮನೆಗಳಿವೆ. ಹಿಂಭಾಗದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಸ್ಮಶಾನವಿದೆ. ಪಕ್ಕದಲ್ಲಿ ಸಾಮಿಲ್‌ ಇದ್ದು ಒಣಕಟ್ಟಿಗೆಗಳ ರಾಶಿಯೇ ಇದೆ. ಬೆಂಕಿ ಅವಘಡ ಉಂಟಾದಲ್ಲಿ ಇಡೀ ಊರೇ ಭಸ್ಮವಾಗುವ ಅಪಾಯವಿದೆ ಎಂದು ದೂರಿದರು.

ಸಿಎನ್‌ಜಿ ಕಂಪನಿಯವರು ಗ್ಯಾಸ್ ಬಂಕ್ ನಿರ್ಮಿಸುವುದರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ತಕರಾರು ಅರ್ಜಿ ಸಲ್ಲಿಸಿದ್ದೆ. ಅವರು ಒಂದು ವರ್ಷ ಕಳೆದರೂ ನಮಗೆ ಸಮಜಾಯಿಷಿ ನೀಡಲಿಲ್ಲ. ಇದೀಗ ಮಾಲೀಕರಿಗೆ ಗ್ಯಾಸ್ ಬಂಕ್ ನಿರ್ಮಿಸಲು ಅನುಮತಿ ನೀಡಿದ್ದಾರೆ. ಇದು ಕಾನೂನು ಬಾಹಿರ ಎಂದು ಆರೋಪಿಸಿದರು.

ಗ್ಯಾಸ್‌ ಬಂಕ್‌ ನಿರ್ಮಿಸುವ ಪಕ್ಕದಲ್ಲಿ ಯೋಗ ತರಗತಿ ಕೊಠಡಿ ಇದೆ. ಸ್ಮಶಾನ, ಸಾಮಿಲ್ ಇದ್ದು, ಸಾರ್ವಜನಿಕ ಹಿತದೃಷ್ಟಿ ಹಿನ್ನೆಲೆಯಲ್ಲಿ ಗ್ಯಾಸ್ ಸ್ಟೇಷನ್‌ಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ಕುರುವಂಗಿ ವೆಂಕಟೇಶ್ ಮಾತನಾಡಿ, ಗ್ಯಾಸ್ ಸ್ಟೇಷನ್ ನಿರ್ಮಿಸುತ್ತಿರುವ ಹಿಂಭಾಗದಲ್ಲಿ ಪರಿಶಿಷ್ಟ ಸಮುದಾಯದ ಸ್ಮಶಾನವಿದೆ. ಅಲ್ಲಿ ಕಳೆಬರ ದಹಿಸುವಾಗ ಬೆಂಕಿ ಅವಘಡ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನಾನುಕೂಲವಾದ ಗ್ಯಾಸ್ ಸ್ಟೇಷನ್‌ಗೆ ಅನುಮತಿ ನೀಡಬಾರದು. ಸ್ಥಳೀಯರ ವಿರೋಧ ಇರುವುದ ರಿಂದ ಗ್ಯಾಸ್‌ ಸ್ಟೇಷನ್‌ ನಿರ್ಮಾಣ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಶ್ರೀನಿವಾಸ್, ಕವಿತಾ ಶೇಖರ್, ಮುತ್ತಯ್ಯ, ಸಂತೋಷ್‌ ಕೊಟ್ಯಾನ್, ಆಲ್ದೂರು ಶಶಿ, ಅಮೃತೇಶ ಚನ್ನಕೇಶವ. ಶ್ಯಾಮ್ ವಿ. ಗೌಡ, ರೂಪ ಕುಮಾರ್, ರವಿಕುಮಾರ್ ಹಾಗೂ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು. 15 ಕೆಸಿಕೆಎಂ 1ಚಿಕ್ಕಮಗಳೂರು ನಗರ ಹೊರವಲಯದ ಗವನಹಳ್ಳಿ ಬಳಿ ನಿರ್ಮಿಸುತ್ತಿರುವ ಸಿಎನ್‌ಜಿ ಗ್ಯಾಸ್ ಸ್ಟೇಷನ್‌ಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು.