ಸಾರಾಂಶ
ಕನ್ನಡಪ್ರಭ ವಾರ್ತೆ ಲಿಂಗಸುಗೂರು
2ಎ ಮೀಸಲಾತಿ ಜಾರಿಗೆ ಆಗ್ರಹಿಸಿ ಕೂಡಲ ಸಂಗಮದ ಪಂಚಮಸಾಲಿ ಗುರುಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ಲಿಂಗಸುಗೂರು ತಾಲೂಕಿನ ಯರಡೋಣಾ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗಪೂಜೆ ನಡೆಸಿ ವಿಶಿಷ್ಟ ಹೋರಾಟ ಮಾಡುವ ಮುಲಕ ಸರ್ಕಾರದ ಗಮನ ಸೆಳೆದರು. ಲಿಂಗಪೂಜೆ ನಡೆಸಿ ಹೋರಾಟದ ವೇಳೆ ಕೆಲ ಹೊತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.ಹೋರಾಟದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಮಹಾತ್ಮ ಗಾಂಧಿಜಿಯವರು ಸ್ವರಾಜ್ಯವೇ ನಮ್ಮ ಜನ್ಮ ಸಿದ್ದ ಹಕ್ಕು ಎಂದು ಹೇಗೆ ಹೇಳಿದರೊ ಅದರಂತೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನಮ್ಮ ಸಮುದಾಯದ ಜನ್ಮಸಿದ್ದ ಹಕ್ಕು ಎಂದು ಹೋರಾಡುತ್ತಿದ್ದೇವೆ ಎಂದು ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಬಸವ ಜಯಮೃತ್ಯುಂಜಯ ಸ್ವಾಮಿಜಿಗಳು ಹೇಳಿದರು.
ಕಳೆದ ಮೂರು ವರ್ಷಗಳಿಂದ ಮೀಸಲಾತಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದು, ಮೂರು ಜನ ಮುಖ್ಯಮಂತ್ರಿಗಳು ಬದಲಾಗಿದ್ದಾರೆ. ಹಿಂದಿನ ಸರ್ಕಾರ 2ಡಿ ಮೀಸಲಾತಿ ನೀಡಲು ಮುಂದಾಗಿತ್ತು. ಆದರೆ, ನೀತಿ ಸಂಹಿತೆ ಜಾರಿಯಾದ ಕಾರಣ ಅದು ಜಾರಿ ಆಗಲಿಲ್ಲ. ಬಿಜೆಪಿ ಸರ್ಕಾರದ ನಿರ್ಧಾರವನ್ನು ಈ ಸರ್ಕಾರ ಒಪ್ಪುತ್ತಿಲ್ಲ ಅದ್ದರಿಂದ ಸಮಾಜಕ್ಕೆ 2 ಎ ಮೀಸಲಾತಿಯನ್ನು ನೀಡಬೇಕು ಎಂದು ಮತ್ತೆ ಹೋರಾಟ ನಡೆಸಲಾಗುತ್ತಿದೆ ಎಂದರು.ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ವಾರದೊಳಗಾಗಿ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರಸವೆ ನೀಡಿದ್ದರು. ನಾವು ಸಹ ವಾರ ಬೇಡ ಸಂಕ್ರಾಂತಿವರೆಗೂ ಸಮಯ ತೆಗೆದುಕೊಳ್ಳುವಂತೆ ನುಡಿದಿದ್ದೇವು. ಆದರೆ ಸಿಎಂ ನೀಡಿದ ಕಾಲಮಿತಿಯಲ್ಲಿ ಚರ್ಚೆ ನಡೆಸಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯುವುದಕ್ಕಾಗಿ ರಾಜ್ಯ ಎಲ್ಲ ಜಿಲ್ಲೆಗಳಲ್ಲಿನ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಇಷ್ಟಲಿಂಗ ಪೂಜೆ ನಡೆಸುವ ಮೂಲಕ ಹೋರಾಟವನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ ನ್ಯಾಯಬದ್ದವಾದ 2ಎ ಮೀಸಲಾತಿ ನೀಡುತ್ತಿಲ್ಲ. ಇದರಿಂದ ಇಂದು ಪಂಚಮಸಾಲಿ ಸಮುದಯದ ಜನರು ಬೀದಿಗೆ ಬಂದು ಇಷ್ಟಲಿಂಗ ಪೂಜೆ ಮಾಡಿ ಮೀಸಲಾತಿ ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಹೋರಾಟ ಸರ್ಕಾರ ಗಂಬೀರವಾಗಿ ಪರಿಗಣಿಗೆ ಕೂಡಲೇ ಮೀಸಲಾತಿ ಜಾರಿ ಮಾಡಬೇಕೆಂದು ಆಗ್ರಹಿಸಿದರು.ದಾವಣಗೆರೆ, ಬೆಳಗಾವಿ ಒಳಗೊಂಡು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಹೋರಾಟ ಮಾಡಿದ್ದೇವೆ. ಸರ್ಕಾರಗಳ ನಿರ್ಲಕ್ಷ ದೋರಣೆ ಖಂಡಿಸಿ ಸರ್ಕಾರಕ್ಕೆ ಮೀಸಲಾತಿ ಜಾರಿ ಮಾಡುವ ಬುದ್ದಿ ಬರಲೆಂದು ಅಮರೇಶ್ವರರ ಜನ್ಮ ಸ್ಥಳ ಯರಡೋಣ ಗ್ರಾಮದಲ್ಲಿ ಲಿಂಗಪೂಜೆ ಜಿಲ್ಲಾಮಟ್ಟದ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಅಧಿವೇಶನದ ಸಂದರ್ಭದಲ್ಲಿ ಮೀಸಲಾತಿ ಕುರಿತು ಮಾತುಕತ ನಡೆಸಿ ಅಧಿವೇಶನ ಮುಗಿದ ಕೂಡಲೇ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕುರಿತು ಸಭೆ ನಡೆಸುವುದಾಗಿ ಹೇಳಿದ್ದಾರೆ. ಇದುವರೆಗೂ ಸಭೆ ಕರೆದಿಲ್ಲ. ಬೆಳಗಾವಿಯಲ್ಲಿ ಕೊಟ್ಟ ಮಾತಿನಂತೆ ಅವರು ಕೂಡಲೆ ಸಭೆ ಕರೆದು ಮೀಸಲಾತಿ ಜಾರಿ ಬಗ್ಗೆ ಸ್ಪಷ್ಟ ನಿಲುವನ್ನು ಘೋಷಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಜಂಗಮರಹಳ್ಳಿಯ ಮೌನೇಶ ತಾತ, ಪಂಚಮಸಾಲಿ ಸಮುದಾಯದ ತಾಲೂಕ ಅಧ್ಯಕ್ಷ ಅಮರೇಶ ತಾವರಗೇರಾ, ಜಿಲ್ಲಾಧ್ಯಕ್ಷ ಮಹಾಂತಗೌಡ ಪಾಟೀಲ್, ಶಂಕರಗೌಡ ಅಮರಾವತಿ, ಮಲ್ಲಿಕಾರ್ಜುನ ನಾಡಗೌಡ, ವಿಜಯಲಕ್ಷ್ಮಿ ದೇಸಾಯಿ, ಗೌರಮ್ಮ, ವಿಜಯ ಕುಮಾರ ಹೊಸಗೌಡ್ರು ಇತರರು ಇದ್ದರು.