ಹೊಸ ಅಮರಗೋಳ ಗ್ರಾಮದಲ್ಲಿ 37 ಪರಿಶಿಷ್ಟ ಕುಟುಂಬಗಳಿಗೂ ಹಕ್ಕುಪತ್ರ ವಿತರಣೆ ಮಾಡಬೇಕು. ಸ್ಥಳಾಂತರಗೊಂಡಿರುವ ನವಗ್ರಾಮದಲ್ಲಿ ಬೀದಿದೀಪಗಳು, ಚರಂಡಿ, ರಸ್ತೆ, ಕುಡಿಯುವ ನೀರು ಕಲ್ಪಿಸಿ ಕೊಡಬೇಕು ಎಂದು ಆಗ್ರಹಿಸಲಾಯಿತು.
ರೋಣ: ಪ್ರವಾಹ ಪರಿಸ್ಥಿತಿಗೆ ತುತ್ತಾದ ಗ್ರಾಮಗಳ ಸ್ಥಳಾಂತರಕ್ಕೆ ರಾಜ್ಯ ಸರ್ಕಾರ ಆಸರೆ ಯೋಜನೆ ಅಡಿ ನಿರ್ಮಿಸಿದ ನವಗ್ರಾಮಗಳ ಮನೆಗಳ ಹಕ್ಕುಪತ್ರ ಇದುವರೆಗೂ ದೊರೆಯದ ಕಾರಣ ಹೊಳೆಆಲೂರು ಹೋಬಳಿಯ ಅಮರಗೋಳ ಗ್ರಾಮ ಪಂಚಾಯಿತಿ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸೋಮವಾರ ಧರಣಿ ಸತ್ಯಾಗ್ರಹ ನಡೆಯಿತು.
2009ರಲ್ಲಿ ಉಂಟಾದ ಮಲಪ್ರಭೆಯ ಭೀಕರ ಪ್ರವಾಹ ತಾಲೂಕಿನ ಹೊಳೆಆಲೂರು ಭಾಗದ ಅಮರಗೋಳ ಸೇರಿದಂತೆ ಹಲವು ಹಳ್ಳಿಗಳನ್ನು ಮುಳುಗಡೆಗೊಳಿಸಿತ್ತು. ಆ ವೇಳೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಅಂದಿನ ರಾಜ್ಯ ಸರ್ಕಾರ ವಿವಿಧ ಸಂಘ- ಸಂಸ್ಥೆಗಳ ನೆರವಿನಿಂದ ಆಸರೆ ಯೋಜನೆ ರೂಪಿಸಿ ಗ್ರಾಮಗಳನ್ನು ಸ್ಥಳಾಂತರಿಸಿ ನೂತನ ಮನೆಗಳನ್ನು ನಿರ್ಮಿಸಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂದಿನವರೆಗೂ ನಿರ್ಮಿಸಿದ ಹಲವು ಮನೆಗಳ ಹಕ್ಕುಪತ್ರಗಳ ವಿತರಣೆ ಕಾರ್ಯ ನನೆಗುದಿಗೆ ಬಿದ್ದಿದ್ದು, ಹಲವು ಮನೆಗಳು ಈಗಾಗಲೇ ಶಿಥಿಲಾವಸ್ಥೆ ತಲುಪಿದ್ದು, ಬಹುತೇಕ ನವಗ್ರಾಮಗಳು ಹಲವು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ ಎಂಬುದು ಪ್ರತಿಭಟನಾನಿರತರು ಆರೋಪಿಸಿದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ದುರಗಪ್ಪ ಕಟ್ಟಿಮನಿ ಮಾತನಾಡಿ, ಅಮರಗೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆಯ ಅಮರಗೋಳ ಗ್ರಾಮದಲ್ಲಿ ಈ ಹಿಂದೆ ಅಂದರೆ 1988ರಲ್ಲಿ ಪರಿಶಿಷ್ಟರಿಗಾಗಿ ಒಟ್ಟು 37 ಮನೆಗಳನ್ನು ಮಂಜೂರು ಮಾಡಲಾಗಿತ್ತು. ಆದರೆ ಪ್ರವಾಹ ನಂತರ ನಿರ್ಮಿಸಿದ ಆಸರೆ ಮನೆಗಳಲ್ಲಿ ಕೇವಲ 26 ಮನೆಗಳನ್ನು ಮಾತ್ರ ಪರಿಶಿಷ್ಟರಿಗೆ ಇದುವರೆಗೆ ನೀಡಲಾಗಿದ್ದು, ಉಳಿದ ಕುಟುಂಬಗಳು ಹಕ್ಕುಪತ್ರವಿಲ್ಲದೆ ಸಣ್ಣಪುಟ್ಟ ಮನೆಗಳಲ್ಲಿ ಯಾವುದೇ ಮೂಲ ಸೌಲಭ್ಯಗಳು ಇಲ್ಲದ ವಠಾರಗಳಲ್ಲಿ ವಾಸ ಮಾಡುತ್ತಿದ್ದಾರೆ.
ಹೊಸ ಅಮರಗೋಳ ಗ್ರಾಮದಲ್ಲಿ 37 ಪರಿಶಿಷ್ಟ ಕುಟುಂಬಗಳಿಗೂ ಹಕ್ಕುಪತ್ರ ವಿತರಣೆ ಮಾಡಬೇಕು. ಸ್ಥಳಾಂತರಗೊಂಡಿರುವ ನವಗ್ರಾಮದಲ್ಲಿ ಬೀದಿದೀಪಗಳು, ಚರಂಡಿ, ರಸ್ತೆ, ಕುಡಿಯುವ ನೀರು ಕಲ್ಪಿಸಿ ಕೊಡಬೇಕು, ಅರ್ಧಕ್ಕೆ ನಿಂತಿರುವ ಗ್ರಾಮದ ಅಂಬೇಡ್ಕರ್ ಸಮುದಾಯ ಭವನ ಪೂರ್ಣಗೊಳಿಸಲು ಅಗತ್ಯ ಅನುದಾನ ಮಂಜೂರು ಮಾಡಬೇಕು, ಅಮರಗೋಳ ಪಂಚಾಯತಿ ವ್ಯಾಪ್ತಿಯ ಬಸರಕೋಡ ಗ್ರಾಮದ ದುರ್ಗಾದೇವಿ ದೇವಸ್ಥಾನಕ್ಕೆ ಸ್ಥಳ ನಿಗದಿಗೊಳಿಸಿ ಹಕ್ಕುಪತ್ರ ನೀಡಲು ಆಗ್ರಹಿಸಿದರು.ಸ್ಥಳಕ್ಕೆ ರೋಣ ತಹಸೀಲ್ದಾರ್ ನಾಗರಾಜ ಕೆ., ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಕಂದಕೂರ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪ್ರತಿಭಟನಾನಿರತರ ಮನವೊಲಿಸಲು ಪ್ರಯತ್ನಿಸಿದರು.
ಸಮಿತಿಯ ಜಿಲ್ಲಾ ಅಧ್ಯಕ್ಷ ಡಿ.ಜಿ. ಕಟ್ಟಿಮನಿ, ಕಾರ್ಯದರ್ಶಿ ಹಣಮಂತ ಪೂಜಾರ, ಜಿಲ್ಲಾ ಉಪಾಧ್ಯಕ್ಷರು ಉಮೇಶ ಪೂಜಾರ, ದುರುಗೇಶ ಹಿರೇಮನಿ, ಯಲ್ಲಪ್ಪ ಮಾದರ, ಯಚ್ಚರಪ್ಪ ಮಾದರ, ಶರಣು ಕರಮುಡಿ, ಹಣಮಂತ ಮಾದರ ಮುಂತಾದವರು ಪಾಲ್ಗೊಂಡಿದ್ದರು.ಅಧಿಕಾರಿಗಳ ಭರವಸೆ, ಪ್ರತಿಭಟನೆ ಹಿಂದಕ್ಕೆ
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿಯ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ, ತಹಸೀಲ್ದಾರ್ ನಾಗರಾಜ ಕೆ. ಅವರು ಜ. 22ರಂದು ಗ್ರಾಮಸಭೆ ನಡೆಸಿ, ಅರ್ಹ ಫಲಾನುಭವಿಗಳ ಪಟ್ಟಿಯನ್ನು ಅನುಸೂಚಿಯಲ್ಲಿ ಅಂತಿಮ ಗೊಳಿಸಲಾಗುವುದು ಎಂದು ಲಿಖಿತ ಭರವಸೆ ನೀಡಿದರು. ಈ ಹಿನ್ನೆಲೆ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.