ಬಸ್ ಪ್ರಯಾಣ ದರ ಹೆಚ್ಚಳ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

| Published : Jan 04 2025, 12:33 AM IST

ಬಸ್ ಪ್ರಯಾಣ ದರ ಹೆಚ್ಚಳ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

20 ರು. ಇದ್ದ ಸ್ಟ್ಯಾಂಪ್ ಪೇಪರ್ ಬೆಲೆಯನ್ನು 100 ರು.ಗೆ ಏರಿಸಿದ್ದಾರೆ. ನೋಂದಣಿ ದರ, ಆಸ್ತಿ ತೆರಿಗೆ ದರ ಶೇ.30 ರಿಂದ 40ಕ್ಕೆ ಏರಿಕೆಯಾಗಿದೆ. ವಿದ್ಯುತ್ ದರ, ಜನನ ಮರಣ ಪ್ರಮಾಣ ಪತ್ರ ಶುಲ್ಕ, ಹಾಲಿನ ದರ ಹಾಗೂ ಜೊತೆಗೆ ಈಗ ಕೆಎಸ್‌ಆರ್‌ ಟಿಸಿ ಬಸ್ ಗಳ ಪ್ರಯಾಣ ದರವನ್ನು ಶೇ.15 ಏರಿಸಿರುವುದು ಸರಿಯಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಕೆಎಸ್ಆರ್‌ಟಿಸಿ ಬಸ್‌ಗಳ ಪ್ರಯಾಣ ದರ ಶೇ.15 ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಹಾಗೂ ಬಸ್ ಪ್ರಯಾಣ ದರ ಹೆಚ್ಚಳವನ್ನು ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ಸೇನಾ ಪಡೆಯವರು ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟಿಸಿದರು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ಬೆಲೆ ಏರಿಕೆ ಮಾಡಿ, ಕನ್ನಡಿಗರ ರಕ್ತ ಹೀರುತ್ತಿದೆ. ರಾಜ್ಯ ಸರ್ಕಾರದ ಬಕಾಸುರ ಹೊಟ್ಟೆ ತುಂಬಿಸಲು ಕನ್ನಡಿಗರು ಇನ್ನೆಷ್ಟು ತೆರಿಗೆ ಶುಲ್ಕ ತೆತ್ತಬೇಕೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

20 ರು. ಇದ್ದ ಸ್ಟ್ಯಾಂಪ್ ಪೇಪರ್ ಬೆಲೆಯನ್ನು 100 ರು.ಗೆ ಏರಿಸಿದ್ದಾರೆ. ನೋಂದಣಿ ದರ, ಆಸ್ತಿ ತೆರಿಗೆ ದರ ಶೇ.30 ರಿಂದ 40ಕ್ಕೆ ಏರಿಕೆಯಾಗಿದೆ. ವಿದ್ಯುತ್ ದರ, ಜನನ ಮರಣ ಪ್ರಮಾಣ ಪತ್ರ ಶುಲ್ಕ, ಹಾಲಿನ ದರ ಹಾಗೂ ಜೊತೆಗೆ ಈಗ ಕೆಎಸ್‌ಆರ್‌ ಟಿಸಿ ಬಸ್ ಗಳ ಪ್ರಯಾಣ ದರವನ್ನು ಶೇ.15 ಏರಿಸಿರುವುದು ಸರಿಯಲ್ಲ ಎಂದು ಖಂಡಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಹಲವಾರು ಬಿಟ್ಟಿ ಭಾಗ್ಯ ಘೋಷಣೆ ಮಾಡಿ, ಈಗ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದೆ. ಶ್ರೀಲಂಕಾ, ದೆಹಲಿಯದಂತೆ ನಮ್ಮ ರಾಜ್ಯವು ಆರ್ಥಿಕ ದೀವಾಳಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಮುಖಂಡರಾದ ಕೃಷ್ಣಪ್ಪ, ಪ್ರಭುಶಂಕರ್, ಹನುಮಂತಯ್ಯ, ಪ್ರಭಾಕರ್, ನೇಹಾ, ಶಿವಕುಮಾರ್, ಭಾಗ್ಯಮ್ಮ, ಶಾಂತರಾಜೇ ಅರಸ್, ನಾಗರಾಜು, ಶುಭಶ್ರೀ, ಕೃಷ್ಣೇಗೌಡ, ಸ್ವಾಮಿಗೌಡ, ರಘು ಅರಸ್, ಪ್ರದೀಪ್, ದರ್ಶನ್ ಗೌಡ, ಚಂದ್ರಶೇಖರ್, ತ್ಯಾಗರಾಜ, ಬವರಾಜು, ಗುರುಮಲ್ಲಪ್ಪ, ರಾಮಕೃಷ್ಣೇಗೌಡ ಮೊದಲಾದವರು ಇದ್ದರು.

ಒಳ ಮೀಸಲಾತಿ ವಿಷಯದಲ್ಲಿ ತಾರತಮ್ಯ: ಆರೋಪ

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ತಾರತಮ್ಯ ಎಸಗುತ್ತಿದೆ. ಹೀಗಾಗಿ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದಂತೆ ಕೂಡಲೇ ಜಾರಿಗೊಳಿಸದಿದ್ದರೆ ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ವತಿಯಿಂದ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ವೇದಿಕೆ ಅಧ್ಯಕ್ಷ ಎಸ್. ಅರುಣ್‌ಕುಮಾರ್ ಎಚ್ಚರಿಸಿದರು.

ಕಳೆದ ಆ. 1ರಂದು ಸುಪ್ರೀಂಕೋರ್ಟ್ ತೀರ್ಪು ಬಂದ ಮೇಲೆ ರಾಜ್ಯಾದ್ಯಂತ ಒಳ ಮೀಸಲಾತಿ ಜಾರಿಗಾಗಿ ನಿರಂತರ ಹೋರಾಟ ನಡೆಯತ್ತಿದೆ. ಹೀಗಾಗಿ ಕಳೆದ ವರ್ಷದ ಅ. 17 ರಂದು ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಗಾಗಿ ಸಭೆ ಕರೆಯುತ್ತೇವೆಂದು ತಿಳಿಸಿ ಮುಂದೂಡಿ ಆ ತಿಂಗಳ 24ಕ್ಕೆ ನಿಗದಿಗೊಳಿಸಲಾಗಿತ್ತು.

ಬಳಿಕ ಮೂರು ತಿಂಗಳ ಒಳಗಾಗಿ ಜಾರಿಗೊಳಿಸಲಾಗುವುದು. ಆ ಬಳಿಕ ಯಾವುದೇ ವೃಂದ ಕಾಲಿಕ ಸರ್ಕಾರಿ ನೇಮಕ, ಬ್ಯಾಕ್ ಲಾಗ್‌ ಹುದ್ದೆ ತುಂಬುವುದಿಲ್ಲ ಎಂದು ತಿಳಿಸಲಾಗಿತ್ತು. ಜೊತೆಗೆ ಎಚ್.ಎನ್. ನಾಗಮೋಹನ್ ಅವರ ಸಮಿತಿಯನ್ನು ಈ ಕುರಿತಂತೆ ರಚಿಸಲಾಗಿತ್ತು. ಆದರೂ ಇದು ಪೂರ್ಣಗೊಂಡಿಲ್ಲ. ಈ ರೀತಿಯ ಧೋರಣೆ ಕೂಡಲೇ ಕೈಬಿಡದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ವಕೀಲರಾದ ಎಂ. ದಾಸಯ್ಯ, ಎಂ. ಶಿವಕುಮಾರ್, ಬೂದಿತಿಟ್ಟು ರಾಜೇಂದ್ರ, ಚಂದ್ರಸೇನ ಸಾಗರ್, ಮಾಳಪ್ಪ ಕುರಿಕೆ ಮೊದಲಾದವರು ಇದ್ದರು.