ಸಾರಾಂಶ
ನರಗುಂದ: ಮಿನಿ ವಿಧಾನಸೌಧ ಆವರಣದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ರೈತರು ತಮ್ಮ ಜಮೀನುಗಳ ಪಹಣಿ ಪತ್ರಿಕೆಯಲ್ಲಿ ಸರ್ಕಾರ ಎಂದು ನಮೂದು ಆಗಿದ್ದನ್ನು ಕಡಿಮೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಕುಮಾರಸ್ವಾಮಿ ಹಿರೇಮಠ, ರೈತರ ಜಮೀನಿನ ಪಹಣಿ ಪತ್ರಿಕೆ ಕಾಲಂ ನಂ.9ರಲ್ಲಿ ಸರ್ಕಾರ ಅಂತ ನಮೂದು ಇದ್ದ ಕಾರಣ ರೈತರಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಪಹಣಿ ಪತ್ರಿಕೆಯಲ್ಲಿನ ಸರ್ಕಾರ ಎಂಬ ಶಬ್ದದಿಂದ ರೈತರ ಬದುಕು ಮೂರಾಬಟ್ಟೆ ಆಗುತ್ತಿದೆ. ಸರ್ಕಾರ ಎಂಬ ಪದವನ್ನು ಉತಾರದಿಂದ ಕೂಡಲೇ ತೆಗೆದು ಹಾಕಬೇಕೆಂದು ಆಗ್ರಹಿಸಿದರು.ತಾಲೂಕಿನ ಹದಲಿ, ಗಂಗಾಪೂರ, ಬೈರನಹಟ್ಟಿ, ಖಾನಾಪೂರ ಹಾಗೂ ರಡ್ಡೇರ ನಾಗನೂರ ಗ್ರಾಮಗಳ ವಿವಿಧ ರೈತರೊಂದಿಗೆ ಅವರು ಮಾತನಾಡಿ, ಏಳೆಂಟನೂರ ಎಕರೆದಷ್ಟು ರೈತರ ಪಹಣಿ ಪತ್ರಿಕೆಯಲ್ಲಿ ಸರ್ಕಾರವೆಂದು ನಮೂದಾಗಿದ್ದರಿಂದ ಸರ್ಕಾರದಿಂದ ಸಿಗುವ ಯಾವುದೇ ಪರಿಹಾರಗಳು ಸಿಗುತ್ತಿಲ್ಲ. ಇದರಿಂದ ಕೃಷಿ ಚಟುವಟಿಕೆ ಮಾಡಲು ರೈತರಿಗೆ ಉತ್ಸಾಹವೇ ಇಲ್ಲದಂತಾಗಿದೆ. ಆಜುಬಾಜು ಇರುವ ಅನೇಕ ರೈತರಿಗೆ ಸರಕಾರದ ಸೌಲಭ್ಯಗಳು ಸಿಗುತ್ತಿದ್ದರೆ, ನಮಗೆ ಸೌಲಭ್ಯಗಳು ಸಿಗದೇ ವಂಚಿತರಾಗುತ್ತಿದ್ದೇವೆ. ಹೀಗಾದರೆ ಕೃಷಿ ಮಾಡುವುದಾದರೂ ಹೇಗೆ ಎಂಬ ಚಿಂತೆ ನಮ್ಮನ್ನು ಕಾಡುತ್ತಿದೆ. ಸರಕಾರ ನಿರ್ಲಕ್ಷ್ಯ ಮಾಡದೇ ರೈತರ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಹೇಳಿದರು.ರೈತ ಕಲ್ಲಪ್ಪ ಹೂಗಾರ ಮಾತನಾಡಿ, 1995ರಲ್ಲಿ ಆನಂದ ಮೌಲ್ಯಾ ಎನ್ನುವ ತಹಸೀಲ್ದಾರ್‌ರು ನೀರಿನ ಕರ ಹಾಗೂ ಹಪ್ತಾ ತುಂಬದ ರೈತರ, ಬೈಂಡಿಂಗ್ ಸಾಲ ಪಡೆದ ರೈತರ ಪಹಣಿ ಪತ್ರಿಕೆಯಲ್ಲಿ ಸರಕಾರ ಎಂದು ನಮೂದು ಮಾಡಿದ್ದಾರೆ. ಆಗಿನಿಂದ ಸರಕಾರದ ಫಸಲ ಬಿಮಾ ಯೋಜನೆ, ಬೆಳೆ ಪರಿಹಾರ, ಬರ ಪರಿಹಾರ, ಬೆಳೆ ಸಾಲ ಹೀಗೆ ಯಾವ ಸೌಲಭ್ಯಗಳು ರೈತರಿಗೆ ಸಿಗುತ್ತಿಲ್ಲ. ಕೃಷಿ ಚಟುವಟಿಕೆಗೆ ಪ್ರೋತ್ಸಾಹ ನೀಡಲು ಪಹಣಿಯಲ್ಲಿನ ಸರ್ಕಾರ ಎಂಬ ಪದವನ್ನು ಕೂಡಲೇ ತೆಗೆದು ಹಾಕಬೇಕು. ಜುಲೈ 21ರ ವರೆಗೆ ನಮ್ಮ ಹೋರಾಟ ನಿರಂತರ ಇರುತ್ತದೆ. ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದನೆ ನೀಡದಿದ್ದಲ್ಲಿ ಜುಲೈ 22ರಿಂದ ಗದಗ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹೋರಾಟವನ್ನು ನಡೆಸಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಶಶಿಗೌಡ ಯಲ್ಲಪ್ಪಗೌಡ್ರ, ಬಸವರಾಜ ಬಳ್ಳೊಳ್ಳಿ, ಚನ್ನಪ್ಪ ನರಸಾಪೂರ, ಲಕ್ಷ್ಮಣ ಮುನೇನಕೊಪ್ಪ, ಸುರೇಶಗೌಡ ತಮ್ಮನಗೌಡ್ರ, ಮಲ್ಲಿಕಾರ್ಜುನಗೌಡ ಪರ್ವತಗೌಡ್ರ, ಶಂಕರಗೌಡ ಮರಿಗೌಡ್ರ, ಕಲ್ಲಪ್ಪ ಹೂಗಾರ, ಹನುಮಂತಪ್ಪ ಕೇರಿ, ಮಹಾದೇವಗೌಡ ಯಲ್ಲಪ್ಪಗೌಡ್ರ, ಲಕ್ಷ್ಮಣ ಅವ್ವಣ್ಣವರ, ಬಸಣ್ಣ ಯಾವಗಲ್ಲ, ಮಾನಂದಮ್ಮ ಹಿರೇಮಠ, ವಿವಿಧ ಗ್ರಾಮಗಳ ರೈತರಿದ್ದರು.