ಸಾರಾಂಶ
ಹುಬ್ಬಳ್ಳಿ: ಕಾರ್ಮಿಕ ಇಲಾಖೆಯ ಕಲ್ಯಾಣ ಮಂಡಳಿಯ ನೂತನ ತಂತ್ರಾಂಶದಿಂದ ಕಾರ್ಮಿಕರಿಗೆ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಸವಶ್ರೀ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಹಾಗೂ ಕಾರ್ಮಿಕರು ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಇಂದಿರಾ ಗ್ಲಾಸ್‌ಹೌಸ್ ಆವರಣದಲ್ಲಿ ಸಮಾವೇಶಗೊಂಡ ನೂರಾರು ಕಾರ್ಮಿಕರು, ಅಲ್ಲಿಂದ ಚೆನ್ನಮ್ಮ ವೃತ್ತಕ್ಕೆ ಆಗಮಿಸಿ ಪ್ರತಿಭಟನಾ ಸಮಾವೇಶ ನಡೆಸಿದರು.ನಕಲಿ ಕಾರ್ಮಿಕರ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಜಾರಿಗೆ ತಂದಿರುವ ನೂತನ ತಂತ್ರಾಂಶದಿಂದ ಕಾರ್ಮಿಕರಿಗೆ ಸರ್ಕಾರದ ಯಾವುದೇ ಸೌಲಭ್ಯಗಳನ್ನು ತ್ವರಿತವಾಗಿ ಪಡೆಯಲು ಸಾಧ್ಯವಾಗುತ್ತಿಲ್ಲ. ತಂತ್ರಾಂಶದಲ್ಲಿನ ಸಮಸ್ಯೆಗಳನ್ನು ಪರಿಹರಿಸುವಂತೆ ಅನೇಕ ಬಾರಿ ಕಾರ್ಮಿಕ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿದರು.
ವಿವಿಧ ಬೇಡಿಕೆಗಳು:ಕಾರ್ಮಿಕ ಇಲಾಖೆಯ ಕಾರ್ಡ್‌ಗಳ ನೋಂದಣಿ, ನವೀಕರಣ ಅವಧಿಯನ್ನು 1 ವರ್ಷದ ಬದಲಾಗಿ 3 ವರ್ಷಗಳಿಗೆ ಸೀಮಿತಗೊಳಿಸಬೇಕು. ಇಲಾಖೆಯ ತಾಂತ್ರಿಕ ದೋಷದಿಂದ ವಿವಿಧ ಅರ್ಜಿ ಸಲ್ಲಿಕೆಗೆ ತೊಂದರೆಯಾಗಿದ್ದು, ಕೂಡಲೇ ಸರಿಪಡಿಸಬೇಕು. ಈ ವರೆಗೆ ಮಂಜೂರಾದ ವಿವಿಧ ಧನ ಸಹಾಯಗಳಿಗೆ ಪರಿಹಾರ ನೀಡದೇ, ಅನಗತ್ಯ ಕಾರಣಗಳಿಂದ ವಿಳಂಭವಾಗುತ್ತಿದ್ದು, ಕೂಡಲೇ ಮಂಜೂರಾದ ವಿವಿಧ ಧನ ಸಹಾಯಗಳನ್ನು ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಲಾಯಿತು.
ಬಳಿಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ರಾಜ್ಯ ಪ್ರದಾನ ಕಾರ್ಯದರ್ಶಿ ದುರಗಪ್ಪ ಚಿಕ್ಕತುಂಬಳ, ಶಿವಕುಮಾರ ಬಂಡಿವಡ್ಡರ, ನಭಿ ರಸೂಲ ನದಾಫ, ವಾಸು ಲಮಾಣಿ, ಜ್ಯೋತಿ ಪತ್ತಾರ, ಲಕ್ಷ್ಮಣ ಗುಡಾರದ, ಶಿವಪ್ಪ ಅಸೂಟಿ, ರಾಕೇಶ ಗುಂಡೆ ಸೇರಿದಂತೆ ಹಲವರಿದ್ದರು.