ಸಾರಾಂಶ
ಧರಣಿ ನಿರತ ರೈತರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವುದು.
ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಜೆಜಿ ಹಳ್ಳಿ, ಐಮಂಗಲ ಮತ್ತು ಕಸಬಾ ಹೋಬಳಿಗಳ ಕೆರೆಗಳಿಗೆ ವಿವಿ ಸಾಗರದ ನೀರು ಹರಿಸಿ ಎಂದು ರೈತಸಂಘ ಮತ್ತು ಹಸಿರುಸೇನೆ ವತಿಯಿಂದ ರೈತರು ನಗರದ ತಾಲೂಕು ಕಚೇರಿ ಮುಂಭಾಗ ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ 3ನೇ ದಿನ ತಲುಪಿದ್ದು, ಶುಕ್ರವಾರದ ಹೊತ್ತಿಗೆ ಮೂವರು ರೈತರು ಅಸ್ವಸ್ಥಗೊಂಡಂತಾಗಿದೆ.ಗುರುವಾರ ರಾತ್ರಿ ಧರಣಿ ನಿರತ ರೈತ ಈರಣ್ಣ ಅಸ್ವಸ್ಥಗೊಂಡ ಹಿನ್ನೆಲೆ ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಶುಕ್ರವಾರ ಬೆಳಗ್ಗೆ ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಅಸ್ವಸ್ಥಗೊಂಡಿದ್ದು ಅವರನ್ನು ನಗರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಆನಂತರ ತಿಮ್ಮಣ್ಣ ಎಂಬ ರೈತ ಅಸ್ವಸ್ಥಗೊಂಡಿದ್ದು ಒಟ್ಟು ಮೂವರು ರೈತರು ಅಸ್ವಸ್ಥಗೊಂಡಂತಾಗಿದೆ.
ಬುಧವಾರದಿಂದ ರೈತರು ಅಮರಣಾಂತ ಉಪವಾಸ ಆರಂಭಿಸಿದ್ದು, ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ದಿಂಡಾವರ ಸಣ್ಣತಿಮ್ಮಣ್ಣ, ಜೆಜಿಹಳ್ಳಿ ಈರಣ್ಣ, ಆನೆಸಿದ್ರಿ ಶಿವಣ್ಣ, ಜೂಲಯ್ಯನಹಟ್ಟಿ ರಾಮಕೃಷ್ಣ, ದಿಂಡಾವರ ಚಂದ್ರಗಿರಿ ಉಪವಾಸ ಕುಳಿತ ರೈತರಾಗಿದ್ದಾರೆ. ಈಗಾಗಲೇ ರೈತರ ಧರಣಿ ಸ್ಥಳಕ್ಕೆ ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ ಭೇಟಿ ನೀಡಿ ರೈತರ ಮನವೊಲಿಸುವ ಪ್ರಯತ್ನ ಮಾಡಿದ್ದರೂ ಸಹ ಅದು ವಿಫಲವಾಗಿತ್ತು. ರೈತರು ಸಣ್ಣ ನೀರಾವರಿ ಸಚಿವ ಬೋಸರಾಜು ಸ್ಥಳಕ್ಕೆ ಆಗಮಿಸಿ ನೀರು ಹರಿಸುವ ಆದೇಶ ನೀಡುವವರೆಗೂ ಉಪವಾಸ ಸತ್ಯಾಗ್ರಹ ಬಿಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.