ಶೀಘ್ರವೇ ಬರ ಪರಿಹಾರ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ

| Published : Jan 09 2024, 02:00 AM IST

ಶೀಘ್ರವೇ ಬರ ಪರಿಹಾರ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನರೇಗಾ ಕೂಲಿ ಹಣ 316 ರು.ಗೆ 100 ರು. ಸೇರಿಸಿ ನೀಡಬೇಕು. ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಕೂಲಿ 484 ರು.ಸಂದಾಯ ಮಾಡಬೇಕು, ನೂರು ದಿನ ಕೆಲಸ ಮಾಡಿರುವ ಕೂಲಿಕಾರರಿಗೆ ಹೆಚ್ಚುವರಿ 50 ದಿನ ಕೆಲಸ ನೀಡಬೇಕು. ಬರಗಾಲ ಪರಿಸ್ಥಿತಿ ಇರುವುದರಿಂದ ಬ್ಯಾಂಕ್, ಮೈಕ್ರೋ ಫೈನಾನ್ಸ್ ಗಳಲ್ಲಿ ಕೂಲಿಕಾರರು ಪಡೆದಿರುವ ಸಾಲ ವಸೂಲಾತಿ ನಿಲ್ಲಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಶೀಘ್ರ ಬರ ಪರಿಹಾರ ಹಣ ಬಿಡುಗಡೆ, ಉದ್ಯೋಗ ಖಾತ್ರಿ ಕೆಲಸ ನೀಡಿ ಕೂಲಿಕಾರರ ರಕ್ಷಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರು ಸಂಘದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಸಿಲ್ವರ್‌ ಜ್ಯೂಬಿಲಿ ಪಾರ್ಕಿನಲ್ಲಿ ಸೇರಿದ ಕಾರ್ಯಕರ್ತರು ಹೆದ್ದಾರಿ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿ ನಂತರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಒಂದು ತಿಂಗಳ ಹಿಂದೆ ಹೇಳಿದಂತೆ ಬರ ಪರಿಹಾರವನ್ನು ಕೇಂದ್ರದ ಕಡೆ ಬೊಟ್ಟು ಮಾಡದೇ ತುರ್ತಾಗಿ ಬಿಡುಗಡೆ ಮಾಡಬೇಕು. ಬರ ಸನ್ನಿವೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಾಮಗಾರಿ ಸೃಷ್ಟಿಸಿ ಕೃಷಿ ಕೂಲಿಕಾರರಿಗೆ ಕೆಲಸ ನೀಡಬೇಕು. ಕೆಲಸದ ದಿನವನ್ನು 100 ದಿನಕ್ಕೆ ಬದಲಾಗಿ 200 ದಿನಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ನರೇಗಾ ಕೂಲಿ ಹಣ 316 ರು.ಗೆ 100 ರು. ಸೇರಿಸಿ ನೀಡಬೇಕು. ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಕೂಲಿ 484 ರು.ಸಂದಾಯ ಮಾಡಬೇಕು, ನೂರು ದಿನ ಕೆಲಸ ಮಾಡಿರುವ ಕೂಲಿಕಾರರಿಗೆ ಹೆಚ್ಚುವರಿ 50 ದಿನ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿ 15 ದಿನಕ್ಕೊಮ್ಮೆ ಕೂಲಿ ಪಾವತಿ, ಉದ್ಯೋಗ ಖಾತ್ರಿಯಲ್ಲಿ ಗುತ್ತಿಗೆದಾರರು, ಯಂತ್ರದ ಅವಳಿ ತಪ್ಪಿಸವುದು, ಯೋಜನೆಯಲ್ಲಿ ಪ್ರತಿದಿನ ಎರಡು ಬಾರಿ ಹೆಬ್ಬೆಟ್ಟು ನೀಡಿ ಫೋಟೋ ತೆಗೆಯುವ ನೀತಿ ಹಿಂಪಡೆಯಬೇಕು. ನಗರ ಪ್ರದೇಶಕ್ಕೂ ಉದ್ಯೋಗ ಖಾತ್ರಿ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಹಲವಾರು ಬಾರಿ ಮನೆ ನಿವೇಶನಕ್ಕೆ ಸಂಬಂಧಿಸಿದಂತೆ ಮನವಿ ನೀಡಿದ್ದರೂ ಅದು ಜಾರಿಯಾಗಿಲ್ಲ. ಜಿಲ್ಲೆಯಲ್ಲಿ ಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿರುವ ಬಡವರಿಗೆ ಹಕ್ಕುಪತ್ರ ನೀಡಿ ನಿವೇಶನ ರಹಿತರಿಗೆ ನಿವೇಶನ ನೀಡಿ ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಬರಗಾಲ ಪರಿಸ್ಥಿತಿ ಇರುವುದರಿಂದ ಬ್ಯಾಂಕ್, ಮೈಕ್ರೋ ಫೈನಾನ್ಸ್ ಗಳಲ್ಲಿ ಕೂಲಿಕಾರರು ಪಡೆದಿರುವ ಸಾಲ ವಸೂಲಾತಿಯನ್ನು ನಿಲ್ಲಿಸಬೇಕು. ಮೈಕ್ರೋ ಫೈನಾನ್ಸ್ ಸಾಲ ನಿಷೇಧಿಸಿ ಉಪಕಸಬು ಕೈಗೊಳ್ಳಲು ಬ್ಯಾಂಕ್ ನಿಂದ 2 ಲಕ್ಷ ರು ವರೆಗೆ ಸಾಲ ನೀಡಬೇಕು ಎಂದು ಆಗ್ರಹಿಸಿದರು.

ವಲಸೆ ಕಾರ್ಮಿಕರ ಕಾಯ್ದೆ ಕಟ್ಟುನಿಟ್ಟಾಗಿ ಜಾರಿ ಮಾಡಿ ಜಿಲ್ಲೆಯಲ್ಲಿ ಕಬ್ಬು ಕಡಿಯಲು ಬಂದಿರುವ ವಲಸೇ ಕಾರ್ಮಿಕರಿಗೆ ಮೂಲಸೌಕರ್ಯ ಕಲ್ಪಿಸಬೇಕು. ಅವರ ಮಕ್ಕಳಿಗೆ ಸಮರ್ಪಕ ಶಿಕ್ಷಣ ನೀಡಬೇಕು, ಜಿಲ್ಲೆಯಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿರುವ ಬಡ ಜನತೆಗೆ ಹಕ್ಕು ಪತ್ರ ನೀಡಬೇಕು. ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರು.ಬರ ಪರಿಹಾರ ನೀಡಬೇಕು. ನಿವೇಶನ ರಹಿತರಿಗೆ ನಿವೇಶನ ಸೌಲಭ್ಯ ಕಲ್ಪಿಸಿ ವಸತಿ ನಿರ್ಮಿಸಿ ಕೊಡಬೇಕು. ಜಿಲ್ಲೆಯ ಎಲ್ಲ ಸ್ಮಶಾನ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ನರೀಪುರದಲ್ಲಿ ಪಡಿತರ ವಿತರಣೆಗೆ ಉಪ ಕೇಂದ್ರ ತೆರೆಯಬೇಕು. ಅಂಗವಿಕಲರು, ವೃದ್ಧರು, ಒಂಟಿ ಮಹಿಳೆಯರ ಕುಟುಂಬಗಳ ಮನೆ ಬಾಗಿಲಿಗೆ ಪಡಿತರ ವಿತರಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ಮುಖಂಡರಾದ ಜಿ.ಎನ್‌.ನಾಗರಾಜು, ಎಂ.ಪುಟ್ಟಮಾದು, ಬಿ.ಹನುಮೇಶ್, ಬಿ.ಎಂ.ಶಿವಮಲ್ಲಯ್ಯ, ಅನಿತಾ, ಅಮಾಸಯ್ಯ, ಆರ್.ರಾಜು, ಜಿ.ಎಚ್.ಗಿರೀಶ್, ರಾಮಣ್ಣ, ಟಿ.ಎಚ್.ಆನಂದ, ಮಹಾದೇವ, ಲಕ್ಷ್ಮಿ, ಎಚ್.ಎಸ್.ಮಂಜುಳಾ, ಮಲ್ಲೇಶ್‌, ಅಬ್ದುಲ್ಲಾ, ಪಾಪಣ್ಣ ಭಾಗವಹಿಸಿದ್ದರು.