ಕಾರಂಜಾ ಯೋಜನೆಯ ಸಂತ್ರಸ್ತ ರೈತರಿಗೆ ಸರ್ಕಾರ ಕಾಲ ಮಿತಿಯೊಳಗೆ ಪರಿಹಾರ ಹಣ ಬಿಡುಗಡೆ ಮಾಡದಿದ್ದರೆ ಎರಡನೇ ಹಂತದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಬೀದರ್

ಕಾರಂಜಾ ಯೋಜನೆಯ ಸಂತ್ರಸ್ತ ರೈತರಿಗೆ ಸರ್ಕಾರ ಕಾಲ ಮಿತಿಯೊಳಗೆ ಪರಿಹಾರ ಹಣ ಬಿಡುಗಡೆ ಮಾಡದಿದ್ದರೆ ಎರಡನೇ ಹಂತದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ್ ಜಿಲ್ಲೆಯ ಏಕೈಕ ಬೃಹತ್ ನೀರಾವರಿ ಯೋಜನೆಯಾದ ಕಾರಂಜಾ ಯೋಜನೆ ಜಿಲ್ಲೆಯ ಜನರ ಜೀವನಾಡಿಯಾಗಿದೆ. ಆದರೆ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಹಾಗೂ ಬೀದರ್ ಜಿಲ್ಲೆಯ ಬಗ್ಗೆ ನಿರಂತರವಾಗಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.

2022ರಿಂದ ಸತತ 920 ದಿನಗಳ ಕಾಲ ಅಹೋರಾತ್ರಿ ಸತ್ಯಾಗ್ರಹ ನಡೆಸಿದ ಬಳಿಕ ಸರ್ಕಾರ ಹೋರಾಟಕ್ಕೆ ಸ್ಪಂದಿಸಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೇರಿದಂತೆ ಜಿಲ್ಲೆಯ ಎಲ್ಲ ಪಕ್ಷಗಳ ಶಾಸಕರ ಸಹಕಾರದೊಂದಿಗೆ ಮುಖ್ಯಮಂತ್ರಿ ಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಪರಿಹಾರ ನೀಡುವ ಭರವಸೆ ನೀಡಲಾಗಿತ್ತು. ಬೆಂಗಳೂರಿನಲ್ಲಿ ಹಾಗೂ ಬೀದರ್‌ನಲ್ಲಿಯೂ ಮುಖ್ಯಮಂತ್ರಿಗಳು ಕಾಲಮಿತಿಯಲ್ಲಿ ಪರಿಹಾರ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಆದರೆ ಈವರೆಗೆ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದೆರಡು ದಿನಗಳಲ್ಲಿ ಸಭೆ ನಡೆಸಿ ಹೋರಾಟದ ಮುಂದಿನ ರೂಪುರೇಷೆ ನಿರ್ಧರಿಸಲಾಗುವುದು. ಅಲ್ಲದೆ, ಹೋರಾಟ ಸಮಿತಿ ಯ ನಡೆ ಜನಪ್ರತಿನಿಧಿಗಳ ಮನೆ ಕಡೆ ಎಂಬ ಅಭಿಯಾನ ಶೀಘ್ರದಲ್ಲೇ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಖ್ಯಾತ ಚಿಂತಕ ಪ್ರೊ.ಆರ್.ಕೆ.ಹುಡಗಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ ಎಂದು ಹೇಳಿ ಕೊಳ್ಳುತ್ತದೆ. ಈಗಾಗಲೇ ನಮ್ಮ ಸಮಿತಿಯೊಂದಿಗೆ ಎರಡು-ಮೂರು ಬಾರಿ ಸಭೆ ನಡೆಸಿದ್ದರೂ ರೈತರಿಗೆ ಪರಿಹಾರ ಏಕೆ ನೀಡಿಲ್ಲ? ಎಂಬುದೇ ನಮ್ಮ ಯಕ್ಷ ಪ್ರಶ್ನೆಯಾಗಿದೆ ಎಂದು ಹೇಳಿದರು.

ಸಮಿತಿಯ ಗೌರವಾಧ್ಯಕ್ಷ ಬಸವರಾಜ ದೇಶಮುಖ, ಕಾರಂಜಾ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಹೊಚಕನಳ್ಳಿ, ಚಿಂತಕರಾದ ವಿನಯ ಕುಮಾರ ಮಾಳಗೆ, ಪ್ರಮುಖರಾದ ರಾಜಪ್ಪ ಕೋಸಂ, ರಾಜಶೇಖರ, ಯೂಸುಫ್ ಮಿಯಾ, ವೀರೇಂದ್ರ ಭತ್ಮೂರ್ಗೆ, ಸಂಗಾರೆಡ್ಡಿ, ಚಂದ್ರಶೇಖರ ಮುತ್ತಣ್ಣ, ಮಾದಪ್ಪ, ರೋಹನ್ ಕುಮಾರ ಹಾಗೂ ಲಕ್ಷ್ಮೀಬಾಯಿ ಕೌದೆ ಉಪಸ್ಥಿತರಿದ್ದರು.

--

ಚಿತ್ರ 16ಬಿಡಿಆರ್56:

ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಮಣ ದಸ್ತಿ ಮಾತನಾಡಿದರು.