ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತಸಂಘ ಕಾರ್ಯಕರ್ತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸೋಮವಾರಕ್ಕೆ 50ನೇ ದಿನಕ್ಕೆ ಕಾಲಿಟ್ಟಿದ್ದರೂ ಜಿಲ್ಲಾಡಳಿತ ಸ್ಪಂದಿಸದೆ ಇರುವುದನ್ನು ಖಂಡಿಸಿ ರೈತಸಂಘದ ಕಾರ್ಯಕರ್ತರು ತಮಟೆ ಚಳವಳಿ ಮೂಲಕ ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತಸಂಘ ಕಾರ್ಯಕರ್ತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸೋಮವಾರಕ್ಕೆ 50ನೇ ದಿನಕ್ಕೆ ಕಾಲಿಟ್ಟಿದ್ದರೂ ಜಿಲ್ಲಾಡಳಿತ ಸ್ಪಂದಿಸದೆ ಇರುವುದನ್ನು ಖಂಡಿಸಿ ರೈತಸಂಘದ ಕಾರ್ಯಕರ್ತರು ತಮಟೆ ಚಳವಳಿ ಮೂಲಕ ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭವಾದ ತಮಟೆ ಚಳವಳಿ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿದ ಬಳಿಕ ಮತ್ತೆ ತಾಲೂಕು ಕಚೇರಿ ಮುಂದೆ ಸಮಾವೇಶ ಗೊಂಡು ಜಿಲ್ಲಾಡಳಿತ,ಉಸ್ತುವಾರಿ ಸಚಿವರು ಮತ್ತು ಶಾಸಕರ ವಿರುದ್ಧ ರೈತರು ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

50 ದಿನವಾದರೂ ಸ್ಪಂದಿಸದ ಆಡಳಿತದ ಬಗ್ಗೆ ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ ತಾಲೂಕು ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದರು.

ಜಿಲ್ಲಾ ಮತ್ತು ತಾಲೂಕು ಆಡಳಿತ ಬದುಕಿದೆಯಾ? ಸತ್ತಿದೆಯಾ? ಎಂಬಂತಾಗಿದೆ.50 ದಿನಗಳಿಂದ ರೈತಸಂಘದ ಕಾರ್ಯಕರ್ತರು ಮಳೆ, ಬಿಸಿಲು, ಚಳಿ ಎನ್ನದೆ ಕುಳಿತು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಡಳಿತ ಸ್ಪಂದಿಸಿಲ್ಲ ಎಂದ ಮೇಲೆ ಜಿಲ್ಲಾಡಳಿತಕ್ಕೆ ಮಾನ ಇಲ್ಲ ಎಂದರು.

ಮತದಾನದ ಹಕ್ಕಿನಿಂದ ರೈತರು ಹಾಗು ಜನರ ಮತ ಪಡೆದು ಗೆದ್ದಿರುವ ಸಚಿವರು ಹಾಗೂ ಶಾಸಕರು ನಮಗೆ ಗೊತ್ತೇ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ.ಇವರಿಗೆ ಪಂಚೇಂದ್ರಿಯವೇ ಇಲ್ಲ,ಇಂತಹವರು ನಮಗೆ ಬೇಕಾ? ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಗುಡುಗಿದರು.

50 ದಿನಗಳಿಂದ ಪ್ರತಿದಿನ ಎರಡೆರಡು ಸಾಗುವಳಿ ಅರ್ಜಿ ರೆಡಿ ಮಾಡಿದರೂ ಇಂದಿಗೆ ೧೦೦ಆಗಬೇಕಿತ್ತು.ಆದರೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಟೇಬಲ್ ಕೆಳಗೆ ಕೊಟ್ಟರೆ ಮೂರು ದಿನದಲ್ಲಿ ಕೆಲಸ ಆಗುತ್ತದೆ.70 ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಆದರೆ ಗಣಿಗಾರಿಕೆಗೆ ಅನುಮತಿ ನೀಡಲು ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು.

3592 ಜನಕ್ಕೆ ಸಾಗುವಳಿ ಕೊಡಲು ಇನ್ನೆಷ್ಟು ದಿನ ಬೇಕು? ನಾವು ನಿಮ್ಮ ಪಿತ್ರಾರ್ಜಿತ ಆಸ್ತಿ ಕೇಳುತ್ತಿಲ್ಲ,60 ವರ್ಷಗಳಿಂದ ಉಳುಮೆ ಮಾಡುತ್ತಿರುವ ನಮ್ಮದೇ ಭೂಮಿಯನ್ನು ಕೇಳುತ್ತಿದ್ದೇವೆ. ರೈತರ ಬೇಡಿಕೆ ಈಡೇರಿಸ ಕಾಲ ಕಳೆದರೆ ಕಾನೂನು ಭಂಗ ಚಳುವಳಿ ನಡೆಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅರಣ್ಯ ಇಲಾಖೆಯು ರೈತರಿಗೆ ಮೋಸ ಮಾಡಿ ಬರೆಸಿಕೊಂಡಿದ್ದಾರೆ.ಯಾವ ರೈತರಿಗೆ ಅರಣ್ಯ ಇಲಾಖೆ ತೊಂದರೆ ಕೊಟ್ಟರೂ ನಾವು ಸುಮ್ಮನಿರುವುದಿಲ್ಲ.ನಾವು ಜೈಲಿಗೆ ಹೋದರೂ ಯೋಚನೆ ಮಾಡುವುದಿಲ್ಲ. ಯಾವುದೇ ಅಧಿಕಾರಿಗಳು ಬಂದರೂ ಜಮೀನನ್ನು ಬಿಡಬೇಡಿ,ನೂರು ಕೇಸ್ ಹಾಕಿದರೂ ಬಿಡಬೇಡಿ ಎಂದರು.

ಅ.16 ರಂದು ಪಟ್ಟಣದಲ್ಲಿ ತಾಲೂಕಿನಾದ್ಯಂತ ಇರುವ ಎತ್ತಿನ ಗಾಡಿ,ಟ್ರ್ಯಾಕ್ಟರ್ ಸಮೇತ ಕರೆಸಿ ತಾಲೂಕು ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳ ಲಾಗಿದೆ ರೈತರು ಪಕ್ಷಾತೀತವಾಗಿ ಪ್ರತಿಭಟನೆ ಬನ್ನಿ ಎಂದರು.

ರೈತರ ಪರವಾಗಿದ್ದರೆ ಶಾಸಕರು ಒಂದು ದಿನ ನಮ್ಮ ಜೊತೆ ಬಂದು ಕುಳಿತುಕೊಳ್ಳಬೇಕು.ರೈತರಿಗೆ ಕೊಟ್ಟ ಮಾತಿನಂತೆ ಶಾಸಕರು ನಡೆದುಕೊಂಡಿಲ್ಲ.ಕೆರೆ ನೀರಿನ ವಿಚಾರದಲ್ಲೀ ಮಾತಿಗೆ ತಪ್ಪಿದ್ದಾರೆ.ಸಾಗುವಳಿ ಚೀಟಿ ನೀಡಲು ಸಂಪೂರ್ಣ ವಿಫಲರಾಗಿದ್ದಾರೆ ಎಂದರು.

ರೈತಸಂಘದ ತಾಲೂಕು ಅಧ್ಯಕ್ಷ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಪ್ರಸಾದ್‌, ರೈತಸಂಘದ ಮುಖಂಡರಾದ ರಘು, ಹಕ್ಕಲಪುರ ಕುಮಾರ್‌, ಚಿಕ್ಕ ತಾಯಮ್ಮ, ಬಸಪ್ಪ, ಗುರುಪ್ರಸಾದ್‌, ರೋಹನ್‌ ಗೌಡ, ಮಹದೇವಸ್ವಾಮಿ, ಕಾರ್ಯಕರ್ತರು ಇದ್ದರು.