ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಎಲ್ಲ ವರ್ಗಗಳ ಜನರ ಬಹುದೊಡ್ಡ ಆಸ್ತಿಯಾಗಿರುವ ಡಾ.ಅಂಬೇಡ್ಕರ್ ಅವರನ್ನು ಅಪಮಾನಿಸಿರುವ ಕೇಂದ್ರ ಸಚಿವ ಅಮಿತ್ ಶಾ ಅಂಬೇಡ್ಕರ್ ಪ್ರತಿಮೆ ಎದುರು ಮಂಡಿಯೂರಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಬೆಳ್ಳೂರಿನಲ್ಲಿ ವಿವಿಧ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಪ್ರಗತಿಪರ ಚಿಂತಕ ನಿಖೇತ್‌ರಾಜ್ ಮೌರ್‍ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ನಮ್ಮನ್ನಾಳುವ ಜನಪ್ರತಿನಿಧಿಗಳು ನಿಜವಾಗಿಯೂ ಅಂಬೇಡ್ಕರ್ ಅವರ ಜಪದೊಂದಿಗೆ ಅವರ ತತ್ವಾದರ್ಶ ಪಾಲನೆ ಮಾಡಿದ್ದರೆ ನರಕದಂತಾಗಿರುವ ಈ ನೆಲವನ್ನು ಸ್ವರ್ಗವನ್ನಾಗಿಸಬಹುದಿತ್ತು ಎಂದರು.
ಡಾ.ಅಂಬೇಡ್ಕರ್ ನೀಡಿರುವ ಕೊಡುಗೆಯಿಂದಾಗಿ ದೇಶದ ಎಲ್ಲಾ ಜಾತಿ ವರ್ಗದ ಮಕ್ಕಳು ಶಾಲೆಯಲ್ಲಿ ಒಟ್ಟಿಗೆ ಕುಳಿತು ಸಮಾನತೆಯಿಂದ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, 75 ವರ್ಷಗಳ ಹಿಂದೆ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಜಾರಿಯಾಗದಿದ್ದರೆ ಇಂತಹ ದಿನವನ್ನು ನೋಡಲು ಸಾಧ್ಯವಾಗುತ್ತಿತ್ತೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು ಎಂದರು.ಡಾ.ಅಂಬೇಡ್ಕರ್ ಎಂದರೆ ಅದೊಂದು ದೊಡ್ಡ ಶಕ್ತಿ, ಜ್ಞಾನ. ಹೋರಾಟ, ಅರಿವು, ವಿದ್ಯೆ ಮತ್ತು ಸಮಾನತೆ. ಅಂತಹ ಮಹಾನ್ ವ್ಯಕ್ತಿ ಈ ರಾಷ್ಟ್ರದಲ್ಲಿ ಜನಿಸದಿದ್ದರೆ ಈ ನೆಲವನ್ನು ಇಷ್ಟೊತ್ತಿಗೆ ನರಕವನ್ನಾಗಿಸುತ್ತಿದ್ದರು. ಮನುವಾದಿಗಳು ದೇವರು, ಧರ್ಮ, ಸ್ವರ್ಗ ನರಕ ಎಂದು ನಮ್ಮನ್ನು ಪರಸ್ಪರ ಎತ್ತಿಕಟ್ಟುವ ಮೂಲಕ ಮನುಸ್ಮೃತಿಯನ್ನು ಜಾರಿಗೆ ತರುವ ಹುನ್ನಾರ ನಡೆಸುತ್ತಿದ್ದಾರೆ. ಇದರ ಭಾಗವಾಗಿಯೇ ಅಮಿತ್ ಶಾ ಅಂಬೇಡ್ಕರ್ ಅವರನ್ನು ಅಪಮಾನಿಸಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಅಮಿತ್ ಶಾ ಅಂಬೇಡ್ಕರ್ ಪ್ರತಿಮೆ ಎದುರು ಮಂಡಿಯೂರಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ ಬಳಿಕ ಬೆಳ್ಳೂರು ನಾಡ ಕಚೇರಿಯ ಉಪ ತಹಸೀಲ್ದಾರ್ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಬೆಳ್ಳೂರು ಪಪಂ ಉಪಾಧ್ಯಕ್ಷ ಯಾಸೀನ್, ದಲಿತ ಮುಖಂಡರಾದ ಎಂ.ನಾಗರಾಜಯ್ಯ, ಬೆಳ್ಳೂರು ಶಿವಣ್ಣ, ಕೆ.ಜಿ.ಶಿವಮೂರ್ತಿ, ವೆಂಕಟೇಶ್, ಜಿಪಂ ಮಾಜಿ ಅಧ್ಯಕ್ಷ ಶಿವಣ್ಣ, ಬಿ.ಜೆ.ನಾಗರಾಜು, ಕಂಚನಹಳ್ಳಿ ನಾಗರಾಜು, ದಾಸಪ್ಪ, ಪಾಪಣ್ಣ, ರಘು, ಜಯಪಾಲ್, ವೆಂಕಟೇಶ್ ಸೇರಿದಂತೆ ಹಲವರು ಇದ್ದರು.