Led by the Karnataka Prantha Raitha Sangha, workers staged a protest in front of the Gram Panchayat in Ingalagi village, demanding employment under the VBG Ramji scheme

-ವಿಬಿಜಿ ರಾಮ್‌ಜಿ ಯೋಜನೆಯಡಿ ಸಮುದಾಯ ಆಧಾರಿತ ಕಾಮಗಾರಿ ಕೈಗೊಳ್ಳಲು ಒತ್ತಾಯ

----

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಇಂಗಳಗಿ ಗ್ರಾಮದಲ್ಲಿ ವಿಬಿಜಿ ರಾಮ್‌ಜಿ ಯೊಜನೆಯಡಿ ಕಾರ್ಮಿಕರಿಗೆ ಕೆಲಸ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಕಾರ್ಮಿಕರು ಗ್ರಾಪಂ ಎದುರು ಪ್ರತಿಭಟನೆ ನಡೆಸಿದರು.

ಇಂಗಳಗಿ ಗ್ರಾಮದಲ್ಲಿ ೧೦೦೦ ಕೂಲಿ ಕಾರ್ಮಿಕರು ವಿಬಿಜಿ ರಾಮ್ ಜಿ ಯೋಜನೆಯಡಿ ಸಮರ್ಪಕವಾಗಿ ಕೆಲಸ ದೊರೆಯದ ಕಾರಣ ಕಾರ್ಮಿಕರು ಉದ್ಯೋಗ ಅರಸಿ ಮಹಾನಗರಗಳಿಗೆ ಗುಳೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಬದುಕು ಸಾಗಿಸುವುದಕ್ಕೆ ಕಷ್ಟಕರವಾಗಿದೆ, ಕೆಲಸ ನೀಡದಿದ್ದರೆ ಮನೆಯ ಜವಬ್ದಾರಿ ಸರ್ಕಾರವೇ ನೊಡಿಕೊಳ್ಳಲಿ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ನರೇಗಾ ಯೊಜನೆಯಡಿ ಇಂಗಳಗಿಯಲ್ಲಿ ಪ್ರತಿವರ್ಷ ೪೦ ಸಾವಿರ ಮಾನವ ದಿನಗಳ ಉದ್ಯೊಗ ಸೃಷ್ಟಿಯಾಗುತ್ತಿತ್ತು. ಆದರೆ, ವಿಬಿಜಿ ರಾಮ್‌ಜಿ ಯೋಜನೆ ಜಾರಿ ಬಳಿಕ ಗ್ರಾಮದಲ್ಲಿ ಕೆರೆಗಳಿಲ್ಲ ಎಂಬ ನೆಪವೊಡ್ಡಿ ಕಾರ್ಮಿಕರಿಗೆ ಕೆಲಸ ನೀಡುತ್ತಿಲ್ಲ. ಕೃಷಿ ಹೊಂಡದಂತಹ ವೈಯಕ್ತಿಕ ಕಾಮಗಾರಿಗಳಿಂದ ಗ್ರಾಮದ ಎಲ್ಲಾ ಕಾರ್ಮಿಕರಿಗೆ ಉದ್ಯೊಗ ಕಲ್ಪಿಸಲು ಸಾಧ್ಯವಿಲ್ಲ.

ಆದ್ದರಿಂದ, ಸಮುದಾಯ ಆಧಾರಿತ ಕಾಮಗಾರಿ ರೂಪಿಸಿ ಕಾರ್ಮಿಕರಿಗೆ ಕೆಲಸ ನೀಡಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.

ಗ್ರಾಮದಲ್ಲಿ ಸರ್ವೆ ನಂ. ೨೫ರ ೫ ಎಕರೆ ಸರ್ವೆ ನಂ. ೧೬೩ ರ ೯-೨೧ ಎಕರೆ ಹಾಗೂ ಸರ್ವೆ ನಂ. ೧೧೬ರ ೧೬೧ ಎಕರೆ ಗಾಯರಾಣ ಜಮೀನು ಇದೆ. ಆದರೆ, ಅಧಿಕಾರಿಗಳು ಇದನ್ನು ಪರಿಶೀಲಿಸಿ ಅಗತ್ಯವಿರುವ ಕಡೆ ಕೆರೆ ನಿರ್ಮಿಸಿ ಸಮುದಾಯ ಆಧಾರಿತ ಕಾಮಗಾರಿ ಕೈಗೊಳ್ಳಬೇಕೆಂದು ಸದಸ್ಯರು ಒತ್ತಾಯಿಸಿದರು.

ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಕೂಲಿ ಕಾರ್ಮಿಕರಿಗೆ ಉದ್ಯೊಗ ದೊರೆಯುವಂತೆ ತುರ್ತುಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಪಂ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ಸಂಘ ಎಚ್ಚರಿಕೆ ನೀಡಿದೆ.

ಪ್ರತಿಭಟನೆಯಲ್ಲಿ ಕೆಪಿಅರ್‌ಎಸ್ ಗ್ರಾಮ ಘಟಕದ ಅಧ್ಯಕ್ಷ ಶಿಲ್ಪಾ ತೆಳಗೇರಿ ಕಾರ್ಯದರ್ಶಿ ನಾಗಮ್ಮ ಪೂಜಾರಿ, ಮಮತಾ ನಾಟೀಕಾರ, ಖದೀರ ಪಾಶಾ, ಶಿವಕುಮಾರ ಹೂಗಾರ, ಲಕ್ಷ್ಮೀ ಪೂಜಾರಿ, ಮಂಜುನಾಥ ಕರದಳ್ಳಿ ಭಾಗವಹಿಸಿದ್ದರು.

ಪಂಚಾಯತಿ ಕಾರ್ಯದರ್ಶಿ ಸಂಗಮೇಶ ಹಿರೆಮಠ ಮನವಿ ಸ್ವೀಕರಿಸಿ ಶೀಘ್ರದಲ್ಲಿ ಕಾರ್ಮಿಕರಿಗೆ ಕೆಲಸ ನೀಡಲಾಗುತ್ತದೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಪೋಟೋ: ೧೨-೮ ಸಿಟಿಪಿಅರ್ ೧

ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಕೂಲಿ ಕಾರ್ಮಿಕರಿಗೆ ವಿಬಿಜಿ ರಾಮ್‌ಜಿ ಯೊಜನೆಯಡಿ ಕೆಲಸ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಪಂಚಾಯತಿ ಎದುರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.