ವಿದ್ಯುತ್ ತಿದ್ದುಪಡಿ ಕಾಯ್ದೆ ಹಿಂಪಡೆಗಾಗಿ ಪ್ರತಿಭಟನೆ

| Published : Nov 21 2025, 01:15 AM IST

ವಿದ್ಯುತ್ ತಿದ್ದುಪಡಿ ಕಾಯ್ದೆ ಹಿಂಪಡೆಗಾಗಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ನ.20ರಂದು ಮಂಡಿಸಿದ ವಿದ್ಯುತ್ ತಿದ್ದುಪಡಿ ಕಾಯ್ದೆ-2022 ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಳಿಸುವ ಹುನ್ನಾರವಾಗಿದೆ. ಇಂತಹ ಮಸೂದೆ ತಕ್ಷಣ ಹಿಂಪಡೆಯಲು ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಘಟಕ, ಜಾಯಿಂಟ್‌ ಕಮಿಟಿ ಆಫ್ ಟ್ರೇಡ್ ಯೂನಿಯನ್ಸ್‌, ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ ನಡೆಯಿತು.

ದಾವಣಗೆರೆ: ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ನ.20ರಂದು ಮಂಡಿಸಿದ ವಿದ್ಯುತ್ ತಿದ್ದುಪಡಿ ಕಾಯ್ದೆ-2022 ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಳಿಸುವ ಹುನ್ನಾರವಾಗಿದೆ. ಇಂತಹ ಮಸೂದೆ ತಕ್ಷಣ ಹಿಂಪಡೆಯಲು ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಘಟಕ, ಜಾಯಿಂಟ್‌ ಕಮಿಟಿ ಆಫ್ ಟ್ರೇಡ್ ಯೂನಿಯನ್ಸ್‌, ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ ನಡೆಯಿತು.

ನಗರದ ಹದಡಿ ರಸ್ತೆಯ ಬೆಸ್ಕಾಂ ಗ್ರಾಮಾಂತರ ವಿಭಾಗದ ಕಚೇರಿ ಎದುರು ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟಿಸಿದ ರೈತರು ಹಾಗೂ ಕಾರ್ಮಿಕರು, ಬೆಸ್ಕಾಂ ಅಧಿಕಾರಿಗಳ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ರೈತ ಸಂಘದ ಮುಖಂಡ ಹೊನ್ನೂರು ಮುನಿಯಪ್ಪ ಮಾತನಾಡಿ, ಕೇಂದ್ರ ಸರ್ಕಾರದಿಂದ ವಿದ್ಯುತ್ ತಿದ್ದುಪಡಿ ಕಾಯ್ದೆ ಜಾರಿಗೊಂಡರೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಸಾರ್ವಜನಿಕರಿಗೆ ದೊರೆಯುವ ವಿದ್ಯುತ್ ಸೇವೆಗಳು ಖಾಸಗಿ ಕಂಪನಿಗಳ, ಬಂಡವಾಳಶಾಹಿಗಳ ಪಾಲಾಗಿ, ಲಾಭಾಸಕ್ತ ವ್ಯವಹಾರವಾಗಿ ಮಾರ್ಪಡುವ ಅಪಾಯ ಸ್ಪಷ್ಟವಾಗಿದೆ. ವಿದ್ಯುತ್ ದರ ಏರಿಕೆ, ಅನವಶ್ಯಕ ಬಿಲ್ಲಿಂಗ್ ಬದಲಾವಣೆ, ಸಬ್ಸಿಡಿ ರದ್ದತಿ, ಗ್ರಾಮೀಣ– ನಗರ ಬಡವರ್ಗಗಳ ಮೇಲೆ ಆರ್ಥಿಕ ಹೊರೆ ಸೇರಿದಂತೆ ಹಲವಾರು ಗಂಭೀರ ಸಮಸ್ಯೆಗಳು ಜನಸಾಮಾನ್ಯರ ಜೀವನ ತೀವ್ರವಾಗಿ ಬಾಧಿಸುತ್ತವೆ ಎಂದು ಎಚ್ಚರಿಸಿದರು.

ಕಾರ್ಮಿಕ ಮುಖಂಡ ಮಧು ತೊಗಲೇರಿ ಮಾತನಾಡಿ, ರಾಜ್ಯ, ದಾವಣಗೆರೆ ಜಿಲ್ಲೆಯಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಯಿಂದಾಗಿ ದೋಷಪೂರಿತ ಹೆಚ್ಚುವರಿ ಬಿಲ್‌, ಅನಿಯಂತ್ರಿತ ದರ ಏರಿಕೆ, ತಾಂತ್ರಿಕ ದೋಷ, ಅಸಮಂಜಸ ವಿದ್ಯುತ್ ಕಡಿತ ಮಾತ್ರವಲ್ಲದೇ ಹಲವಾರು ಸಮಸ್ಯೆ ಎದುರಾಗುತ್ತಿವೆ. ಗ್ರಾಮೀಣ ಮನೆ, ಕೃಷಿ ಪಂಪ್‌ಸೆಟ್‌, ಸಣ್ಣ ವ್ಯಾಪಾರಿಗಳು, ನಗರ ಬಡವರ್ಗಕ್ಕೆ ಈ ವ್ಯವಸ್ಥೆ ತೀವ್ರ ಹೊಡೆತ ನೀಡುತ್ತದೆ. ಜನರ ಒಪ್ಪಿಗೆ ಇಲ್ಲದೇ ಇಂತಹ ಮಹತ್ತರ ಯೋಜನೆ ಜಾರಿಯು ಅನ್ಯಾಯ ಹಾಗೂ ಅಸಾಂವಿಧಾನಿಕ ಎಂದು ಟೀಕಿಸಿದರು.

ಸಿಪಿಐ ಮುಖಂಡ ಆವರಗೆರೆ ಎಚ್‌.ಜಿ.ಉಮೇಶ ಮಾತನಾಡಿ, ರಾಜ್ಯ ಸರ್ಕಾರ ವಿದ್ಯುತ್ ತಿದ್ದುಪಡಿ ಕಾಯ್ದೆ-2022 ಅನ್ನು ತಕ್ಷಣ ಹಿಂತೆಗೆದುಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಸ್ಮಾರ್ಟ್ ಮೀಟರ್ ಅಳವಡಿಕೆ ನಿಲ್ಲಿಸಬೇಕು. ಟಿಒಡಿ, ಪೀಕ್ ಅವರ್ ಚಾರ್ಜ್‌ ಸೇರಿದಂತೆ ‌ಅನಿಯಂತ್ರಿತ ದರ ಏರಿಕೆ ವ್ಯವಸ್ಥೆ ರದ್ದುಪಡಿಸಬೇಕು. ವಿದ್ಯುತ್ ಬಿಲ್ ಪರಿಷ್ಕರಣೆ, ದರ ಏರಿಕೆ, ಮತ್ತು ಹೊಸ ನೀತಿ ಜಾರಿಗೊಳಿಸುವ ಮೊದಲು ಸಾರ್ವಜನಿಕರ ಸಲಹೆ– ಸೂಚನೆ ಪಡೆಯುವುದು ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಗಳ ಮುಖಂಡರಾದ ಪಿ.ಪಿ. ಮರುಳಾರಾಧ್ಯ, ಇ.ಶ್ರೀನಿವಾಸ, ಮಂಜುನಾಥ ಕುಕ್ಕವಾಡ, ಮಧು ತೊಗಲೇರಿ, ಮಂಜುನಾಥ ಕೈದಾಳೆ, ಕೆ.ಬಾನಪ್ಪ, ಸತೀಶ ಅರವಿಂದ, ಪವಿತ್ರ ಅರವಿಂದ, ಇ.ಎಸ್.‌ಉಮೇಶ, ಚೆನ್ನಪ್ಪ, ಶೇಖರಪ್ಪ, ಎಚ್.ಕೆ.ಆರ್. ಸುರೇಶ, ಐರಣಿ ಚಂದ್ರು, ಶಿವಾಜಿರಾವ್ ಇತರರು ಇದ್ದರು.

- - -

-20ಕೆಡಿವಿಜಿ1.ಜೆಪಿಜಿ:

ವಿದ್ಯುತ್ ತಿದ್ದುಪಡಿ ಕಾಯ್ದೆ-2022 ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ದಾವಣಗೆರೆಯಲ್ಲಿ ಗುರುವಾರ ಬೆಸ್ಕಾಂ ಗ್ರಾಮಾಂತರ ವಿಭಾಗದ ಕಚೇರಿ ಎದುರು ರೈತ-ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.