ಸಕಾಲಕ್ಕೆ ಶಾಲೆ- ಕಾಲೇಜಿಗೆ ತೆರಳಲು ಬಸ್‌ ಸೌಕರ್ಯವಿಲ್ಲ. ಅಲ್ಲದೆ, ಸಂಡೂರಿನಿಂದ ಹೊಸಪೇಟೆಗೆ ಬರುವ ಬಸ್‌ಗಳು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಶುಕ್ರವಾರ ರಸ್ತೆ ತಡೆ ನಡೆಸಿದರು.

ಹೊಸಪೇಟೆ: ಸಕಾಲಕ್ಕೆ ಶಾಲೆ- ಕಾಲೇಜಿಗೆ ತೆರಳಲು ಬಸ್‌ ಸೌಕರ್ಯವಿಲ್ಲ. ಅಲ್ಲದೆ, ಸಂಡೂರಿನಿಂದ ಹೊಸಪೇಟೆಗೆ ಬರುವ ಬಸ್‌ಗಳು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ರಾಜಪುರ ಗ್ರಾಮದ ಎಸ್‌ಎಫ್‌ಐ ಸಂಘಟನೆ ಹಾಗೂ ಸ್ಥಳೀಯ ವಿದ್ಯಾರ್ಥಿಗಳು ಶುಕ್ರವಾರ ರಸ್ತೆ ತಡೆ ನಡೆಸಿದರು.

ಭಾರತೀಯ ವಿದ್ಯಾರ್ಥಿ ಫೆಡರೇಷನ್‌ನ ಜಿಲ್ಲಾ ಸಹ ಕಾರ್ಯದರ್ಶಿ ಕೆ.ಎ. ಪವನ್ ಕುಮಾರ್ ಮಾತನಾಡಿ, ಸಂಡೂರಿನಿಂದ ಹೊಸಪೇಟೆಗೆ ತೆರಳುವ ಬಸ್‌ಗಳು ರಾಜಪುರದಲ್ಲಿ ನಿಲ್ಲಿಸದೇ ಹಾಗೇ ಹೊರಟು ಹೋಗುತ್ತಿರುವುದರಿಂದ ವಿದ್ಯಾರ್ಥಿಗಳು ನಿತ್ಯವೂ ಶಾಲಾ ಕಾಲೇಜುಗಳಿಗೆ ತಡವಾಗಿ ತಲಪುವಂತಾಗಿದೆ. ಮೈನ್ಸ್‌ ಲಾರಿಗಳಲ್ಲಿ ಹತ್ತಿ ಜೀವ ಕೈಯಲ್ಲಿ ಹಿಡುದು ವಿದ್ಯಾರ್ಥಿಗಳು ಹೊಸಪೇಟೆ ನಗರಕ್ಕೆ ತೆರಳುವಂತಾಗಿದೆ. ಇದು ನಿತ್ಯದ ನರಕವಾಗಿದೆ. ರಾಜಪುರಕ್ಕೆ ತಕ್ಷಣವೇ ಸಾರಿಗೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಸರಿಸಬೇಕು. ಇಲ್ಲವಾದರೆ ಈ ರಸ್ತೆಯಲ್ಲಿ ಬಸ್‌ಗಳು ಸಂಚಾರ ತಡೆಯಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದ ವಿಷಯ ತಿಳಿದು ಸಾರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರು ರಾಜಪುರ ಗ್ರಾಮಕ್ಕೆ ಭೇಟಿ ನೀಡಿ ಸೋಮವಾರದಿಂದ ಸಂಡೂರಿನಿಂದ ಹೊಸಪೇಟೆಗೆ ಬರುವ ಬಸ್‌ಗಳನ್ನು ನಿಲ್ಲಿಸುವಂತೆ ಸೂಚಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ತೆರಳಲು ಅನಾನುಕೂಲವಾದ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಅಧಿಕಾರಿಗಳು ಮತ್ತು ಪೊಲೀಸರು ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಶಾಲಾ-ಕಾಲೇಜುಗಳಿಗೆ ತೆರಳಿದರು. ಸ್ಥಳೀಯ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಮುಖಂಡರು, ಗ್ರಾಮದ ಯುವಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.