ಸ್ಥಳೀಯ ಶಾಸಕರು ಹಾಗೂ ಕಾಂಗ್ರೆಸ್‌ ಸರ್ಕಾರಕ್ಕೆ ಜಿಲ್ಲೆಯ ರೈತರ ಬಗ್ಗೆ ಕಾಳಜಿಯಿಲ್ಲ.

ಹೊಸಪೇಟೆ: ಸಕ್ಕರೆ ಕಾರ್ಖಾನೆ ಸ್ಥಾಪಿಸುವಂತೆ ಒತ್ತಾಯಿಸಿ ಹೊಸಪೇಟೆ ಸಕ್ಕರೆ ಕಾರ್ಖಾನೆ ಹೋರಾಟ ಸಮಿತಿ ನೇತೃತ್ವದಲ್ಲಿ ಭಾನುವಾರ ನೂರಾರು ರೈತರು ಶಾಸಕ ಎಚ್‌.ಆರ್‌. ಗವಿಯಪ್ಪ ನಿವಾಸದ ಎದುರು ಉಪವಾಸ ಸತ್ಯಾಗ್ರಹ, ಪ್ರತಿಭಟನೆ ನಡೆಸಿದರು.

ನಗರದ ಮದಕರಿ ನಾಯಕ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ ರೈತರು ನೆಹರು ಕಾಲನಿಯಲ್ಲಿರುವ ಶಾಸಕ ಎಚ್‌.ಆರ್‌. ಗವಿಯಪ್ಪ ನಿವಾಸದ ಎದುರು ಪ್ರತಿಭಟನೆ ನಡೆಸಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಆಗ್ರಹಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಸಕ್ಕರೆ ಕಾರ್ಖಾನೆ ಹೋರಾಟ ಸಮಿತಿ ಮುಖಂಡ ಮರಡಿ ಜಂಬಯ್ಯ ನಾಯಕ ಮಾತನಾಡಿ, ಸ್ಥಳೀಯ ಶಾಸಕರು ಹಾಗೂ ಕಾಂಗ್ರೆಸ್‌ ಸರ್ಕಾರಕ್ಕೆ ಜಿಲ್ಲೆಯ ರೈತರ ಬಗ್ಗೆ ಕಾಳಜಿಯಿಲ್ಲ. ಹೀಗಾಗಿ ನಮ್ಮಲಿ ಈ ವರೆಗೆ ಸಕ್ಕರೆ ಕಾರ್ಖಾನೆ ಆರಂಭವಾಗಿಲ್ಲ. ಕಾಂಗ್ರೆಸ್‌ ಸರ್ಕಾರ ಹಾಗೂ ಶಾಸಕ ಎಚ್‌.ಆರ್‌. ಗವಿಯಪ್ಪ ಈ ಹಿಂದೆ ನೀಡಿದ ಭರವಸೆಯಂತೆ ಕೂಡಲೇ ಸಕ್ಕರೆ ಕಾರ್ಖಾನೆ ಆರಂಭಿಸಬೇಕು. ಕ್ಷೇತ್ರದಲ್ಲಿ ಕಾರ್ಖಾನೆ ಸ್ಥಾಪನೆ ಆಗುವ ವರೆಗೆ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದರು.

ಗವಿಯಪ್ಪ ಪರ ಚುನಾವಣಾ ಪ್ರಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗವಿಯಪ್ಪ ಅವರನ್ನು ಗೆಲ್ಲಿಸಿದರೆ ಸಕ್ಕರೆ ಕಾರ್ಖಾನೆಯನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಪ್ರಾರಂಭಿಸುತ್ತೇವೆ ಎಂದು ಭರವಸೆ ನೀಡಿದರು. ಗವಿಯಪ್ಪ ಸಹ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಸಕ್ಕರೆ ಕಾರ್ಖಾನೆ ಪ್ರಾರಂಭಿಸುತ್ತೇನೆ ಎಂದು ಮಾತು ಕೊಟ್ಟಿದ್ದರು. ಈಗ ಸರ್ಕಾರ ಮತ್ತು ಶಾಸಕರು ಮಾತು ತಪ್ಪಿದ್ದಾರೆ. ತಕ್ಷಣ ಸಕ್ಕರೆ ಕಾರ್ಖಾನೆ ಪ್ರಾರಂಭಿಸಬೇಕು ಎಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ದಸರಾ ಹಬ್ಬ ಇರುವುದರಿಂದ ಪ್ರತಿಭಟನೆ ಒಂದು ದಿನಕ್ಕೆ ಸೀಮಿತವಾಗಿದೆ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ರೈತ ಮುಖಂಡರಾದ ತಳವಾರ ನಾಗರಾಜ, ಸಣ್ಣಕ್ಕಿ ರುದ್ರಪ್ಪ, ಜಿ. ಖಾಜಾ ಹುಸೇನ್ ನಿಯಾಜಿ ಮಾತನಾಡಿ, ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಬಂದ್‌ ಆಗಿದ್ದರಿಂದ ಸಾವಿರಾರು ಕುಟುಂಬಗಳು ಬೀದಿ ಪಾಲಾಗಿದೆ. ಈ ಹಿನ್ನೆಲೆ ಶೀಘ್ರ ಸಕ್ಕರೆ ಕಾರ್ಖಾನೆ ಆರಂಭಿಸಬೇಕು. ಕಬ್ಬು ಬೆಳೆದ ರೈತರಿಗೆ ನೆಮ್ಮದಿ ಇಲ್ಲ. ದೂರದ ಊರುಗಳಿಗೆ ಕಬ್ಬು ತೆಗೆದುಕೊಂಡು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಾರ್ಖಾನೆ ಆರಂಭಿಸದಿದ್ದರೆ ಮುಂದಿನ ದಿನಗಳಲ್ಲಿ ಹೊಸಪೇಟೆ ಬಂದ್ ಮಾಡಲಾಗುವುದು. ಹಂಪಿ ಉತ್ಸವದಲ್ಲಿ ಮುಖ್ಯಮಂತ್ರಿ, ಸಚಿವರನ್ನು ತಡೆದು ಪ್ರತಿಭಟನೆ ನಡೆಸುತ್ತೇವೆ ಎಂದರು.

ಪ್ರಗತಿಪರ ಚಿಂತಕ ದುರುಗಪ್ಪ ಪೂಜಾರಿ ಮಾತನಾಡಿ, ನಾವು ಶಾಸಕರಾಗಿ ಆಯ್ಕೆ ಮಾಡಿರುವ ಎಚ್.ಆರ್. ಗವಿಯಪ್ಪ ಅವರನ್ನು ಕೇಳುವ ಹಕ್ಕು ಇದೆ. ನೀವು ನೀಡಿದ ಭರವಸೆಯಂತೆ ಕಾರ್ಖಾನೆ ಆರಂಭಿಸಿ ಎಂದರು.

ರೈತ ಮುಖಂಡರಾದ ಕಿಚಿಡಿ ಶ್ರೀನಿವಾಸ, ಗಾಳೆಪ್ಪ, ಕರುಣಾನಿಧಿ, ಆರ್‌. ಭಾಸ್ಕರ್‌ ರೆಡ್ಡಿ, ಬಾಬು, ಯಲ್ಲಾಲಿಂಗ, ಕೆ. ಎಂ. ಸಂತೋಷ ಮಾತನಾಡಿ, ಹಾಲಿ, ಮಾಜಿ ಶಾಸಕರು ಒಂದೇ ವೇದಿಕೆಯಲ್ಲಿ ಸೇರಿ ಸಕ್ಕರೆ ಕಾರ್ಖಾನೆ ಆರಂಭಿಸುವ ದಿನಾಂಕ ಘೋಷಿಸುವಂತೆ ಒತ್ತಾಯಿಸಿದರು.

ನಂತರ ಕ್ಷೇತ್ರದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವಂತೆ ಒತ್ತಾಯಿಸಿದ ಮನವಿ ಪತ್ರವನ್ನು ಹೋರಾಟ ಸಮಿತಿ ಮುಖಂಡರು ಶಾಸಕ ಎಚ್.ಆರ್. ಗವಿಯಪ್ಪ ಅವರಿಗೆ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಎಚ್.ಆರ್. ಗವಿಯಪ್ಪ, ಈಗ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಾನು ಯಾವುದೇ ಭರವಸೆ ನೀಡಲು ಬರುವುದಿಲ್ಲ. ಈ ಹಿನ್ನೆಲೆ ನ. 10ರಂದು‌ ರೈತರು, ಮಾಜಿ ಶಾಸಕರು, ಸ್ಥಳೀಯ ಮುಖಂಡರು, ಸಂಘಸಂಸ್ಥೆಗಳ ಮುಖಂಡರ ಸಭೆ ಸೇರಿ ಚರ್ಚೆ ಮಾಡಿ ಅಂದು ರೈತರಿಗೆ ಒಂದು ಒಳ್ಳೆ ಸಿಹಿ ಸುದ್ದಿ ನೀಡುವೆ ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಸಕ್ಕರೆ ಕಾರ್ಖಾನೆ ಹೋರಾಟ ಸಮಿತಿ ಮುಖಂಡ ದೇವರಮನಿ ಶ್ರೀನಿವಾಸ, ಕೆ. ಜೈರುದ್ದೀನ್, ತಾಯಪ್ಪ ನಾಯಕ, ವೈ. ಯಮುನೇಶ್, ಆರ್.ಆರ್. ತಾಯಪ್ಪ, ದೊಡ್ಡ ಗಾಳೆಪ್ಪ, ಜಂಬಾನಳ್ಳಿ ವಸಂತ, ಜಂಬಾನಳ್ಳಿ ರಾಮಣ್ಣ, ಜಂಬಾನಳ್ಳಿ ಸತ್ಯನಾರಾಯಣ, ಗಂಟೆ ಸೋಮಶೇಖರ್, ಎಚ್. ಶಬ್ಬೀರ್, ನಜೀರ್ ಖಾನ್, ಕಣ್ಣಿ ಶ್ರೀಕಂಠ, ಜೆ. ಉಮಾದೇವಿ, ಬಂಡೆ‌ ಶ್ರೀನಿವಾಸ, ಎಸ್.ಎಸ್. ಚಂದ್ರಶೇಖರ, ರಾಮಚಂದ್ರ ಬಾಬು, ಎಲ್.ಎಸ್. ಆನಂದ್ ಸೇರಿದಂತೆ 52ಕ್ಕೂ ಹೆಚ್ಚು ಸಂಘಟನೆಗಳ ಪದಾಧಿಕಾರಿಗಳು, ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.