ವಾರ್ಡನ್ ಅಮಾನತು ಮಾಡುವಂತೆ ಆಗ್ರಹಿಸಿ ಪ್ರತಿಭಟನೆ

| Published : Nov 07 2024, 12:43 AM IST

ಸಾರಾಂಶ

ಭಾರತ ವಿದ್ಯಾರ್ಥಿ ಫೆಡರೇಶನ್ ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹಾವೇರಿ

ಮೂಲಭೂತ ಸೌಕರ್ಯಗಳಿಂದ ವಂಚಿಸಿ ಅನ್ಯಾಯವನ್ನು ಪ್ರಶ್ನೆ ಮಾಡಿದ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡುತ್ತಿರುವುದನ್ನು ಖಂಡಿಸಿ ಮತ್ತು ವಾರ್ಡನ್ ಅಮಾನತು ಮಾಡುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ತಾಲೂಕಿನ ಗಾಂಧಿಪುರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡುವುದಿಲ್ಲ, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಪುಸ್ತಕಗಳು, ಆಟದ ಸಲಕರಣೆಗಳು ಸೇರಿದಂತೆ ಹಾಸ್ಟೆಲ್ ಸೌಕರ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ ಎಂದು ಆರೋಪಿಸಿ ತಾಲೂಕು ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಪತ್ರ ಬರೆಯಲಾಗಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಹೋರಾಟ ಕೂಡ ಮಾಡಿದ್ದಾರೆ. ಆದರೂ ಅಧಿಕಾರಿಗಳು ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.

ಈ ವೇಳೆ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಹಾಸ್ಟೆಲ್ ಅವ್ಯವಸ್ಥೆ, ಅನ್ಯಾಯದ ವಿರುದ್ಧ ಪ್ರಶ್ನೆ ಮಾಡಿದ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಅವರ ಪಾಲಕರಿಗೆ ಇಲ್ಲಸಲ್ಲದ ಆರೋಪಗಳನ್ನು ತಾವು ಮಾಡಿದ ತಪ್ಪುಗಳನ್ನು ಮುಚ್ಚಿಕೊಳ್ಳಲು ಈ ರೀತಿಯ ಪಿತೂರಿ ಮಾಡುತ್ತಿರುವುದು ಖಂಡನೀಯ. ವಾರ್ಡನ್ ತಾನು ಮಾಡಿದ ಭ್ರಷ್ಟಾಚಾರ, ಅವ್ಯವಸ್ಥೆ, ಅನ್ಯಾಯವನ್ನು ಮುಚ್ಚಿಕೊಳ್ಳಲು ವಿದ್ಯಾರ್ಥಿಗಳ ಮನೆಗೆ ಹೋಗಿ ಆರೋಪ ಮಾಡುತ್ತಿರುವ ಕುರಿತು ಸೂಕ್ತ ತನಿಖೆ ನಡೆಸಬೇಕು. ಸಂಬಂಧಿಸಿದ ವಾರ್ಡನ್ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಎಸ್‌ಎಫ್‌ಐ ಹಾಸ್ಟೆಲ್ ಘಟಕ ಅಧ್ಯಕ್ಷ ಪರಶುರಾಮ ಕೊಪ್ಪಳದ ಮಾತನಾಡಿದರು. ಸ್ಥಳಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಆಂಜನೇಯ ಅವರನ್ನು ಕಿರಾಣಿ, ತರಕಾರಿ ದಾಸ್ತಾನು ಕೊಠಡಿ ಪರಿಶೀಲಿಸುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದರು. ಈ ವೇಳೆ ಪರಿಶೀಲನೆ ನಡೆಸಿದ ಅಧಿಕಾರಗಳು ಹುಳು ಬಿದ್ದಿದ ಕಾಳು, ಕಡಿ, ಕೊಳೆತ ತರಕಾರಿ ನೋಡಿ ಕೋಪಗೊಂಡು ವಾರ್ಡನ್ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಂಜುನಾಥ್ ಹುಲಮನಿ, ವಸಂತ್ ವಡ್ಡರ, ರಘುಪತಿ ಕರಮ್ಮನವರ, ಅರುಣ್ ಮಿನಕಟ್ಟಿ, ಕೃಷ್ಣ ಕೆಸರಹಳ್ಳಿ, ಕುಶಾಲ್ ಲಮಾಣಿ, ಸುನಿಲ್ ಲಮಾಣಿ, ನಾಗೇಂದ್ರ ಎಂ, ಕಿರಣ್ ಲಮಾಣಿ, ನವೀನ ಬಡ್ಡೆಪ್ಪನವರ, ಅರುಣ್ ಕುಮಾರ್ ನಾಗವತ್, ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು.