ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಒತ್ತಾಯಿಸಿ ಪ್ರತಿಭಟನೆ

| Published : Jan 25 2024, 02:02 AM IST

ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಒತ್ತಾಯಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮೂಡಿಗೆರೆಪಟ್ಟಣದಿಂದ ಚಿಕ್ಕಮಗಳೂರು, ಬೇಲೂರು, ಮಂಗಳೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಗೊಳಿಸಬೇಕೆಂದು ಒತ್ತಾಯಿಸಿ ವಿವಿಧ ಸಂಘ ಸಂಸ್ಥೆಯಿಂದ ಪಟ್ಟಣದ ಕೆ.ಎಂ.ರಸ್ತೆಯಲ್ಲಿ ಬುಧವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸ ಲಾಯಿತು.

ಜನಪ್ರತಿನಿಧಿಗಳು, ಅಧಿಕಾರಿಗಳು ನಿದ್ರೆಯಿಂದ ಹೊರ ಬಂದು ಕ್ರಮ ವಹಿಸಲಿ: ಬಿ.ಸಿ. ದಯಾಕರ್

ಕನ್ನಡಪ್ರಭ ವಾರ್ತೆ, ಮೂಡಿಗೆರೆ

ಪಟ್ಟಣದಿಂದ ಚಿಕ್ಕಮಗಳೂರು, ಬೇಲೂರು, ಮಂಗಳೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಗೊಳಿಸಬೇಕೆಂದು ಒತ್ತಾಯಿಸಿ ವಿವಿಧ ಸಂಘ ಸಂಸ್ಥೆಯಿಂದ ಪಟ್ಟಣದ ಕೆ.ಎಂ.ರಸ್ತೆಯಲ್ಲಿ ಬುಧವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸ ಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಗ್ರೀನ್ ಆರ್ಮಿ ಇಂಡಿಯಾದ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಸಿ. ದಯಾಕರ್ ಮಾತನಾಡಿ, ದೇಶದಲ್ಲಿ ಸರ್ವೆ ನಡೆಸಿದಾಗ 5850 ಅಪಘಾತ ವಲಯ ಪ್ರದೇಶವೆಂದು ಗುರುತಿಸಲಾಗಿತ್ತು. ಅದರಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ ಎಂಬ ವರದಿ ಕೂಡ ಬಂದಿತ್ತು. ಮೂಡಿಗೆರೆ ತಾಲೂಕು ಪ್ರವಾಸಿ ತಾಣಗಳ ಬೀಡಾಗಿದ್ದರಿಂದ ವಾಹನಗಳ ದಟ್ಟಣಿ ಅಧಿಕವಾಗಿದೆ. ಇದರಿಂದ ಅಪಘಾತ ಕೂಡ ಹೆಚ್ಚಾಗುತ್ತಿದೆ. ಓಬಿರಾಯನ ಕಾಲದ ರಸ್ತೆಗಳಲ್ಲೇ ವಾಹನಗಳು ತಿರುಗಾಡುವಂತಾಗಿದೆ. ಹಾಗಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿದ್ರೆಯಿಂದ ಹೊರ ಬಂದು ರಸ್ತೆ ಅಗಲೀಕರಣಕ್ಕೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ಕರವೇ ಜಿಲ್ಲಾಧ್ಯಕ್ಷ ಪ್ರಸನ್ನ ದಾರದಹಳ್ಳಿ ಮಾತನಾಡಿ, ರಾಜಕಾರಣ ಹಣ ಮಾಡುವ ಮಾಫಿಯಾ ಆಗಿಬಿಟ್ಟಿದೆ. ಜನರಿಗೆ ನೀರು, ರಸ್ತೆ, ವಿದ್ಯುತ್, ಚರಂಡಿ, ಸುಸಜ್ಜಿತ ಆಸ್ಪತ್ರೆಯಂತಹ ಮೂಲಭೂತ ಸೌಕರ್ಯ ಒದಗಿಸುವುದು ಆಳುವ ಸರಕಾರದ ಕರ್ತವ್ಯ. ಅದನ್ನು ಬಿಟ್ಟು ಕೇವಲ ಜನರಿಗೆ ಇಲ್ಲಸಲ್ಲದ ಆಮಿಷ, ಭರವಸೆ ನೀಡುವುದರಲ್ಲಿಯೇ ಕಾಲ ಕಳೆದರೆ ಜನರ ಸಮಸ್ಯೆ ನಿವಾರಣೆಯಾಗುವುದಿಲ್ಲ. ಇಲ್ಲಿರುವ ರಾಷ್ಟ್ರೀಯ ಹೆದ್ದಾರಿ ಎರಡೂ ಬದಿಯಲ್ಲಿ ಚರಂಡಿಯೇ ಇಲ್ಲ. ಅಲ್ಲದೇ ಕಾಡು ಬೆಳೆದು ವಾಹನ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಹಾಗಾಗಿ ಕೂಡಲೇ ರಸ್ತೆ ಅಗಲೀಕರಣಗೊಳಿಸಬೇಕು. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಚರಂಡಿ, ಜಂಗಲ್ ಕಟ್ ಮಾಡಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಪ್ರತಿಭಟನೆ ಉಗ್ರ ಸ್ವರೂಪ ಪಡೆಯುತ್ತದೆ ಎಂದು ಎಚ್ಚರಿಕೆ ನೀಡಿದರು. ಬಳಿಕ ಶಿರಸ್ತೆದಾರ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಡಿ.ಆರ್.ಪುಟ್ಟಸ್ವಾಮಿಗೌಡ, ಜಿಲ್ಲಾ ಸಂಚಾಲಕ ಡಿ.ಎಸ್.ರಮೇಶ್, ರೈತ ಮುಖಂಡ ಮಂಜುನಾಥ್‌ಗೌಡ, ಎಂ.ಎನ್.ಚಂದ್ರೇಗೌಡ, ಕರವೇ ಮುಖಂಡರಾದ ಕುಮಾರ್ ಬಕ್ಕಿ, ಕೆ.ಪಿ.ಮೋಹನ್, ಹಸನಬ್ಬ, ಯಾಕೂಬ್, ಶಿವಣ್ಣ ಮತ್ತಿತರರಿದ್ದರು. ಫೋಟೊ 24ಎಂಡಿಜಿ1ಎ:

ಮೂಡಿಗೆರೆ ಪಟ್ಟಣದ ಕೆ.ಎಂ.ರಸ್ತೆಯಲ್ಲಿ ವಿವಿಧ ಸಂಘಟನೆ ಮುಖಂಡರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಫೋಟೊ 24ಎಂಡಿಜಿ1ಬಿ:

ಮೂಡಿಗೆರೆ ತಾಲೂಕಿನಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ಅಗಲೀಕರಣಗೊಳಿಸಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.