ಆಗಸ್ಟ್ ತಿಂಗಳಿನಲ್ಲಿ ಪಕ್ಷದಿಂದ ವೃದ್ಧರ, ವಿಧವೆಯರ, ವಿಶೇಷ ಚೇತನರ ಪಿಂಚಣಿ ಬಿಡುಗಡೆ ಮಾಡಲು ಹೋರಾಟ ಮಾಡಲಾಗಿತ್ತು. ಎರಡು ತಿಂಗಳು ಕಳೆದರೂ ಇನ್ನೂ ಪಿಂಚಣಿ ಹಣವು ಜನತೆಯ ಕೈಗೆ ಸೇರಿಲ್ಲ.

ಧಾರವಾಡ:

ಕಳೆದ ಏಳು ತಿಂಗಳಿನಿಂದ ಸ್ಥಗಿತಗೊಳಿಸಿರುವ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಕೂಡಲೇ ಬಿಡುಗಡೆ ಮಾಡಲು ಆಗ್ರಹಿಸಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ಜರುಗಿತು.

ಜಿಲ್ಲೆಯ ವಿವಿಧ ಗ್ರಾಮಗಳು, ಕೊಳಗೇರಿಗಳಿಂದ ಭಾಗವಹಿಸಿದ್ದ ಪ್ರತಿಭಟನಾಕಾರರು, ಬದುಕಿಗೆ ಆಸರೆಯಾಗಿದ್ದ ಪಿಂಚಣಿ ಕೊಡದ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಂಘಟನೆ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಜಡಗಣ್ಣವರ ಮಾತನಾಡಿ, ಆಗಸ್ಟ್ ತಿಂಗಳಿನಲ್ಲಿ ಪಕ್ಷದಿಂದ ವೃದ್ಧರ, ವಿಧವೆಯರ, ವಿಶೇಷ ಚೇತನರ ಪಿಂಚಣಿ ಬಿಡುಗಡೆ ಮಾಡಲು ಹೋರಾಟ ಮಾಡಲಾಗಿತ್ತು. ಎರಡು ತಿಂಗಳು ಕಳೆದರೂ ಇನ್ನೂ ಪಿಂಚಣಿ ಹಣವು ಜನತೆಯ ಕೈಗೆ ಸೇರಿಲ್ಲ. ಇಂದಿನ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತು ಅತ್ಯಂತ ಗಂಭೀರ ಬರ ಪರಿಸ್ಥಿತಿ ಎದುರಿಸುತ್ತಿರುವ ರೈತ, ಕೃಷಿ ಕಾರ್ಮಿಕರಿಗೆ ಸರ್ಕಾರವು ಸಹಾಯ ಹಸ್ತವನ್ನು ನೀಡುವ ಬದಲಾಗಿ ಪಿಂಚಣಿ ರದ್ದುಗೊಳಿಸಿರುವುದು ಅಮಾನವೀಯ ಎಂದರು.

ಜಿಲ್ಲೆ ಮಾತ್ರವಲ್ಲದೇ ಇಡೀ ರಾಜ್ಯಾದ್ಯಂತ 18.6 ಲಕ್ಷ ಜನರ ಪಿಂಚಣಿ ಸ್ಥಗಿತಗೊಳಿಸಲಾಗಿದೆ. ದಾಖಲೆಗಳ ಮರುಪರಿಶೀಲನೆಯ ನೆಪದಲ್ಲಿ ಬಡತನ ರೇಖೆಗಿಂತಲೂ ಕಡಿಮೆ ಆದಾಯದಲ್ಲಿ ಬದುಕುತ್ತಿರುವ ಸಮಾಜದ ಆರ್ಥಿಕ ದುರ್ಬಲರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ, ದಾಖಲೆಗಳನ್ನು ಕ್ರೂಡೀಕರಿಸಿ ಒದಗಿಸುವ ಪ್ರಯಾಸಕರ ಪರಿಸ್ಥಿತಿಗೆ ತಳ್ಳಿದೆ. ವೃದ್ಧರು, ವಿಧವೆಯರು, ವಿಶೇಷ ಚೇತನರು ಈ ಪ್ರಕ್ರಿಯೆಯಲ್ಲಿ ರೋಸಿ ಹೋಗಿದ್ದಾರೆ. ಕೊನೆಗೂ ದಾಖಲೆಗಳನ್ನು ಒದಗಿಸಿ ಹಲವು ತಿಂಗಳುಗಳು ಕಳೆದರೂ ಪಿಂಚಣಿ ಹಣ ಕೈಗೆ ಸೇರಿಲ್ಲ ಎಂದು ಹೇಳಿದರು.

ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಗಂಗಾಧರ ಬಡಿಗೇರ ಮಾತನಾಡಿ, ವಿಧಾನಸಭೆಯಲ್ಲಿ ತಮ್ಮ ಸಂಬಳವನ್ನು ದುಪ್ಪಟ್ಟು ಮಾಡಿಕೊಳ್ಳುವುದರಲ್ಲಿ ಯಾವುದೇ ಹಿಂಜರಿಕೆ ತೋರದ ರಾಜಕಾರಣಿಗಳು ಬಡವರ ಪಿಂಚಣಿಯನ್ನು ರದ್ದು ಮಾಡುವುದು ಯಾವ ನೈತಿಕತೆ? ಎಂದು ಪ್ರಶ್ನಿಸಿದರು.

ಈ ವೇಳೆ ಪಕ್ಷದ ಮುಖಂಡರಾದ ಭವಾನಿಶಂಕರ್ ಗೌಡ, ಶರಣು ಗೋನವಾರ, ಮಧುಲತಾ ಗೌಡರ್, ದೀಪಾ ಧಾರವಾಡ ಇದ್ದರು.