ಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ಪ್ರತಿಭಟನೆ

| Published : Oct 22 2024, 12:13 AM IST

ಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಜೊತೆಗೆ ಪಂಪ್ ಹೌಸ್, ಕೆರೆ ನಿರ್ವಹಣೆಗೆ ಟೆಂಡರ್ ಪ್ರಕ್ರಿಯೆ ಆರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ತಹಸೀಲ್ದಾರ ಕಾರ್ಯಾಲಯದ ಸಿಎಂಗೆ ಕರ್ನಾಟಕ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರ ಮನವಿ

ಕನ್ನಡಪ್ರಭ ವಾರ್ತೆ ಕನಕಗಿರಿ

ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಜೊತೆಗೆ ಪಂಪ್ ಹೌಸ್, ಕೆರೆ ನಿರ್ವಹಣೆಗೆ ಟೆಂಡರ್ ಪ್ರಕ್ರಿಯೆ ಆರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಮನಿ ಮಾತನಾಡಿ, ರಾಜ್ಯಕ್ಕೆ ಮಾದರಿಯಾಗುವಂತೆ ಕನಕಗಿರಿ ತಾಲೂಕಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆ ಜಾರಿಯಾಗಿದೆ. ಈ ವಿಷಯದಲ್ಲಿ ಸಚಿವ ಶಿವರಾಜ ತಂಗಡಗಿ ಪಾತ್ರ ದೊಡ್ಡದಿದೆ. ಆದರೆ, 3ನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ತಂಗಡಗಿಯವರು ಕ್ಷೇತ್ರದ ಜನರ ಬಗ್ಗೆ ತಾತ್ಸಾರ ಮನೊಭಾವದಿಂದ ನೋಡುತ್ತಿದ್ದಾರೆ. ಇದಕ್ಕೆ ಅವರು ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.ಕೆರೆಗೆ ನೀರು ತುಂಬಿಸುವ ಯೋಜನೆ ಸಮರ್ಪಕವಾಗಿ ಜಾರಿಯಾದರೆ ಕನಕಗಿರಿ ತಾಲೂಕಿನ ಹತ್ತಾರು ಗ್ರಾಮಗಳ ಸಾವಿರಾರು ರೈತರ ಬಾಳು ಬಂಗಾರವಾಗಲಿದೆ. ಆದರೆ, ಸದ್ಯ ಕೆರೆ ತುಂಬುವ ಯೋಜನೆ ಬಹುತೇಕೆ ಹಳ್ಳ ಹಿಡಿದಿದೆ. ನೆಪಕ್ಕೆ ಎನ್ನುವಂತೆ ಒಂದಷ್ಟು ದಿನ ಕನಕಗಿರಿಯ ಲಕ್ಷ್ಮೀದೇವಿ ಕೆರೆ ಹಾಗೂ ಕೆ.ಕಾಟಾಪೂರ ಕೆರೆಗೆ ಮಾತ್ರ ನೀರು ಬರುತ್ತದೆ. ಆದರೆ, ಮುಂದಿನ ಯಾವ ಕೆರೆಗೂ ನೀರು ಸರಬರಾಜು ಆಗುತ್ತಿಲ್ಲ. ಇದನ್ನು ನಾವು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ವಿಭಾಗೀಯ ಅಧ್ಯಕ್ಷ ಪಂಪಣ್ಣ ನಾಯಕ ಮಾತನಾಡಿ, ಕನಕಗಿರಿ ತಾಲೂಕಿನ ಎಲ್ಲ ಕೆರೆಗೆ ನೀರು ತುಂಬಿಸುತ್ತಿದ್ದೇವೆ ಎಂದು ಸಚಿವ ಶಿವರಾಜ ತಂಗಡಗಿ ಸುಳ್ಳು ಹೇಳುತ್ತಿದ್ದಾರೆ. ರೈತರು ಇದನ್ನು ಸಹಿಸುವುದಿಲ್ಲ. ವಾಸ್ತವದಲ್ಲಿ ಕೆರೆ ತುಂಬುವ ಯೋಜನೆ ವ್ಯಾಪ್ತಿಯ ಯಾವೊಂದು ಕೆರೆಗೆ ನೀರು ಬರುತ್ತಿಲ್ಲ. ಇದನ್ನು ಕ್ಷೇತ್ರದ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂಬುದನ್ನು ಸಚಿವರು ತಿಳಿದುಕೊಳ್ಳಬೇಕು. ಕೂಡಲೇ ಕೆರೆ ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮುಂದಿನ 15 ದಿನದಲ್ಲಿ ಎಲ್ಲ ಕೆರೆಗೆ ನೀರು ಬರುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹಂತ-ಹಂತವಾಗಿ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ತಾವರಗೇರಾ ರಸ್ತೆ ಮಾರ್ಗವಾಗಿ ವಾಲ್ಮೀಕಿ ವೃತ್ತದ ವರೆಗೆ ನಡೆಯಿತು.

ಸಚಿವ ಶಿವರಾಜ ತಂಗಡಗಿ ಸೇರಿದಂತೆ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ತಹಸೀಲ್ದಾರ ಕಾರ್ಯಾಲಯದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ದಲಿತ ಸಂಘಟನೆಯ ಹಿರಿಯ ಮುಖಂಡ ಹುಲಿಹೈದರ ಕನಕಾಚಲ ನಾಯಕ, ರೈತ ಮುಖಂಡರಾದ ರಾಮಣ್ಣ ಜಾಡಿ, ಮಲ್ಲಿಕಾರ್ಜುನರೆಡ್ಡಿ, ಎಸ್.ದೊಡ್ಡನಗೌಡ, ಕಾರ್ಯಕರ್ತರಾದ ಆಂಜನೇಯ, ನಾಗರಾಜ, ದುರಗಪ್ಪ, ಈಶಪ್ಪ, ಮಹೇಶ, ಶರಣಬಸವ ಇತರರು ಇದ್ದರು.