ಸಾರಾಂಶ
ಕುಡಿಯುವ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿ ಮಹಿಳೆಯರು ಶನಿವಾರ ಕುರುಗೋಡು ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಐದು ದಿನಗಳಿಂದ ನೀರು ಸರಬರಾಜು ಮಾಡದ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದಿನದಿಂದ ದಿನಕ್ಕೆ ಬಿಸಿಲು ಹೆಚ್ಚುತ್ತಿರುವುದರಿಂದ ಜನರು ಪರಿತಪಿಸುವಂತಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಪುರಸಭೆ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನೆನಿರತರು ಆರೋಪ ಮಾಡಿದರು.
ಕನ್ನಡಪ್ರಭ ವಾರ್ತೆ ಕುರುಗೋಡು
ಕುಡಿಯುವ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿ ಮಹಿಳೆಯರು ಶನಿವಾರ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಐದು ದಿನಗಳಿಂದ ನೀರು ಸರಬರಾಜು ಮಾಡದ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದಿನದಿಂದ ದಿನಕ್ಕೆ ಬಿಸಿಲು ಹೆಚ್ಚುತ್ತಿರುವುದರಿಂದ ಜನರು ಪರಿತಪಿಸುವಂತಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಪುರಸಭೆ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನೆನಿರತರು ಆರೋಪ ಮಾಡಿದರು.ನೀರು ಸರಬರಾಜು ಮಾಡುವ ಮೋಟರ್ ಕೆಟ್ಟು ಐದು ದಿನಗಳು ಕಳೆದಿವೆ. ಪಟ್ಟಣದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಕೆಲವು ವಾರ್ಡ್‌ಗಳಿಗೆ ಮಾತ್ರ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ. ಉಳಿದ ವಾರ್ಡ್‌ಗಳಲ್ಲಿ ನೀರಿಗಾಗಿ ಜನರು ತೊಂದರೆ ಎದುರಿಸುತ್ತಿದ್ದಾರೆ. ಅಧಿಕಾರಿಗಳನ್ನು ಕೇಳಿದರೆ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂದು ಮಹೇಶ್ ಮತ್ತು ಕರಡಿ ನಾಗಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ನೀರು ಸರಬರಾಜಿಗೆ ಕೂಡಲೇ ಕ್ರಮಕೈಗೊಳ್ಳದಿದ್ದರೆ ಭಾನುವಾರದಿಂದ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದರು.ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಮಾತನಾಡಿ, ಮೋಟರ್ ದುರಸ್ತಿ ಕಾರ್ಯ ತಡವಾದ ಪರಿಣಾಮ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಮೋಟರ್ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಭಾನುವಾರದಿಂದ ನೀರು ಸರಬರಾಜು ಮಾಡಲಾಗುವುದು ಎಂದರು.
ಸಿದ್ದಮ್ಮ, ಪಾರ್ವತಿ, ಮದಾರ್ ಬೀ, ಲಕ್ಷಮ್ಮ, ಭಾಗ್ಯಮ್ಮ, ಫಕ್ಕೀರಮ್ಮ, ಯಂಕಮ್ಮ, ಹಂಪಮ್ಮ, ತಿಮ್ಮಪ್ಪ, ಬಸವರಾಜ, ಮತ್ತು ಜೈತುನ್ಬೀ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.