ಸಾರಾಂಶ
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ನಿವೇಶನ ರಹಿತ ವರ್ತಕರಿಗೆ ಮಳಿಗೆಗಳನ್ನು ಒದಗಿಸುವಂತೆ ಆಗ್ರಹಿಸಿ ಶುಕ್ರವಾರ ನೂರಾರು ವರ್ತಕರು ಮಾರುಕಟ್ಟೆಯಲ್ಲಿ ಪ್ರತಿಭಟನೆ ನಡೆಸಿ ನಂತರ ಎಪಿಎಂಸಿ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಬ್ಯಾಡಗಿ:ಸ್ಥಳೀಯ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ನಿವೇಶನ ರಹಿತ ವರ್ತಕರಿಗೆ ಮಳಿಗೆಗಳನ್ನು ಒದಗಿಸುವಂತೆ ಆಗ್ರಹಿಸಿ ಶುಕ್ರವಾರ ನೂರಾರು ವರ್ತಕರು ಮಾರುಕಟ್ಟೆಯಲ್ಲಿ ಪ್ರತಿಭಟನೆ ನಡೆಸಿ ನಂತರ ಎಪಿಎಂಸಿ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಶುಕ್ರವಾರ ಪಟ್ಟಣದ ಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಪೇಟೆ ಕಾರ್ಯಕರ್ತರು ಎಪಿಎಂಸಿ ಎದುರು ಜಮಾಯಿಸಿದ ವರ್ತಕರು ನಿವೇಶನ ಒದಗಿಸಿಕೊಡುವಂತೆ ಪಟ್ಟು ಹಿಡಿದರು.ದುಬಾರಿ ಬಾಡಿಗೆ: ವರ್ತಕ ರಘು ಬಿನ್ನಾಳ ಮಾತನಾಡಿ, ಮಾರುಕಟ್ಟೆಯಲ್ಲಿ ನಿವೇಶನದ ಕೊರತೆ ಹೆಚ್ಚಾಗಿದೆ, ಇದರಿಂದ ಮಾರುಕಟ್ಟೆಯಲ್ಲಿನ ಸುಮಾರು 180ಕ್ಕೂ ಹೆಚ್ಚು ವರ್ತಕರು ನಿವೇಶನವಿಲ್ಲದೇ ದುಬಾರಿ ಬಾಡಿಗೆ ತೆತ್ತು ವ್ಯಾಪಾರ ವಹಿವಾಟು ಮಾಡುವಂತಾಗಿದೆ. ಕಟ್ಟಡ ಮಾಲೀಕರಿಗೆ ದುಬಾರಿ ಬಾಡಿಗೆ ರೂಪದಲ್ಲಿ ನೀಡಬೇಕಾದ ಅನಿವಾರ‍್ಯತೆ ಎದುರಾಗಿದೆ. ಇದರಿಂದ ವರ್ಷಪೂರ್ತಿ ಬಾಡಿಗೆ ಹಣಕ್ಕೆ ದುಡಿಯಬೇಕಾಗಿದೆ. ಆದ್ದರಿಂದ ನಿವೇಶನ ರಹಿತ ವರ್ತಕರಿಗೆ ನಿವೇಶನಗಳ ಅನುಕೂಲತೆ ಕಲ್ಪಿಸುವಂತೆ ಆಗ್ರಹಿಸಿದರು.
180 ನಿವೇಶನಗಳ ಅವಶ್ಯಕತೆ ಇದೆ: ಪಿ.ಜಿ. ಕಂಬಳಿ ಮಾತನಾಡಿ, ಮಾರುಕಟ್ಟೆ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ದಲಾಲರು, ವರ್ತ ಕರು ಸೇರಿದಂತೆ ಪ್ರತಿಯೊಬ್ಬರ ಶ್ರಮವಿದೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರಿಗೂ ಸಹ ಮನವಿ ಸಲ್ಲಿಸಿದ್ದೇವೆ. ಮಾರುಕಟ್ಟೆ ವಿಸ್ತರಣೆ ಕುರಿತಂತೆ ಸ್ಥಳೀಯ ಎಪಿಎಂಸಿ ಸಕಾಲದಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳದ ಕಾರಣ ವರ್ಷದಿಂದ ವರ್ಷಕ್ಕೆ ನಿವೇಶನ ಕೊರತೆ ಹೆಚ್ಚಾಗುತ್ತಾ ಸಾಗಿದೆ. ಇರುವ 75 ಎಕರೆ ಜಾಗೆಯ ಮಾರುಕಟ್ಟೆಯಲ್ಲಿ ಹೊಸ ಮಳಿಗೆ ನಿರ್ಮಾಣಕ್ಕೆ ಜಾಗವಿಲ್ಲ, ಹೊಸ ಜಾಗವೊಂದನ್ನು ಖರೀದಿ ಮಾಡಿ ಹಂಚಿಕೆ ಮಾಡುವುದೊಂದೇ ಇದಕ್ಕೆ ಸೂಕ್ತ ಪರಿಹಾರ ಆದ್ದರಿಂದ ಮಾರುಕಟ್ಟೆ ಸುತ್ತಮುತ್ತಲಲ್ಲಿ ಇರುವ ಖಾಸಗಿ ವ್ಯಕ್ತಿಗಳ ಜಾಗೆ ಖರೀದಿಸಿ 180ಕ್ಕೂ ಹೆಚ್ಚು ನಿವೇಶನ ಸಹಿತ ಮಳಿಗೆ ಹಂಚಿಕೆ ಮಾಡುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ವರ್ತಕರಾದ ಯಮನೂರಪ್ಪ ಉಜನಿ, ಮೋಹನ ಬಿನ್ನಾಳ, ಜಗದೀಶ ಹಾಲನಗೌಡ್ರ, ಪ್ರಕಾಶ ಛತ್ರದ, ಶಿವಕುಮಾರ ಕಲ್ಲಾಪುರ, ಬಾಬು ಹೂಲಿಹಳ್ಳಿ, ಶಶಿಧರ ಕಲ್ಲಾಪುರ, ಉಮೇಶ ಮಾಳೆನಹಳ್ಳಿ, ಬೀರಪ್ಪ, ಪ್ರಭುಕುಮಾರ ಬಳಿಗಾರ, ಗಿರೀಶ ಕೊಪ್ಪದ, ಪ್ರಕಾಶ ತಾವರಗಿ, ಹರೀಶ ಕಲ್ಯಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ವರ್ತಕರ ಸಂಘದ ಅಧ್ಯಕ್ಷರಿಗೆ ಮನವಿ: ಎಪಿಎಂಸಿ ಕಾರ‍್ಯದರ್ಶಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ ನಂತರ ವರ್ತಕರ ಸಂಘದ ಅಧ್ಯಕ್ಷ, ಮಾಜಿ ಶಾಸಕ ಸುರೇಶಗೌಡ ಪಾಟೀಲ ಅವರಿಗೂ ಮನವಿ ಸಲ್ಲಿಸಿದ ವ್ಯಾಪಾರಸ್ಥರು ನಿವೇಶನ ಸಹಿತ ಮಳಿಗೆ ಒದಗಿಸುವಂತೆ ಆಗ್ರಹಿಸಿದರು.