ಸಾರಾಂಶ
ಹೊಸಪೇಟೆ: ಕಟ್ಟಡ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಾಸಕರ ಕಚೇರಿ ಎದುರು ಬುಧವಾರ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ಪ್ರತಿಭಟನೆ ನಡೆಯಿತು.
ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ವಲಸೆ ಕಾರ್ಮಿಕರು ದುಡಿಯುತ್ತಿದ್ದಾರೆ. ಅವರ ಬದುಕಿನ ಅಸಹಾಯಕತೆಯನ್ನೇ ದುರುಪಯೋಗ ಮಾಡಿಕೊಂಡಿರುವ ಗುತ್ತಿಗೆದಾರರು ಅವರನ್ನು ಎಲ್ಲ ಸಾಮಾಜಿಕ ಭದ್ರತೆಗಳಿಂದಲೂ ವಂಚಿತರನ್ನಾಗಿ ಮಾಡುತ್ತಿದ್ದಾರೆ. ಶೇ.30ರಷ್ಟು ಮಹಿಳೆಯರು ನಿರ್ಮಾಣ ವಲಯದಲ್ಲಿ ದುಡಿಮೆ ಮಾಡುತ್ತಿದ್ದರೂ ಅವರಿಗೆ ನೀಡಬೇಕಾದ ಕುಶಲತೆ ತರಬೇತಿ ಹಾಗೂ ಕನಿಷ್ಟ ಸಮಾನ ಕೆಲಸಕ್ಕೆ ಸಮಾನ ವೇತನ ಸೌಲಭ್ಯಗಳಿಂದಲೂ ವಂಚಿತರನ್ನಾಗಿಸಲಾಗಿದೆ. ಕೆಲಸದ ಸ್ಥಳದಲ್ಲಿ ಕನಿಷ್ಟ ಶೌಚಾಲಯ ಕೂಡ ನಿರ್ಮಾಣ ಮಾಡಲಾಗಿಲ್ಲ. ಅವರ ಸುರಕ್ಷತೆಗೂ ಕ್ರಮವಹಿಸಲಾಗುತ್ತಿಲ್ಲ ಎಂದು ದೂರಿದರು.ಕಾರ್ಮಿಕರ ಕಾಯಿದೆಗಳನ್ನು ಉಳಿಸಬೇಕು. ಸೆಸ್ ಕಾಯಿದೆ 1996ರನ್ನು ಉಳಿಸಬೇಕು. ಅಂತಾರಾಜ್ಯ ವಲಸೆ ಕಾರ್ಮಿಕರ ಕಾಯಿದೆ 1979 ಉಳಿಸಿ ಹಾಗೂ ಬಲಪಡಿಸಬೇಕು. ಕಟ್ಟಡ ಕಾರ್ಮಿಕರ ಕೇಂದ್ರ ಸಲಹಾ ಮಂಡಳಿಯನ್ನು ಪುನರುಜ್ಜೀವನಗೊಳಿಸಿ. ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯನ್ನು ಬೇರೆ ಉದ್ದೇಶಗಳಿಗೆ ವಿನಿಯೋಗಿಸಬಾರದು. ಖರೀದಿಗಳು ಹಾಗೂ ಅನ್ಯ ಉದ್ದೇಶಗಳಿಗೆ ಬಳಕೆಯಾಗುವ ಸೆಸ್ ವಂಚನೆ ನಿಲ್ಲಿಸಬೇಕು. ಎಲ್ಲ ರಾಜ್ಯ ಕಲ್ಯಾಣ ಮಂಡಳಿಗಳಲ್ಲಿ ಕೇಂದ್ರ ಕಾರ್ಮಿಕ ಸಂಘಗಳಿಗೆ ಪ್ರಾತಿನಿಧ್ಯವನ್ನು ನೀಡಬೇಕು, ನಿರಂತರ ಪಿಂಚಣಿ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ತನ್ನ ಆರ್ಥಿಕ ನೆರವು ನೀಡಬೇಕು. ಶೈಕ್ಷಣಿಕ ಸಹಾಯಧನ ಕಡಿತ ಮಾಡಿರುವ ಆದೇಶ ವಾಪಸ್ ಪಡೆಯಬೇಕು ಹೈಕೋರ್ಟ್ ಆದೇಶದಂತೆ 2021ರ ಅಧಿಸೂಚನೆ ಅನ್ವಹಿಸಿ ಶೈಕ್ಷಣಿಕ ಧನ ಸಹಾಯ ಬಿಡುಗಡೆ ಮಾಡಬೇಕು. ನೈಜ ಕಾರ್ಮಿಕರ ನೋಂದಣಿ ಮತ್ತು ಮರು ನೋಂದಣಿ ಅರ್ಜಿಗಳನ್ನು ಸಕಾರಣವಿಲ್ಲದೇ ತಿರಸ್ಕರಿಸುವುದು ನಿಲ್ಲಬೇಕು ಹಾಗೂ ವಿಳಂಬ ಮಾಡದೇ ಕಾರ್ಡ್ ವಿತರಣೆ ಆಗಬೇಕು. ಸೌಲಭ್ಯಗಳಿಗಾಗಿ ಸಲ್ಲಿಸಿರುವ ಸಾವಿರಾರು ಅರ್ಜಿಗಳಗಳನ್ನು ಶೀಘ್ರವೇ ವಿಲೇವಾರಿ ಮಾಡಬೇಕು. ಪಿಂಚಣಿದಾರರಿಗೆ ಶೀಘ್ರವೇ ಅವರ ಪಿಂಚಣಿ ಹಣವನ್ನು ಬಿಡುಗಡೆ ಮಾಡಬೇಕು. ಪಿಂಚಣಿಗೆ ಅರ್ಜಿ ಸಲ್ಲಿಸುವಲ್ಲಿ ಆಗುತ್ತಿರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸಬೇಕು. ಟೆಂಡರ್ ಆಧಾರಿತ ಎಲ್ಲ ಖರೀದಿ ವ್ಯವಹಾರಗಳನ್ನು ನಿಲ್ಲಿಸಬೇಕು, ಇದುವರೆಗೆ ನಡೆದಿರುವ ಖರೀದಿಗಳಲ್ಲಿ ಅವ್ಯವಹಾರಗಳ ನಡೆದಿದ್ದು, ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಹೊಸ ತಂತ್ರಾಂಶದಲ್ಲಿನ ತಾಂತ್ರಿಕ ತೊಂದರೆಗಳು ಹಾಗೂ ಸರ್ವರ್ ಸಮಸ್ಯೆ ಪರಿಹರಿಸಬೇಕು, ಬಾಕಿ ಇರುವ ಸೆಸ್ ಸಂಗ್ರಹ ಮಾಡಿ. ಬೃಹತ್ ಖಾಸಗಿ ಹಾಗೂ ಸಾರ್ವಜನಿಕ ನಿರ್ಮಾಣಗಳಿಗೆ ಶೇ.2 ರಷ್ಟು ಸೆಸ್ ವಿಧಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಎನ್. ಯಲ್ಲಾಲಿಂಗ, ನಲ್ಲು ಸಾಬ್, ಗಜಾನನ, ದುರ್ಗಾ ನಾಯ್ಕ, ಕೆ. ರಾಮಾಂಜನಿ ಮತ್ತಿತರರಿದ್ದರು.ಹೊಸಪೇಟೆಯ ಶಾಸಕರ ಕಚೇರಿ ಎದುರು ಬುಧವಾರ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ಪ್ರತಿಭಟನೆ ನಡೆಯಿತು.