371(ಜೆ) ಮೀಸಲಾತಿ ನಿಯಮಗಳ ಸಮಗ್ರ ಅನುಷ್ಠಾನಕ್ಕಾಗಿ ಪ್ರತಿಭಟನೆ

| Published : Jul 17 2024, 12:54 AM IST

ಸಾರಾಂಶ

ಕಳೆದ ಒಂದು ದಶಕದ ಅವಧಿಯಲ್ಲಿ 371ಜೆ ಮೀಸಲಾತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ. ಇದರಿಂದಾಗಿ ಸಂವಿಧಾನಬದ್ಧ ಹಕ್ಕುಗಳಿಂದ ಈ ಭಾಗದ ಜನರು ವಂಚಿತರಾಗುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಸಂವಿಧಾನದ ಅನುಚ್ಛೇದ 371(ಜೆ) ಮೀಸಲಾತಿ ನಿಯಮಗಳ ಸಮಗ್ರ ಹಾಗೂ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಮತ್ತು 371(ಜೆ) ಕುರಿತು ಗೊಂದಲ ಸೃಷ್ಟಿಸುತ್ತಿರುವ ಸಂಘಟನೆಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ನೇತೃತ್ವದಲ್ಲಿ ನೂರಾರು ಜನರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 2013ರಲ್ಲಿ ಭಾರತ ಸರ್ಕಾರ ಸಂವಿಧಾನದ ಅನುಚ್ಛೇದ 371(ಜೆ) ತಿದ್ದುಪಡಿ ಮೂಲಕ ವಿಶೇಷ ಸ್ಥಾನಮಾನ ಒದಗಿಸಿದೆ. ಈ ಭಾಗದ ನಿವಾಸಿಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಸಿಗಬೇಕು ಎಂಬುದು ಇದರ ಮುಖ್ಯ ಉದ್ದೇಶವಾಗಿದೆ. ಆದರೆ, ಕಳೆದ ಒಂದು ದಶಕದ ಅವಧಿಯಲ್ಲಿ 371(ಜೆ) ಮೀಸಲಾತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ. ಇದರಿಂದಾಗಿ ಸಂವಿಧಾನಬದ್ಧ ಹಕ್ಕುಗಳಿಂದ ಈ ಭಾಗದ ಜನರು ವಂಚಿತರಾಗುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹೋರಾಟ ಸಮಿತಿ ಅಧ್ಯಕ್ಷ ಸಿರಿಗೇರಿ ಪನ್ನರಾಜ್ ಮಾತನಾಡಿ, 371(ಜೆ) ಮೀಸಲಾತಿ ಅನುಷ್ಠಾನಕ್ಕೆ ವಿನಾಕಾರಣ ಕೊಕ್ಕೆ ಬೀಳುತ್ತಿದ್ದು, ಸಮರ್ಪಕ ಜಾರಿಗೆ ಹೋರಾಟ ನಡೆಸುತ್ತಿರುವ ನಡುವೆ, ಸಚಿವ ಎಚ್.ಕೆ.ಪಾಟೀಲ್ ಅವರು ಸರ್ಕಾರಕ್ಕೆ ಪತ್ರ ಬರೆದು, ಉದ್ಯೊಗ ಕಲ್ಯಾಣ ಕರ್ನಾಟಕದ ಭಾಗದ ಜನರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಿದಲ್ಲಿ ಇನ್ನುಳಿದ ಜಿಲ್ಲೆಗಳಿಗೆ ಅನ್ಯಾಯವಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೇ ಮಾನದಂಡವನ್ನಾಗಿಟ್ಟುಕೊಂಡು ಕೆಲವು ಸಂಘಟನೆಗಳು ಬೆಂಗಳೂರಿನಲ್ಲಿ 371(ಜೆ) ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಸಂವಿಧಾನಬದ್ಧ ಹಕ್ಕಿನ ವಿರುದ್ಧ ಪ್ರತಿಭಟನೆ ನಡೆಸಲು ಅವಕಾಶ ನೀಡಿರುವುದು ಸಹ ಸರ್ಕಾರದ ತಪ್ಪು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ನೆಲೆಯಲ್ಲಿ ಈ ಹಿಂದಿನಿಂದಲೂ ಹಿನ್ನಡೆ ಕಂಡಿದೆ. ಹೀಗಾಗಿಯೇ 371(ಜೆ)ಯಡಿ ತಿದ್ದುಪಡಿ ಮಾಡಿ ಈ ಭಾಗದ ಜನರಿಗೆ ಶಿಕ್ಷಣ ಹಾಗೂ ಉದ್ಯೋಗ ಮೀಸಲಾತಿ ದೊರೆಯುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಮನಸ್ಥಿತಿಗಳು ಗೊಂದಲ ಸೃಷ್ಟಿಸುತ್ತಿದ್ದಾರೆ. ಇದು ರಾಜ್ಯದ ಐಕ್ಯತೆ ದೃಷ್ಟಿಯಿಂದ ಸರಿಯಾದ ಕ್ರಮವಲ್ಲ ಎಂದು ಸಚಿವ ಎಚ್‌.ಕೆ.ಪಾಟೀಲ್ ವಿರುದ್ಧ ಹರಿಹಾಯ್ದರು.

ಸಂವಿಧಾನದ ಅನುಚ್ಛೇದ 371(ಜೆ) ಅನ್ವಯ ಜಾರಿಯಲ್ಲಿರುವ ಮೀಸಲಾತಿ ನಿಯಮಗಳನ್ನು ಸಮರ್ಪಕ ಅನುಷ್ಠಾನಗೊಳಿಸಬೇಕು. ಈ ಸಂಬಂಧ ಡಾ.ಡಿ.ಎಂ.ನಂಜುಂಡಪ್ಪನವರ ವರದಿ ಅನುಷ್ಠಾನ ಸಮಿತಿ ಮಾದರಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ 371(ಜೆ) ಅನುಷ್ಠಾನ ಪ್ರಾಧಿಕಾರ ರಚಿಸಿ, ಸೂಕ್ತ ಅಧಿಕಾರ ನೀಡಬೇಕು. 371(ಜೆ) ಗೆ ಸಂಬಂಧಿಸಿದಂತಹ ನೇಮಕಾತಿ ಪ್ರಕ್ರಿಯೆ ವ್ಯಾಜ್ಯಗಳು ಕಲಬುರಗಿ ಮಾತ್ರ ಕಾರ್ಯನಿರ್ವಹಿಸುವಂತೆ ಸರ್ಕಾರ ಆದೇಶಿಸಬೇಕು. ಇದಕ್ಕಾಗಿ ಪ್ರತ್ಯೇಕ 371(ಜೆ) ನ್ಯಾಯಮಂಡಳಿ ರಚಿಸಬೇಕು. 371(ಜೆ) ಅರ್ಹತಾ ಪ್ರಮಾಣ ಪತ್ರ ವಿತರಣೆಯಲ್ಲಿ ಸಾಕಷ್ಟು ಗೊಂದಲಗಳಿದ್ದು, ಇದರ ದುರುಪಯೋಗಪಡಿಸಿಕೊಂಡು ಕಲ್ಯಾಣ ಕರ್ನಾಟಕವಲ್ಲದ ಪ್ರದೇಶದ ಜನರು ಅರ್ಹತಾ ಪ್ರಮಾಣ ಪತ್ರ ಪಡೆಯುತ್ತಿದ್ದು, ಇದರಿಂದ ಈ ಭಾಗದ ಜನರಿಗೆ ಅನ್ಯಾಯವಾಗುತ್ತಿದೆ. ಈ ನಿಯಮಗಳಲ್ಲಿ ಅಮೂಲಾಗ್ರ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಹೋರಾಟ ಸಮಿತಿಯ ಸಂಗನಕಲ್ಲು ಹಿಮಂತರಾಜು, ವಿಜಯಕುಮಾರ್, ಮೀನಳ್ಳಿ ಚಂದ್ರಶೇಖರ್, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಜೆ.ವಿ.ಮಂಜುನಾಥ್, ಪದ್ಮಾವತಿ , ಕರ್ನಾಟಕ ಯುವಕ ಸಂಘದ ಜಿಲ್ಲಾಧ್ಯಕ್ಷ ಜಿ. ಬಸವರಾಜ್, ಶಿವರಾಜ್, ಲೆಕ್ಕಪರಿಶೋಧಕ ವೆಂಕಟನಾರಾಯಣ, ವಿಶ್ವನಾಥ ಆಚಾರ್ಯ, ಅಲ್ಲೀಪುರ ಶ್ರೀನಿವಾಸ್, ಶರಣಯ್ಯಸ್ವಾಮಿ, ಪ್ರಕಾಶ್ ಸೇರಿದಂತೆ ಬಳ್ಳಾರಿಯ ರಾವ್ ಬಹದ್ದೂರ್ ಎಂಜಿನಿಯರಿಂಗ್ ಕಾಲೇಜು, ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀ ಚೈತನ್ಯ ಕಾಲೇಜು ಹಾಗೂ ಶ್ರೀಮೇಧಾ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಇಲ್ಲಿನ ಗಾಂಧಿ ಭವನದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಗಡಗಿಚನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ, ಮುಖ್ಯಮಂತ್ರಿಗಳಿಗೆ ಬರೆದ ಮನವಿಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.