- ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಕೆಗೆ ಸಂಘಟನೆಗಳ ಒತ್ತಾಯ
- ಹಳೆ ಮೀಸಲಾತಿಯನ್ನೇ ಆಧರಿಸಿ ಒಳಮೀಸಲಾತಿ ಜಾರಿಗೆ ಜನಾಗ್ರಹ---
ಕನ್ನಡಪ್ರಭ ವಾರ್ತೆ ಚಾಮರಾಜನಗರಒಳಮೀಸಲಾತಿಯನ್ನು ಸಂಪೂರ್ಣವಾಗಿ ಜಾರಿಗೆ ಒತ್ತಾಯಿಸಿ ಡಾ. ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟ ಹಾಗೂ ಮಾದಿಗ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.ಡಾ.ಬಿ.ಆರ್. ಅಂಬೇಡ್ಕರ್ ಭವನದಿಂದ ಪ್ರತಿಭಟನಾ ಮೆರವಣಿಗೆ ಹೊರಟು ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಳ್ಳಿ ವೃತ್ತ, ಪಚ್ಚಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ನಂತರ ಮೆರವಣಿಗೆಯು, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನವರೆಗೂ ಹೋಯಿತು. ಅಲ್ಲಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಒಳಮೀಸಲಾತಿ ಜಾರಿಗೆ ತರಬೇಕು. ಹಲವು ವರ್ಷಗಳಿಂದ ಮಾದಿಗ ಸಮುದಾಯ ನಿರಂತರ ಹೋರಾಟ ನಡೆಸುತ್ತಿದ್ದರೂ ನ್ಯಾಯಯುತ ಒಳಮೀಸಲಾತಿ ಸಿಗದಿರುವುದರಿಂದ ಸಾಮಾಜಿಕ ಅನ್ಯಾಯ ಮುಂದುವರಿದಿದೆ ಎಂದು ಆರೋಪಿಸಿದರು. ಸುಪ್ರೀಂ ಕೋರ್ಟ್ ಆದೇಶದಂತೆ ರಚಿಸಲಾದ ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿ ಅನ್ವಯ ಒಳಮೀಸಲಾತಿ ಜಾರಿಗೆ ತರದೇ, ಸರ್ಕಾರ ಸ್ವಯಂ ಪ್ರೇರಣೆಯಿಂದ ಎ. ಬಿ. ಸಿ ವರ್ಗೀಕರಣ ಮಾಡಿ ಅನ್ಯಾಯ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.೫೬,೩೪೨ ಹುದ್ದೆಗಳನ್ನು ಹಳೆಯ ಮೀಸಲಾತಿ ವ್ಯವಸ್ಥೆಯಲ್ಲಿಯೇ ಒಳಮೀಸಲಾತಿ ಅನ್ವಯಿಸಿ ಭರ್ತಿ ಮಾಡಬೇಕು. ಉದ್ಯೋಗ ನೇಮಕಾತಿ, ಬ್ಯಾಕ್‌ಲಾಗ್, ಮುಂಬಡ್ತಿ ಸೇರಿದಂತೆ ಎಲ್ಲ ಹಂತಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವತ್ರಿಕ ಚುನಾವಣೆಯಲ್ಲಿಯೂ ಒಳಮೀಸಲಾತಿ ಅಳವಡಿಕೆ, ಎಸ್‌ಇಪಿ, ಟಿಎಸ್‌ಪಿ ಸೇರಿದಂತೆ ವಿವಿಧ ಆರ್ಥಿಕ ಸವಲತ್ತುಗಳಲ್ಲಿ ಒಳಮೀಸಲಾತಿ ಜಾರಿಗೆ ತೀರ್ಮಾನ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.ಮೀಸಲಾತಿ ವ್ಯವಸ್ಥೆಯನ್ನು ಸಂವಿಧಾನದ ೯ನೇ ಅನುಸೂಚಿಗೆ ಸೇರಿಸುವ ಅಗತ್ಯ ಕ್ರಮ ಕೈಗೊಳ್ಳಬೇಕು. ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕು. ರಾಜಕೀಯ ಚುನಾವಣೆಗಳಲ್ಲಿ ಸಂಪೂರ್ಣ ಒಳಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಸಂಪೂರ್ಣ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಈಗಾಗಲೇ ಬೆಂಗಳೂರಿನ ಸ್ವಾತಂತ್ರ್ಯಉದ್ಯಾನವನದಲ್ಲಿ ಸಮುದಾಯದಿಂದ ಹೋರಾಟ ಮಾಡಲಾಗಿದ್ದು, ಮಾ.೨೭ರ ವಿಶೇಷ ಸಚಿವ ಸಂಪುಟದಲ್ಲಿ ಸಂಪೂರ್ಣ ಒಳಮೀಸಲಾತಿ ಜಾರಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಒತ್ತಾಯ ಮಾಡಲಾಗಿದೆ. ಇದು ನಮ್ಮ ಅಳಿವು- ಉಳಿವಿನ ಹೋರಾಟವಾಗಿದೆ ಎಂದರು.ಪ್ರತಿಭಟನೆಯಲ್ಲಿ ಡಾ. ಬಾಬು ಜಗಜೀವನರಾಮ್ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ಬಸವನಪುರ ರಾಜಶೇಖರ್, ಜಿಲ್ಲಾಧ್ಯಕ್ಷ ನಾಗರಾಜು, ಮುಖಂಡರಾದ ಸಿದ್ದಯ್ಯ, ರಾಜಣ್ಣ, ಮರಪ್ಪ, ಮೂರ್ತಿ, ಶಿವಕುಮಾರ್, ಬಸವರಾಜು, ಶಿವಣ್ಣ, ಗೋಪಿ, ದ್ವಾರಕಿ ಬಸವರಾಜು, ಶಿವಮಲ್ಲು, ಸಿದ್ದೇಶ್, ಗುರುಲಿಂಗಯ್ಯ, ರಂಗಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು.---೨೬ ಸಿಎಚ್‌ಎನ್೧ ಮತ್ತು ೨ಒಳಮೀಸಲಾತಿ ಸಂಪೂರ್ಣ ಜಾರಿಗೆ ಒತ್ತಾಯಿಸಿ ಡಾ. ಬಾಬುಜಗಜೀವನರಾಂ ಸಂಘಟನೆಗಳ ಒಕ್ಕೂಟ ಹಾಗೂ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಯಿತು.