ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಮಾತನಾಡಿ, ವಿದ್ಯಾರ್ಥಿ, ಯುವಜನರ ನೈಜ ಸಮಸ್ಯೆಗಳನ್ನು ಮರೆಮಾಚಲಾಗುತ್ತಿದೆ. ನಿರಂತರವಾಗಿ ಹೆಚ್ಚಳವಾಗುತ್ತಿರುವ ಬೆಲೆ ಏರಿಕೆಗೆ ಕಡಿವಾಣ ಹಾಕಲು ಸಾಧ್ಯವಾಗದ ಸರ್ಕಾರ ಮತದಾನದ ಹಕ್ಕನ್ನು ಕಸಿಯುವ ಕೆಲಸವನ್ನು ಮಾಡುತ್ತಿದೆ. ಕೇಂದ್ರ ಸರ್ಕಾರದ ಜನವಿರೊಧಿ ನೀತಿಗಳು ಜನರಿಗೆ ಅರ್ಥವಾಗುತ್ತಿದ್ದು ಅಧಿಕಾರದಿಂದ ಕೆಳಗಿಳಿಯುವ ಸಮಯ ದೂರವಿಲ್ಲ ಎಂದರು.
ಕನ್ನಡಪ್ರಭ ವಾರ್ತೆ ತುಮಕೂರು
ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಲು ಹಾಗೂ ಎಸ್ಐಆರ್ ರದ್ದು ಪಡಿಸಲು ಒತ್ತಾಯಿಸಿ ನವದೆಹಲಿಯಲ್ಲಿ ಸಿಜೆಪಿ ಮತ್ತಿತರೆ ಎಡ ಮತ್ತು ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಯುವಜನ ಸಂಘಟನೆಗಳು ಕರೆ ನೀಡಿದ್ದ ಜಂತರ್ ಮಂತರ್ ಬೃಹತ್ ಪ್ರತಿಭಟನಾ ಹೋರಾಟವನ್ನು ಮೊಟಕುಗೊಳಿಸುವ ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಖಂಡಿಸಿ ತುಮಕೂರಿನ ಬಿಎಸ್‌ಎನ್‌ಎಲ್ ಕಚೇರಿ ಎದುರು ಪ್ರಗತಿಪರ ಸಂಘಟನೆಗಳು ಮತ್ತು ಜಾತ್ಯತೀತ ಪಕ್ಷಗಳು ಜಂಟಿಯಾಗಿ ಪ್ರತಿಭಟನೆ ನಡೆಸಿದವು.ಪ್ರತಿಭಟನೆಯನ್ನು ಉದ್ದೇಶಿಸಿ ಕಸಾಪ ಮಾಜಿ ಜಿಲ್ಲಾಧ್ಯಕ್ಷರು, ನಿವೃತ್ತ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಬಾ.ಹ. ರಮಾಕುಮಾರಿ ಮಾತನಾಡಿ, ಮತದಾನದ ಹಕ್ಕನ್ನು ಕಸಿಯುವ ಸರ್ಕಾರದ ಕ್ರಮ ಸರಿಯಾದುದ್ದಲ್ಲ, ಮುಖ್ಯ ಚುನಾವಣಾ ಆಯುಕ್ತರು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಈ ಕೂಡಲೇ ಅವರನ್ನು ವಜಾ ಮಾಡಬೇಕು ಎಂದರು.
ನ್ಯಾಯಸಮ್ಮತವಾಗಿ ನಡೆಯುತ್ತಿರುವ ಹೋರಾಟಗಳನ್ನು ದಮನ ಮಾಡುವ ಕ್ರಮ ಸರಿಯಾದುದ್ದಲ್ಲ, ಎಸ್‌ಐಆರ್ ವಿರುದ್ಧದ ಮಾಡುತ್ತಿರುವ ಹೋರಾಟಕ್ಕೆ ಜಯವಾಗಬೇಕು, ಪ್ರಜಾಪ್ರಭುತ್ವದ ಹಕ್ಕು ಉಳಿಯಬೇಕು ಎಂದರು.ಸಿಪಿಐಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್ ಮುಜೀಬ್ ಮಾತನಾಡಿ, ಸಂವಿಧಾನಬದ್ಧವಾದ ಮತದಾನದ ಹಕ್ಕನ್ನು ಕಸಿಯುವ ಕೆಲಸವನ್ನು ಸರ್ಕಾರ ಚುನಾವಣಾ ಆಯೋಗದ ಮೂಲಕ ಮಾಡುತ್ತಿದೆ. ದೇಶದಲ್ಲಿ ಇಂದು ಅಘೋಷಿತ ತುರ್ತು ಪರಿಸ್ಥಿತಿ ಇದ್ದು, ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದರು.ಪ್ರಧಾನಿಗಳು ಹೋರಾಟಕ್ಕೆ ಹೆದರಿ ರೈಲು ಸೇರಿದಂತೆ ಹೋರಾಟದ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಮಾಡಿದ್ದಾರೆ. ಅದನ್ನು ಮೀರಿ ಯುವನಜರು ಹೋರಾಟ ನಡೆಸುತ್ತಿದ್ದಾರೆ ಎಂದರು.
ಪ್ರಗತಿಪರ ಚಿಂತಕ ಪ್ರೊ.ಕೆ.ದೊರೈರಾಜ್ ಮಾತನಾಡಿ, ಜನರಲ್ಲಿ ಅನುಮಾನಗಳನ್ನು ಸೃಷ್ಟಿ ಮಾಡಿರುವ ಮತ್ತು ಹಲವು ಅನುಮಾನಗಳಿಗೆ ಕಾರಣವಾಗಿರುವ ಎಸ್.ಐ.ಆರ್ ಅನ್ನು ಈ ಕೂಡಲೇ ರದ್ದು ಮಾಡಬೇಕು ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ರನ್ನು ಈ ಕೂಡಲೇ ವಜಾ ಮಾಡಬೇಕು ಎಂದು ಆಗ್ರಹಿಸಿದರು.ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಮಾತನಾಡಿ, ವಿದ್ಯಾರ್ಥಿ, ಯುವಜನರ ನೈಜ ಸಮಸ್ಯೆಗಳನ್ನು ಮರೆಮಾಚಲಾಗುತ್ತಿದೆ. ನಿರಂತರವಾಗಿ ಹೆಚ್ಚಳವಾಗುತ್ತಿರುವ ಬೆಲೆ ಏರಿಕೆಗೆ ಕಡಿವಾಣ ಹಾಕಲು ಸಾಧ್ಯವಾಗದ ಸರ್ಕಾರ ಮತದಾನದ ಹಕ್ಕನ್ನು ಕಸಿಯುವ ಕೆಲಸವನ್ನು ಮಾಡುತ್ತಿದೆ. ಕೇಂದ್ರ ಸರ್ಕಾರದ ಜನವಿರೊಧಿ ನೀತಿಗಳು ಜನರಿಗೆ ಅರ್ಥವಾಗುತ್ತಿದ್ದು ಅಧಿಕಾರದಿಂದ ಕೆಳಗಿಳಿಯುವ ಸಮಯ ದೂರವಿಲ್ಲ ಎಂದರು.
ಪ್ರತಿಭಟನೆಯನ್ನು ಉದ್ದೇಶಿಸಿ ತಾಜುದ್ದೀನ್‌ಷರೀಪ್, ಸಿಪಿಐಎಂನ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಜನವಾದಿ ಮಹಿಳಾ ಸಂಘಟನೆಯ ಟಿ.ಆರ್. ಕಲ್ಪನಾ, ಬಿ.ಉಮೇಶ್ ಡಿ.ವೈಎಫ್‌ಐನ ಶಿವಣ್ಣ, ಎಂ.ಜಿ.ಮಂಜುನಾಥ್, ವಕೀಲ ಕಿಶೋರ್, ರೈತಸಂಘದ ಕಾಂತರಾಜು ಸೇರಿ ಮುಂತಾದವರು ಮಾತನಾಡಿದರು, ಪ್ರತಿಭಟನೆಯಲ್ಲಿ ರೈತ ಸಂಘದ ಶಬ್ಬಿರ್, ಸಿಐಟಿಯುನ ಶಿವಕುಮಾರಸ್ವಾಮಿ, ಆನಂದ, ವಸೀಮ್, ಮಾರುತಿ, ಖಲೀಲ್, ಯೋಗೀಶ್, ಸಿಪಿಐನ ಅಶ್ವತ್ಥನಾರಾಯಣ್, ಮಂಜುನಾಥ್, ಕಿಶೋರ್, ಮೋಹನ್‌ಕುಮಾರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.