ಸಾರಾಂಶ
ಹಾವೇರಿ: ಮಾಜಿ ಸಂಸದ ರಮೇಶ್ ಕತ್ತಿ ವಾಲ್ಮೀಕಿ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ನೀಡಿರುವ ಹೇಳಿಕೆ ಖಂಡಿಸಿ, ಕತ್ತಿ ಅವರನ್ನು ಬಂಧಿಸುವಂತೆ ಆಗ್ರಹಿಸಿ ನಗರದಲ್ಲಿ ಸೋಮವಾರ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದಡಿ ನೂರಾರು ವಾಲ್ಮೀಕಿ ಸಮಾಜ ಬಾಂಧವರು ಬೃಹತ್ ಪ್ರತಿಭಟನೆ ನಡೆಸಿದರು.ಇಲ್ಲಿನ ಪ್ರವಾಸಿ ಮಂದಿರದಿಂದ ಹಳೆ ಪಿಬಿ ರಸ್ತೆಯಲ್ಲಿರುವ ವಾಲ್ಮೀಕಿ ಸರ್ಕಲ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವಾಲ್ಮೀಕಿ ಸಮಾಜದ ಪ್ರಮುಖರು, ಮಾಜಿ ಸಂಸದ ರಮೇಶ್ ಕತ್ತಿ ಪ್ರತಿಕೃತಿಯನ್ನು ಹಿಡಿದು ಕತ್ತಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕತ್ತಿ ಪ್ರತಿಕೃತಿ ದಹನಕ್ಕೆ ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ವಾಲ್ಮೀಕಿ ಸಮಾಜದ ಮುಖಂಡರ ನಡುವೆ ವಾಗ್ವಾದಗಳು ನಡೆದವು. ಮಾಜಿ ಸಂಸದ ರಮೇಶ ಕತ್ತಿ ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ತಮ್ಮ ಸ್ಥಾನದ ಅರಿವಿಲ್ಲದೆ ಹಗುರುವಾಗಿ ಮಾತನಾಡಿರುವುದು ಖಂಡನೀಯ ಎಂದು ಕಿಡಿಕಾರಿದರು.ಪೊಲೀಸರು ಕತ್ತಿ ಪ್ರತಿಕೃತಿ ದಹಿಸಲು ಅವಕಾಶ ನೀಡಲಿಲ್ಲ. ಈ ವೇಳೆ ಪೊಲೀಸರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ರಮೇಶ್ ಕತ್ತಿ ಭಾವಚಿತ್ರಕ್ಕೆ ಚಪ್ಪಲಿ ಏಟು ಹೊಡೆದು, ತಕ್ಷಣವೇ ಅವರ ಬಂಧನ ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.ಈ ವೇಳೆ ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ ಆನವಟ್ಟಿ ಮಾತನಾಡಿ, ಭಾನುವಾರ ಬೆಳಗಾವಿ ನಗರದಲ್ಲಿ ನಡೆದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಗಳ ಮತದಾನದ ವೇಳೆ ತಮ್ಮ ಬೆಂಬಲಿಗರೊಂದಿಗೆ ಮಾತನಾಡುತ್ತಿದ್ದಾಗ ರಮೇಶ ಕತ್ತಿ, ಜಾರಕಿಹೊಳಿ ಸಹೋದರರನ್ನು ಟೀಕಿಸುವ ಸಂದರ್ಭ ವಾಲ್ಮೀಕಿ ಸಮುದಾಯದ ವಿರುದ್ಧ ಅವಾಚ್ಯ ಪದಗಳನ್ನು ಬಳಸಿ ಮಾತನಾಡಿದ್ದಾರೆ. ವಾಲ್ಮೀಕಿ, ನಾಯಕ ಬೇಡ ಜನಾಂಗದ ಬಗ್ಗೆ ಕತ್ತಿ ಅವಹೇಳನಕಾರಿ ಪದಗಳನ್ನು ಬಳಸಿ ನಿಂದನೆ ಮಾಡಿದ್ದಾರೆ. ಅವರನ್ನು ತಕ್ಷಣ ಬಂಧಿಸಬೇಕು, ಇಲ್ಲದೇ ಹೋದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯ ನಂತರ ಪ್ರತಿಭಟನಾಕಾರರು ಶಹರ ಪೊಲೀಸ್‌ಠಾಣೆಗೆ ತೆರಳಿ ಮಾಜಿ ಸಂಸದ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ ವಿರುದ್ಧ ದೂರು ದಾಖಲಿಸಿದರು.ಅಶೋಕ ಹರನಗೇರಿ, ನಾಗರಾಜ್ ಬಡಮ್ಮನವರ್, ಮಾಲತೇಶ್, ಮಂಜುನಾಥ್ ಮುಗದೂರು, ಜಗದೀಶ್ ಕೊಂಡೆಮ್ಮನವರ್, ಉದಯ್ ಕುಮಾರ್, ಮಂಜು, ಜುಂಜಪ್ಪ ದೊಡ್ಮನಿ, ಶಿವಾನಂದ್ ನಡುವಿನಮನಿ, ಉಮೇಶ್ ಹುಳ್ಳಿಕುಪ್ಪಿ, ಸುನಿಲ್ ನಡುವಿನಮನಿ, ಮಂಜಪ್ಪ ನೆಲೋಗಲ್, ರಮೇಶ್, ವೆಂಕಣ್ಣನವರ್, ರಮೇಶ ಕಲಿವಾಳ, ಭೀಮಜ್ಜ ಬಣಕಾರ್, ಸಚಿನ್ ಜಲ್ಲಾಪುರ್, ಮಾಲತೇಶ್ ಮರಾಠಿ, ಅರುಣ್ ದಾಸ್‌ಅವರ, ಹನುಮಂತ ಹುಗ್ಗೆನವರ್, ಅಭಿಜಿತ ರಿತ್ತಿ, ಮನೋಜ್ ಆರ್, ನಾಗರಾಜ್ ನಡುವಿನಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.