ತಾಲೂಕನ್ನು ಬರಪೀಡಿತ ಎಂದು ಘೋಷಿಸಿದ್ದರೂ ಜಾನುವಾರುಗಳಿಗೆ ಅಗತ್ಯ ಪ್ರಮಾಣದಲ್ಲಿ ಮೇವು ಸಿಗುತ್ತಿಲ್ಲ ಎಂದು ಆರೋಪಿಸಿ ಹೈನುಗಾರರು ಹಾಗೂ ರೈತರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ತಾಲೂಕನ್ನು ಬರಪೀಡಿತ ಎಂದು ಘೋಷಿಸಿದ್ದರೂ ಜಾನುವಾರುಗಳಿಗೆ ಅಗತ್ಯ ಪ್ರಮಾಣದಲ್ಲಿ ಮೇವು ಸಿಗುತ್ತಿಲ್ಲ ಎಂದು ಆರೋಪಿಸಿ ಹೈನುಗಾರರು ಹಾಗೂ ರೈತರು ಪ್ರತಿಭಟನೆ ನಡೆಸಿದರು.

ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ನೇತೃತ್ವದಲ್ಲಿ ಪಟ್ಟಣದ ದಂಡಿಮಾರಮ್ಮ ದೇವಸ್ಥಾನದಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಎಸಿ ಗೂಟೂರು ಶಿವಪ್ಪ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಬರದ ಪರಿಸ್ಥಿತಿ ತೀವ್ರಗೊಂಡಿದ್ದು, ಬೋರ್‌ವೆಲ್‌ಗಳು ಬತ್ತಿಹೋಗಿವೆ. ರು.400 ನೀಡಿದರೂ ಒಂದು ಹೊರೆ ಮೇವು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನಲ್ಲಿ ಸುಮಾರು 40 ಸಾವಿರ ಜಾನುವಾರುಗಳಿದ್ದು, ಅವುಗಳಿಗೆ ಮೇವಿನ ಸಮಸ್ಯೆ ಗಂಭೀರವಾಗಿದೆ. ಸರ್ಕಾರ ತಾಲೂಕನ್ನು ಬರಪೀಡಿತ ಎಂದು ಘೋಷಿಸಿದರೆ ಮಾತ್ರ ಸಾಲದು. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತುರ್ತಾಗಿ ಮೇವು ಬ್ಯಾಂಕ್ ತೆರೆದು, ನಿಗದಿತ ದರದಲ್ಲಿ ರೈತರಿಗೆ ಮೇವು ಪೂರೈಸಬೇಕು ಎಂದು ಆಗ್ರಹಿಸಿದರು.

ಪುರಸಭೆ ಮಾಜಿ ಸದಸ್ಯ ಎಂ.ಆರ್. ಜಗನ್ನಾಥ್ ಮಾತನಾಡಿ, ಮಧುಗಿರಿ, ಕೊರಟಗೆರೆ ಹಾಗೂ ಪಾವಗಡ ತಾಲೂಕುಗಳು ತೀವ್ರ ಬರದ ಸಂಕಷ್ಟ ಎದುರಿಸುತ್ತಿವೆ. ಹಲವು ಗ್ರಾಮಗಳಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೂಡಲೇ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. 15 ದಿನಗಳೊಳಗೆ ಮೇವು ಬ್ಯಾಂಕ್ ಸ್ಥಾಪಿಸದಿದ್ದರೆ ಕೊಂಡವಾಡಿ ಚಂದ್ರಶೇಖರ್ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಿಪಂ ಮಾಜಿ ಸದಸ್ಯ ಎಸ್.ಡಿ. ಕೃಷ್ಣಪ್ಪ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ, ಮುಖಂಡರಾದ ಮಿಲ್ ಚಂದ್ರು, ಬೋರ್‌ವೆಲ್ ಕುಮಾರ್, ಜಿಪಂ ಮಾಜಿ ಸದಸ್ಯ ಸಿಡದರಗಲ್ಲು ಶ್ರೀನಿವಾಸ್, ಮರಳುಯ್ಯ ಸೇರಿದಂತೆ ನೂರಾರು ರೈತರು ಹಾಗೂ ಹೈನುಗಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.