ಸಾರಾಂಶ
ಕೊಪ್ಪಳ:
ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಈಗಿರುವ ಬೆಳೆಗಳಿಗೆ ಯಾವುದೇ ಸಮಸ್ಯೆಯಾಗದಂತೆ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದ್ದಾರೆ.ವಿಧಾನಸೌಧದಲ್ಲಿ ಶುಕ್ರವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ಮಾತನಾಡಿದ ಸಚಿವರು, ಪ್ರಸ್ತುತ ಜಲಾಶಯದಲ್ಲಿ ನೀರಿನ ಸಾಮರ್ಥ್ಯ 18 ಟಿಎಂಸಿ, ಇದರಲ್ಲಿ ಡೆಟ್ ಸ್ಟೋರೆಜ್ 2 ಟಿಎಂಸಿ, ಅವಿಯಾಗುವಿಕೆ 1.2 ಟಿಎಂಸಿ, ಈ ಪೈಕಿ ರಾಜ್ಯದ ಪಾಲು 11 ಟಿಎಂಸಿ, ಆಂಧ್ರಪ್ರದೇಶದ ಪಾಲು 4 ಟಿಎಂಸಿ ಇದೆ. ಈ ಹಿನ್ನೆಲೆಯಲ್ಲಿ ಜಲಾಶಯದಲ್ಲಿನ ನೀರಿನ ಲಭ್ಯತೆ ಆಧರಿಸಿ ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರು ಒಳಗೊಂಡಂತೆ ನೀರಾವರಿಗೆ ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ತುಂಗಭದ್ರಾ ಎಡದಂಡೆ ಮುಖ್ಯಕಾಲುವೆ ಮೂಲಕ ಏ. 1ರಿಂದ ಏ. 10ರ ವರೆಗೆ ಕುಡಿಯುವ ನೀರು ಒಳಗೊಂಡಂತೆ ಹಾಗೂ ನಿಂತ ಬೆಳೆಗಳ ಸಂರಕ್ಷಣೆಗಾಗಿ 3000 ಕ್ಯುಸೆಕ್‌ನಂತೆ ನೀರು ಹರಿಸಲಾಗುವುದು. ಎಡದಂಡೆ ವಿಜಯನಗರ ಕಾಲುವೆಗೆ ಏ. 11ರಿಂದ ಮೇ 10ರ ವರೆಗೆ 150 ಕ್ಯುಸೆಕ್‌ನಂತೆ ವಿತರಣಾ ಕಾಲುವೆ 1ರಿಂದ 11ಎ ವರೆಗೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆ ಇರುವವರೆಗೆ ಮಾತ್ರ ಇದ್ದಲ್ಲಿ ಯಾವುದೇ ಮೊದಲು ಅದು ಅನ್ವಯಿಸುತ್ತದೆ ಎಂದು ಹೇಳಿದರು.ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಲಭ್ಯವಾಗುವ ನೀರಿನಲ್ಲಿ ಏ. 1ರಿಂದ ಏ. 10ರ ವರೆಗೆ ಕುಡಿಯುವ ನೀರು ಒಳಗೊಂಡಂತೆ ಹಾಗೂ ನಿಂತ ಬೆಳೆಗಳ ಸಂರಕ್ಷಣೆಗಾಗಿ 450 ಕ್ಯುಸೆಕ್‌ನಂತೆ ನೀರು ಹರಿಸಲಾಗುವುದು. ಇನ್ನು ರಾಯ ಬಸವಣ್ಣ ಕಾಲುವೆಗೆ ಏ. 1ರಿಂದ ಮೇ 31ರ ವರೆಗೆ ಲಭ್ಯವಾಗುವ ನೀರಿನಲ್ಲಿ 200 ಕ್ಯುಸೆಕ್ ನೀರು ಹರಿಸಲಾಗುವುದು ಎಂದು ಶಿವರಾಜ್ ತಂಗಡಗಿ ವಿವರಿಸಿದರು.
ಕುಡಿಯುವ ನೀರು ಮತ್ತು ನಿಂತ ಬೆಳೆಗಳಿಗೆ ಆದ್ಯತೆ ಕೊಟ್ಟು ನೀರು ಒದಗಿಸಲು ತೀರ್ಮಾನ ಮಾಡಲಾಗಿದೆ. ಈ ವೇಳೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗುವುದು ಎಂದು ತಿಳಿಸಿದರು.ಈ ಸಮಯದಲ್ಲಿ ಜಿಲ್ಲಾಧಿಕಾರಿಗಳು ಕಲಂ 144ನ್ನು ಅಳವಡಿಸಿ, ಸೂಕ್ತ ಪೊಲೀಸ್ ಬಂದೋಬಸ್ತ್ ಪಡೆದು, ಕುಡಿಯುವ ನೀರಿನ ಕೆರೆ-ಕಟ್ಟೆ ತುಂಬಿಸಿಕೊಳ್ಳಲು ಸಚಿವರು ಸೂಚಿಸಿದರು.
ಈ ವೇಳೆ ಸಚಿವರಾದ ಜಮೀರ್ ಅಹಮದ್ ಖಾನ್, ಶರಣಪ್ರಕಾಶ ಪಾಟೀಲ್, ಮಾಜಿ ಸಚಿವ ಬಿ. ನಾಗೇಂದ್ರ, ಶಾಸಕರಾದ ನಾಗರಾಜ್, ಎಚ್.ಆರ್. ಗವಿಯಪ್ಪ, ಹಂಪನಗೌಡ ಬಾದರ್ಲಿ, ಗಣೇಶ ಉಪಸ್ಥಿತರಿದ್ದರು.