ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಹಾಸನ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ)ದ ಅಧ್ಯಕ್ಷ ಸ್ಥಾನವನ್ನು ಸೈಯ್ಯದ್ ತಾಜಿಂ ಎಂಬುವವರಿಗೆ ನೀಡಬೇಕೆಂದು ಒತ್ತಾಯಿಸಿ ಸಾವಿರಾರು ಜನ ಮುಸ್ಲಿಮರು ನಗರದ ಹೇಮಾವತಿ ಪ್ರತಿಮೆಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಮೆರವಣಿಗೆಯಲ್ಲಿ ಬಂದು ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಕಾಂಗ್ರೆಸ್ ಕಾರ್ಯಕರ್ತ ಕಬೀರ್ ಅಹಮದ್ ಮಾತನಾಡಿ, ಮುಸ್ಲಿಂ ಸಮುದಾಯವು ರಾಜಕೀಯ ಮತ್ತು ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಗಣನೀಯವಾಗಿ ಹಿಂದುಳಿದಿದೆ. ಈ ಸಮುದಾಯವು ಸಮಾಜದ ಮುಖ್ಯವಾಹಿನಿಯಲ್ಲಿ ಸಮಾನ ಭಾಗವಹಿಸಲು ಮತ್ತು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಏಳಿಗೆಯನ್ನು ಸಾಧಿಸಲು ರಾಜಕೀಯ ಅಧಿಕಾರವು ಅತ್ಯಗತ್ಯವಾಗಿದೆ. ಅಧಿಕಾರವಿಲ್ಲದ ಸಮುದಾಯವು ತನ್ನ ಧ್ವನಿಯನ್ನು ಪರಿಣಾಮಕಾರಿಯಾಗಿ ಎತ್ತಲು ಸಾಧ್ಯವಾಗದಿರುವುದರಿಂದ ನಾಯಕತ್ವದ ಕೊರತೆಯಿಂದಾಗಿ ಹಲವು ತೊಡಕುಗಳನ್ನು ಎದುರಿಸುತ್ತಿದೆ. ಈ ಕಾರಣಕ್ಕಾಗಿಯೇ ಅಧಿಕಾರ ವಿಕೇಂದ್ರೀಕರಣ ಮತ್ತು ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದು ಸಮುದಾಯವನ್ನು ಸಬಲಗೊಳಿಸಿ, ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದರು.
ವೀರ ಕನ್ನಡಿಗ ಟಿಪ್ಪು ಸೇನೆಯ ರಾಜ್ಯಾಧ್ಯಕ್ಷ ಅಕ್ಮಲ್ ಜಾವಿದ್ ಮಾತನಾಡಿ, ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯವು ರಾಜಕೀಯವಾಗಿ ನಿರಾಸಕ್ತಿಯ ಸ್ಥಿತಿಯಲ್ಲಿದೆ. ಕಾಂಗ್ರೆಸ್ ಪಕ್ಷಕ್ಕೆ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಸ್ಥಿರವಾದ ಬೆಂಬಲವನ್ನು ನೀಡಿದ್ದರೂ, ದುರದೃಷ್ಟವಶಾತ್ ಈ ಸಮುದಾಯಕ್ಕೆ ಜಿಲ್ಲೆಯಲ್ಲಿ ಯಾವುದೇ ಉನ್ನತ ರಾಜಕೀಯ ಅಥವಾ ಆಡಳಿತಾತ್ಮಕ ಹುದ್ದೆಗಳನ್ನು ನೀಡಲಾಗಿಲ್ಲ ಎಂದರು.ವಕೀಲ ಹಾಗೂ ಜನಪರ ಸಂಘಟನೆಯ ಮುಖಂಡ ಅನ್ಸದ್ ಪಾಳ್ಯ ಮತ್ತು ಸಾಮಾಜಿಕ ಕಾರ್ಯಕರ್ತ ಚಾಂದ್ ಪಾಷಾ, ಸೈಯದ್ ಇಲ್ಯಾಸ್, ಸರದಾರ್ ಪಾಷಾ, ಕಾಂಗ್ರೆಸ್ ಕಾರ್ಯಕರ್ತರ ರಘು, ವಿವಿಧ ಸಂಘಟನೆಯ ಮುಖಂಡರು, ಮಹಿಳಾ ಕಾರ್ಯಕರ್ತರು ಸಾವಿರಾರು ಜನರು ಭಾಗವಹಿಸಿದ್ದರು.