ಪ್ರಜ್ವಲ್, ರೇವಣ್ಣ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ

| Published : May 01 2024, 01:23 AM IST

ಪ್ರಜ್ವಲ್, ರೇವಣ್ಣ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರ ಖಾಸಗಿ ಮತ್ತು ಲೈಂಗಿನ ಚಿತ್ರಗಳು ಮತ್ತು ದೃಶ್ಯಗಳನ್ನು ಪೆನ್‌ಡ್ರೈವ್ ಮುಖಾಂತರ ಸಾರ್ವಜನಿಕರಿಗೆ ವಿತರಿಸಿ ವಾಟ್ಸ್‌ಆಪ್ ಮುಖಾಂತರ ಎಲ್ಲೆಡೆ ಹರಡಲು ಕಾರಣವಾರವರನ್ನು ಪತ್ತೆಹಚ್ಚಿ ಅವರ ಮೇಲೆ ಪ್ರಕರಣ ದಾಖಲಿಸಬೇಕು,

ಕನ್ನಡಪ್ರಭ ವಾರ್ತೆ ಕೋಲಾರಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಹೊತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಎಚ್.ಡಿ. ರೇವಣ್ಣರನ್ನು ಬಂಧಿಸಿ ಸೂಕ್ತ ತನಿಖೆ ನಡೆಸುವಂತೆ ಹಾಗೂ ಸಂತ್ರಸ್ತ ಮಹಿಳೆಯರನ್ನು ರಕ್ಷಿಸುವಂತೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳು ಮಂಗಳವಾರ ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು.ಪ್ರಕರಣಕ್ಕೆ ಸಂಬಂಧಿಸಿದಂತೆ ಪೆನ್‌ಡ್ರೈವ್‌ಗಳಲ್ಲಿ ಪ್ರತಿದಿನ ಹೊಸ ಹೊಸ ಅಶ್ಲೀಲ ದೃಶ್ಯಗಳನ್ನು ಬಿಡುಗಡೆ ಮಾಡಲಾಗುತ್ತಿದೆ, ಈ ಚಿತ್ರಗಳು ಮತ್ತು ದೃಶ್ಯಗಳಲ್ಲಿರುವ ಮಹಿಳೆಯರ ಖಾಸಗಿ ಮತ್ತು ಕೌಟುಂಬಿಕ ಬದುಕು ಛಿದ್ರವಾಗಿದೆ. ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಶಾಸಕ ಎಚ್.ಡಿ.ರೇವಣ್ಣ ಅ‍ವರನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.

ಎಸ್‌ಐಟಿ ರಚನೆ ವಿಳಂಬ

ಸಾರ್ವಜನಿಕವಾಗಿ ಇಷ್ಟೇಲ್ಲ ಅನಾಹುತ ನಡೆದು ಆತಂಕ ಹರಡಿರುವಾಗ ಈ ಕುರಿತು ತಡವಾಗಿಯಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಇಡೀ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಯಾರ ಒತ್ತಡಗಳಿಗೂ ಮಣಿಯದೆ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು. ರಾಜಕೀಯ ಅಧಿಕಾರ, ಆಸ್ತಿ ಮತ್ತು ಜಾತಿಯ ಮದದಿಂದ ಮೆರೆಯುತ್ತಿರುವ ಪ್ರಜ್ವಲ್ ರೇವಣ್ಣ ಮಹಿಳೆಯರನ್ನು ತನ್ನ ಕಾಮದಾಹಕ್ಕೆ ನಿರಂತರವಾಗಿ ಬಳಸಿಕೊಂಡಿದ್ದಾನೆ. ಅಲ್ಲದೆ ಆ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಮಹಿಳೆಯರನ್ನು ಈ ಕುಕೃತ್ಯಕ್ಕೆ ಅವನು ತನಗಿರುವ ರಾಜಕೀಯ ಅಧಿಕಾರ ಬಳಸಿಕೊಂಡಿದ್ದಾನೆ ಎನ್ನುವುದೂ ಸ್ಪಷ್ಟವಾಗಿದೆ, ತನ್ನ ಕಾಮತೃಷೆಗಾಗಿ ನೂರಾರು ಮಹಿಳೆಯರನ್ನು ಬಳಸಿಕೊಂಡಿರುವ ಆರೋಪ ಎಲ್ಲೆಡೆ ಕೇಳಿ ಬರುತ್ತಿದೆ ಎಂದರು.

ವಿಕೃತ ಮನಸ್ಸಿನ ಪ್ರಜ್ವಲ್‌

ಈ ಅಶ್ಲೀಲ ದೃಶ್ಯಗಳಲ್ಲಿ ಜೆಡಿಎಸ್‌ ಮಹಿಳಾ ಮುಖಂಡರು, ಕಾರ್ಯಕರ್ತೆಯರು, ಖಾಸಗಿ ಮತ್ತು ಸರ್ಕಾರಿ ಮಹಿಳಾ ನೌಕರರು ಹಾಗೂ ಅಧಿಕಾರಿಗಳು ಜೊತೆಗೆ ಮಹಿಳಾ ಪೊಲೀಸ್‌ ಅಧಿಕಾರಿಗಳೊಂದಿಗೆ ನಡೆಸಿರುವ ಲೈಂಗಿಕ ಚಟುವಟಿಕೆಗಳೂ ಇವೆ ಎನ್ನಲಾಗುತ್ತಿದೆ. ಇಂತಹ ವಿಕೃತ ಮನಸ್ಸಿನ ವ್ಯಕ್ತಿ ಜನಪ್ರತಿನಿಧಿಯಾಗಿ ಇರುವುದಿರಲಿ ನಾಗರಿಕ ಸಮಾಜದಲ್ಲಿ ಮುಕ್ತವಾಗಿ ಓಡಾಡಿಕೊಂಡಿರುವುದು ಬಹಳ ಅಪಾಯಕಾರಿ ಎಂದು ಎಚ್ಚರಿಸಿದರು.

ವಿದೇಶಕ್ಕೆ ಪರಾರಿಯಾಗಿರುವ ಆರೋಪಿ ಪ್ರಜ್ವಲ್ ರೇವಣ್ಣನನ್ನು ಪತ್ತೆ ಮಾಡಲು ಪ್ರಧಾನಿ ಮೋದಿಯವರು ವಿಶೇಷ ತನಿಖಾ ತಂಡ ರಚಿಸಬೇಕು. ಆದರೆ ಯಾವುದೋ ಒತ್ತಡಗಳ ಕಾರಣ, ಕೆಲಸ ಕಾರ್ಯ ಮತ್ತು ಪ್ರಯೋಜನದ ಕಾರಣಕ್ಕೋ ಆತನಿಂದ ಲೈಂಗಿಕವಾಗಿ ಬಳಕೆಯಾಗಿರುವ ಮಹಿಳೆಯರ ವೀಡಿಯೋ ದೃಶ್ಯಗಳು ಬಹಿರಂಗವಾಗಿರುವ ಕಾರಣ ಈ ಮಹಿಳೆಯರು ಮತ್ತವರ ಕುಟುಂಬದ ಗೋಳು ಮಾತ್ರ ಹೇಳತೀರದಾಗಿದೆ ಎಂದು ಹೇಳಿದರು.ದೇವರಾಜೇಗೌಡನ ವಿಚಾರಣೆ ನಡೆಸಿ

ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಹೊಳೆನರಸಿಪುರದ ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ಎಂಬುವವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಬಳಿ ೨ ನಾವಿರಕ್ಕೂ ಹೆಚ್ಚು ಫೋಟೋ, ವೀಡಿಯೋಗಳಿವೆ. ಆ ಕುರಿತು ಬಿಜೆಪಿ ಹೈಕಮಾಂಡ್ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ. ಪೋಲೀಸರು ಕೂಡಲೇ ಅವರನ್ನು ವಿಚಾರಣೆಗೆ ಒಳಪಡಿಸಿದಲ್ಲಿ ಆ ವೀಡಿಯೋಗಳ ಹಿಂದೆ ಇರುವ ವ್ಯಕ್ತಿ ಯಾರೆಂಬುದು ಬಹಿರಂಗವಾಗುತ್ತದೆ ಎಂದರು.ಪ್ರಚಾರ ಮಾಡಿದವರ ಪತ್ತೆಗೆ ಆಗ್ರಹ

ಮಹಿಳೆಯರ ಖಾಸಗಿ ಮತ್ತು ಲೈಂಗಿನ ಚಿತ್ರಗಳು ಮತ್ತು ದೃಶ್ಯಗಳನ್ನು ಪೆನ್‌ಡ್ರೈವ್ ಮುಖಾಂತರ ಸಾರ್ವಜನಿಕರಿಗೆ ವಿತರಿಸಿ ವಾಟ್ಸ್‌ಆಪ್ ಮುಖಾಂತರ ಎಲ್ಲೆಡೆ ಹರಡಲು ಕಾರಣವಾರವರನ್ನು ಪತ್ತೆಹಚ್ಚಿ ಅವರ ಮೇಲೆ ಪ್ರಕರಣ ದಾಖಲಿಸಬೇಕು, ಮೊಬೈಲ್ ಮತ್ತು ಪೆನ್ ಡ್ರೈವ್‌ಗಳನ್ನು ವಶಪಡಿಸಿಕೊಳ್ಳಬೇಕು ಹಾಗೂ ಅವುಗಳು ಸಾರ್ವಜನಿಕವಾಗಿ ಮತ್ತಷ್ಟು ಹಂಚಿಕೆಯಾಗದಂತೆ ತಡೆಗಟ್ಟ ಅವುಗಳನ್ನು ನಾಶಪಡಿಸಬೇಕು ಎಂದರು.

ಇಡೀ ಪ್ರಕರಣದ ತನಿಖೆಯಲ್ಲಿ ಹಾಗೂ ಆರೋಪಿಗಳನ್ನು ಬಂಧಿಸುವ ಯಾವುದೇ ರಾಜಕೀಯ ಪ್ರಭಾವ ಹಾಗೂ ಒತ್ತಡಕ್ಕೆ ಒಳಗಾಗದಂತೆ ಎಸ್‌ಐಟಿ ಕೆಲಸ ಮಾಡುವುದನ್ನು ರಾಜ್ಯ ಸರ್ಕಾರ ಖಾತ್ರಿಪಡಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಗತಿ ಪರ ಸಂಘಟನೆಗಳ ಮುಖಂಡರಾದ ಗಮನ ಮಹಿಳಾ ಸಂಘದ ಶಾಂತಮ್ಮ, ಈನೆಲ ಈಜಲ ವೆಂಕಟಾಚಲಪತಿ, ಯುವ ಜಾಗೃತಿ ಸಮಿತಿ ಸುಬ್ರಮಣಿ, ವಕೀಲ ಸತೀಶ್, ರೈತ ಸಂಘದ ನಳಿನಿಗೌಡ, ಗಮನ ಲಕ್ಷ್ಮಿ, ಹೂಹಳ್ಳಿ ನಾಗರಾಜ್, ಡಿ.ವೈ.ಫ್.ಐ ಸೌಮ್ಯ ಕೆ.ಎಂ, ಗ್ರೇಸಿ ಪ್ರಕ್ರಿಯೆ, ನವ್ಯ ಆರ್, ಆಗ್ರಹಾರ ವೀಣಾ, ಕೃಷ್ಣಮೂರ್ತಿ, ಮಲ್ಲಿಕಾ, ಡಾ.ನೇತ್ರಾವತಿ, ವೆಂಕಟರಾಜಮ್ಮ ಇದ್ದರು.