ಸಾರಾಂಶ
ಕೆಲ ನಾಯಕರು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಶನಿವಾರ ಕರ್ನಾಟಕ ಬಂದ್ ಕರೆ ನೀಡಿದ್ದಾರೆ. ಅವರ ಬೇಡಿಕೆಗಳು ಸಮಂಜಸವಾಗಿದ್ದರೆ ಎಲ್ಲರೂ ಬೆಂಬಲ ಸೂಚಿಸುತ್ತಿದ್ದರು ಎಂದು ನಟ ಹಾಗೂ ಹೋರಾಟಗಾರ ಚೇತನ್ ಅಹಿಂಸಾ ಅಪಸ್ವರ ವ್ಯಕ್ತಪಡಿಸಿದರು.
ಹುಬ್ಬಳ್ಳಿ: ಕೆಲ ನಾಯಕರು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಶನಿವಾರ ಕರ್ನಾಟಕ ಬಂದ್ ಕರೆ ನೀಡಿದ್ದಾರೆ. ಅವರ ಬೇಡಿಕೆಗಳು ಸಮಂಜಸವಾಗಿದ್ದರೆ ಎಲ್ಲರೂ ಬೆಂಬಲ ಸೂಚಿಸುತ್ತಿದ್ದರು ಎಂದು ನಟ ಹಾಗೂ ಹೋರಾಟಗಾರ ಚೇತನ್ ಅಹಿಂಸಾ ಅಪಸ್ವರ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡು-ನುಡಿಗಾಗಿ ಹೋರಾಟ ಮಾಡಬೇಕು. ಕರ್ನಾಟಕದ ಪರವಾಗಿ ಇರುವಂತಹ ಹೋರಾಟಕ್ಕೆ ನಾನು ಎಂದಿಗೂ ಸಿದ್ಧನಾಗಿದ್ದೇನೆ. ಆದರೆ, ಶನಿವಾರದ ಬಂದ್‌ಗೆ ತೂಕ ಇದೆ ಎನಿಸುತ್ತಿಲ್ಲ. ಹೀಗಾಗಿ, ನಾನು ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.ನಟ್ಟು ಬೋಲ್ಟ್ ಹೇಳಿಕೆ ಸರಿಯಲ್ಲ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ನಟ್ಟು ಬೋಲ್ಟ್ ಟೈಟ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಚೇತನ್, ಶ್ರೀಮಂತರಿಗೆ ಲಾಭ ಮಾಡಿಕೊಡುವ ಸಲುವಾಗಿ ಮೇಕೆದಾಟು ಯೋಜನೆ ರೂಪಿಸಲಾಗಿದ್ದು, ಅದು ಜನಪರ ಯೋಜನೆ ಎಂದು ನಾನು ಹೇಳುವುದಿಲ್ಲ. ಯಾವುದೇ ರಂಗವಾಗಲಿ ಹೋರಾಟಕ್ಕೆ ಒಳ್ಳೆಯ ಮಾತಿನಿಂದ ಕರೆದರೆ ಬಂದೇ ಬರುತ್ತಾರೆ. ಡಿ.ಕೆ. ಶಿವಕುಮಾರ ಅವರ ನಡೆ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂಗಾಗುತ್ತದೆ. ನಟ್ಟು ಬೋಲ್ಟು ಎನ್ನುವುದು ದುರಹಂಕಾರ, ಬೆದರಿಕೆಯ ಮಾತಾಗಿದೆ ಎಂದರು.ಜನರ ಬದುಕಿನ ಬಗ್ಗೆ ಚರ್ಚಿಸಿ
ಕೆಲವು ಪ್ರಭಾವಿಗಳು ಮಹಿಳೆಯರನ್ನು ಹನಿಟ್ರ್ಯಾಪ್‌ಗೆ ಬಳಸಿದ ನಂತರ, ಮುಂದೆ ಅವರನ್ನು ಬಲಿಪಶು ಮಾಡಲಾಗುತ್ತದೆ. ಸಮಾಜ ಸೇವೆ ಮಾಡುವಂಥವರು ಈ ರೀತಿ ಕೆಟ್ಟ ಕೆಲಸಕ್ಕೆ ಕೈ ಹಾಕಿದರೆ ಅವರಿಂದ ಸಮಾಜಕ್ಕೂ ಒಳ್ಳೆಯದಲ್ಲ. ವಿಧಾನಸಭೆಯ ಅಧಿವೇಶನದಲ್ಲಿ ಸಿಡಿ, ಪೆನ್ ಡ್ರೈವ್‌ಗಿಂತ ಜನರ ಬದುಕಿನ ಬಗ್ಗೆ ಹೆಚ್ಚಿನ ಚರ್ಚೆ ಆಗುವಂತಾಗಬೇಕು ಎಂದರು.ಶ್ರೀಮಂತರ ಮೇಲೆ ತೆರಿಗೆ ವಿಧಿಸಿ
ವಿದ್ಯುತ್ ಬಿಲ್ ಏರಿಕೆ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ ಚೇತನ್, ಸರ್ಕಾರಗಳು ಶ್ರೀಮಂತರ ಮೇಲೆ ತೆರಿಗೆ ಹಾಕಿ ಆರ್ಥಿಕ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು. ಅದನ್ನು ಬಿಟ್ಟು ಬಡವರ ಹೊಟ್ಟೆಯ ಮೇಲೆ ಹೊಡೆಯುವ ನಿಟ್ಟಿನಲ್ಲಿ ಬಸ್, ವಿದ್ಯುತ್, ಹಾಲು ಹಾಗೂ ಮೆಟ್ರೋ ದರವನ್ನು ಏರಿಕೆ ಮಾಡುವುದು ಸರಿಯಲ್ಲ. ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ ಹಾಕಿ ಬಡವರಿಗೆ ಜನಪರ ಯೋಜನೆ ನೀಡುವಂತಾಗಬೇಕು. ಅದನ್ನು ಬಿಟ್ಟು ಮತ ನೀಡಿ ಆಯ್ಕೆ ಮಾಡಿದ ಜನ ಸಾಮಾನ್ಯರ ಮೇಲೆ ತೆರಿಗೆ ಹೊರೆ ಹೊರಿಸುವುದು ಸರಿಯಲ್ಲ ಎಂದರು.