ಸ್ಮಶಾನ ಸ್ಥಳ ನಿಗದಿಗೆ ಆಗ್ರಹಿಸಿ ಪ್ರತಿಭಟನೆ

| Published : Oct 24 2024, 12:45 AM IST

ಸಾರಾಂಶ

ರಾಮನಗರ: ತಾಲೂಕಿನ ಹೊಂಬಯ್ಯನದೊಡ್ಡಿ ಗ್ರಾಮದಲ್ಲಿ ಸ್ಮಶಾನ ಸ್ಥಳಕ್ಕೆ ಆಗ್ರಹಿಸಿ ಬುಧವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ರಾಮನಗರ: ತಾಲೂಕಿನ ಹೊಂಬಯ್ಯನದೊಡ್ಡಿ ಗ್ರಾಮದಲ್ಲಿ ಸ್ಮಶಾನ ಸ್ಥಳಕ್ಕೆ ಆಗ್ರಹಿಸಿ ಬುಧವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಗ್ರಾಮಸ್ಥೆ ನಾಗಸುಂದರಮ್ಮ ಎಂಬುವವರು ಮೃತಪಟ್ಟಿದ್ದರು. ಶವ ಸಂಸ್ಕಾರ ನಡೆಸಲು ಗ್ರಾಮದಲ್ಲಿ ಸ್ಥಳ ಇಲ್ಲದ ಕಾರಣ, ಸ್ಮಶಾನಕ್ಕೆ ಸ್ಥಳ ನಿಗದಿ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾಗಡಿ-ರಾಮನಗರ ಮುಖ್ಯರಸ್ತೆಯನ್ನು ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ತಹಸೀಲ್ದಾರ್ ಆಗಮಿಸಬೇಕೆಂದು ಪಟ್ಟು ಹಿಡಿದರು.

ಈ ವೇಳೆ ಸ್ಥಳಕ್ಕೆ ತಹಸೀಲ್ದಾರ್ ತೇಜಶ್ವಿನಿ ಆಗಮಿಸಿ, ಸಮಸ್ಯೆ ಬಗೆಹರಿಸಿದರು. ಕೊನೆಯದಾಗಿ ಗ್ರಾಮದಲ್ಲಿ ಸರ್ವೆ ನಂಬರ್ 24ರ ಸರ್ಕಾರಿ ಜಮೀನಿನಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.

ಗ್ರಾಮಸ್ಥ ಪುನೀತ್ ಮಾತನಾಡಿ, ಹೊಂಬಯ್ಯನದೊಡ್ಡಿ ಗ್ರಾಮದಲ್ಲಿ ಸ್ಥಳದ ಸಮಸ್ಯೆ ಕಳೆದ 15 ವರ್ಷಗಳಿಂದ ಇವೆ. ಇದನ್ನು ಬಗೆಹರಿಸಿಕೊಡುವಂತೆ ಆಗ್ರಹಿಸಿ ಕಳೆದ ಹಲವು ತಿಂಗಳಿನಿಂದ ತಾಲೂಕು ಆಡಳಿತ ಹಾಗೂ ತಹಸೀಲ್ದಾರ್ ಅವರನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿದ್ದೇವೆ. ಆದರೆ, ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ವ್ಯಕ್ತವಾಗಿರಲಿಲ್ಲ ಎಂದು ಹೇಳಿದರು.

ಗ್ರಾಮಸ್ಥೆ ನಾಗ ಸುಂದರಮ್ಮ ಮೃತಪಟ್ಟಿದ್ದರು. ಇವರಿಗೆ ಸ್ವಂತ ಜಮೀನು ಸಹ ಇರಲಿಲ್ಲ. ಅಂತ್ಯ ಸಂಸ್ಕಾರಕ್ಕಾಗಿ ಮಣ್ಣುಗುಡ್ಡೆಗೆ ತೆರಳಬೇಕಿತ್ತು. ಈ ಸ್ಥಳವೂ ಗ್ರಾಮದಿಂದ ಸುಮಾರು 3 ಕಿಲೋ ಮೀಟರ್ ದೂರವಿದೆ. ಹಾಗಾಗಿ ಗ್ರಾಮಸ್ಥರೆಲ್ಲೂ ಸೇರಿ ಸ್ಮಶಾನ ಭೂಮಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಆಗಮಿಸದೇ ಇದ್ದಿದ್ದರೇ, ಡಿಸಿ ಕಚೇರಿಗೆ ಮೃತ ದೇಹವನ್ನು ಕೊಂಡೊಯ್ಯಲು ನಿರ್ಧರಿಸಿದ್ದೆವು. ಬಳಿಕ ಸ್ಥಳಕ್ಕೆ ತಹಸೀಲ್ದಾರ್ ತೇಜಸ್ವಿನಿ ಆಗಮಿಸಿ ಸ್ಥಳ ಪರಿಶೀಲಿಸಿದರು. ಸರ್ಕಾರಿ ಜಮೀನಿನಲ್ಲಿಯೇ ಶವ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಟ್ಟರು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ವೆಂಕಟೇಶ್, ಶಿವಣ್ಣ, ಅಪ್ಪಾಜಿ, ಪುಟ್ಟರಾಜು, ಶಂಕರ್, ಸೃಜನ್, ಸಿದ್ದರಾಜು, ಮಹದೇವ, ಸಂತೋಷ್ ಇತರರಿದ್ದರು.

23ಕೆಆರ್ ಎಂಎನ್ 3.ಜೆಪಿಜಿ

ರಾಮನಗರ ತಾಲೂಕಿನ ಹೊಂಬಯ್ಯನದೊಡ್ಡಿ ಗ್ರಾಮದಲ್ಲಿ ಸ್ಮಶಾನ ಸ್ಥಳಕ್ಕೆ ಆಗ್ರಹಿಸಿ ಬುಧವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.