ಸಾರಾಂಶ
ಬಳ್ಳಾರಿ: ನಗರದ ಶ್ರೀಕನಕ ದುರ್ಗಮ್ಮ ದೇವಸ್ಥಾನ ಬಳಿಯ ಕೆಳಸೇತುವೆಯ ರಸ್ತೆಯನ್ನು ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ ಸಿಪಿಐಎಂ ಪಕ್ಷದ ಕಾರ್ಯಕರ್ತರು ಹಾಗೂ ಬಳ್ಳಾರಿ ನಾಗರಿಕ ಹೋರಾಟ ಸಮಿತಿಯ ಸದಸ್ಯರು ನಗರದಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿದರು.
ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು ಜನವರಿ 26ರಂದು ಜನರ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ಉಳಿದ ಕಾಮಗಾರಿಗಳು ಬಾಕಿಯಿದೆ ಎಂಬ ಕಾರಣಕ್ಕಾಗಿ ರಸ್ತೆಯನ್ನು ಬಂದ್ ಮಾಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ನಗರದ ಯಾವುದೇ ಪ್ರದೇಶಕ್ಕೆ ತೆರಳಬೇಕಾದರೂ ಶ್ರೀಕನಕ ದುರ್ಗಮ್ಮ ದೇವಸ್ಥಾನ ಬಳಿಯ ಅಂಡರ್ ಬ್ರಿಡ್ಜ್ ರಸ್ತೆಯೇ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಅಭಿವೃದ್ಧಿ ಹಿನ್ನೆಲೆಯಲ್ಲಿ ಈ ರಸ್ತೆಯನ್ನು ಕಳೆದ ಎರಡು ತಿಂಗಳಿನಿಂದ ಬಂದ್ ಮಾಡಲಾಗಿದ್ದು ಸಾರ್ವಜನಿಕರು ತೀವ್ರ ಒದ್ದಾಡುವಂತಾಗಿದೆ. ಈಗಾಗಲೇ ರಸ್ತೆ ಕಾಮಗಾರಿ ಪೂರ್ಣಗೊಂಡಿರುವುದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆಯನ್ನು ಮುಕ್ತಗೊಳಿಸಬೇಕು. ಉಳಿದ ಕಾಮಗಾರಿಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.ಸಿಪಿಐಎಂ ಪಕ್ಷದ ಕಾರ್ಯದರ್ಶಿ ಜೆ.ಸತ್ಯಬಾಬು, ಮುಖಂಡರಾದ ಚಂದ್ರಕುಮಾರಿ, ಯು. ಎರಿಸ್ವಾಮಿ, ಬೈಲ ಹನುಮಂತಪ್ಪ, ಜಿ.ಎನ್. ಎರಿಸ್ವಾಮಿ, ತಿಪ್ಪೇರುದ್ರಪ್ಪ, ಪೆದ್ದನ್ನ, ನವೀನ್ ಕುಮಾರ್, ಪಾಂಡುರಂಗ, ಅರುಣಾ, ಜಿ.ಎಸ್. ಮೂರ್ತಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬಿಎನ್‌ಹೆಚ್‌ಎಸ್ ವತಿಯಿಂದ ಪ್ರತಿಭಟನೆಶ್ರೀಕನಕ ದುರ್ಗಮ್ಮ ದೇವಸ್ಥಾನ ಬಳಿಯ ಕೆಳಸೇತುವೆ ರಸ್ತೆಯನ್ನು ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿ (BNHS) ಸದಸ್ಯರು ನಗರದ ಈಡಿಗ ಹಾಸ್ಟೆಲ್ ಬಳಿ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಮಾತನಾಡಿದ ಸಮಿತಿಯ ಸಂಚಾಲಕ ಆರ್. ಸೋಮಶೇಖರ ಗೌಡ, ಕಾಮಗಾರಿ ಪ್ರಾರಂಭಿಸಿ 62 ದಿನ ಕಳೆದಿವೆ. ಬಳ್ಳಾರಿಯ ಜನತೆ ಇದೇ ತಿಂಗಳು ಜ. 26ರಂದು ತೆರವು ಮಾಡಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ, ಇಲ್ಲಿ ವರೆಗೆ ಸಾರ್ವಜನಿಕರ ಸಂಚಾರಕ್ಕೆ ಈ ಕೆಳಸೇತುವೆ ಬಂದ್ ಆಗಿರುವುದರಿಂದ ಜನತೆ ದಿನನಿತ್ಯ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಬೇಕಾಗಿದೆ. ಸತ್ಯನಾರಾಯಣ ಪೇಟೆ ರಸ್ತೆಯ ಹತ್ತಿರ, ಮೋತಿ ವೃತ್ತದ ಹತ್ತಿರ ಮೇಲ್ಸೇತುವೆ ಹತ್ತಿರ ದಿನಂಪ್ರತಿ ಟ್ರಾಫಿಕ್ ಜಾಮ್ ಆಗಿ ಜನತೆ ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಮಿತಿಯ ಸದಸ್ಯ ಡಾ. ಪ್ರಮೋದ್ ಮಾತನಾಡಿ, ಇಡೀ ಬಳ್ಳಾರಿ ನಗರ ಮಹಾನಗರ ಪಾಲಿಕೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈ ಗನ್ನಡಿಯಾಗಿದೆ. ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗಳು, ಧೂಳು, ದುರ್ವಾಸನೆ ಬೀರುವ ಚರಂಡಿಗಳು, ಕುಡಿಯುವ ನೀರಿನಲ್ಲಿ ಚರಂಡಿ ನೀರಿನ ಮಿಶ್ರಣ, ಇಂತಹ ಅನೇಕ ಸಮಸ್ಯೆಗಳು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿವೆ. ಇದರ ನಡುವೆ ಕೆಳಸೇತುವೆ ರಸ್ತೆಯನ್ನು ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸದಿರುವುದು ಮತ್ತಷ್ಟೂ ಸಮಸ್ಯೆಗೆ ಸಿಲುಕಿಸಿದಂತಾಗಿದೆ ಎಂದು ದೂರಿದರು.
ಸಂಘಟನೆಯ ಜಿಲ್ಲಾ ಪ್ರಮುಖರಾದ ಶಾಂತಾ, ಅಂತೋನಿ, ಚಂದ್ರಶೇಖರ, ಜಾಫರ್, ಹನುಮಪ್ಪ, ಸೋಹಾನ್, ಎ. ದೇವದಾಸ್, ಗೋವಿಂದ್, ರಾಜ ಮುಂತಾದವರು ಭಾಗವಹಿಸಿದ್ದರು.