10ರೊಳಗೆ ಸಮರ್ಪಕ ನೀರು ಪೂರೈಸದಿದ್ದಲ್ಲಿ ಹೋರಾಟ

| Published : Aug 04 2025, 12:30 AM IST

ಸಾರಾಂಶ

ಆ.10ರ ಒಳಗಾಗಿ ಇಟಗಿ ನಾಲೆಗೆ ಸಮರ್ಪಕವಾಗಿ ನೀರು ಹರಿದು ಬಾರದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು.

ಕನ್ನಡಪ್ರಭ ವಾರ್ತೆ ಕಂಪ್ಲಿ

ಆ.10ರ ಒಳಗಾಗಿ ಇಟಗಿ ನಾಲೆಗೆ ಸಮರ್ಪಕವಾಗಿ ನೀರು ಹರಿದು ಬಾರದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಮ್ಮಿಗನೂರಿನ ನೀರು ಬಳಕೆದಾರರ ಸಂಘದ ಕಾರ್ಯದರ್ಶಿ ಅಡಿವೆಯ್ಯಸ್ವಾಮಿ ಎಚ್ಚರಿಸಿದರು.

ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಭಾನುವಾರ ನಡೆದ ರೈತರ ಸಭೆಯಲ್ಲಿ ಮಾತನಾಡಿ, ನಿಯಮದ ಪ್ರಕಾರ ಸೂಗೂರು ಡಿಸ್ಟಿಬ್ಯೂಟರ್‌ನ ಇಟಗಿ ನಾಲೆಗೆ 11ಕ್ಯುಸೆಕ್ ನೀರು ಹರಿಯಬೇಕಿದೆ. ಆದರೆ ಕೇವಲ 3ಕ್ಯುಸೆಕ್‌ ನಷ್ಟು ಮಾತ್ರ ನೀರು ಹರಿಯುತ್ತಿದೆ. ಈ ನಾಲೆಯಿಂದ 360 ಎಕರೆ ಆಯಕಟ್ಟಿನ ಜಮೀನುಗಳಿಗೆ ನೀರು ಹರಿಯಬೇಕಿದೆ. ಈ ನಾಲೆಗೆ ನೀರು ಹರಿದು ಬರುವ ಮೇಲ್ಭಾಗದಲ್ಲಿ ಹಲವರು ಅನಧಿಕೃತವಾಗಿ ಸೈಫಾನ್‌ ಪೈಪು, ಅಂಡರ್‌ಗ್ರೌಂಡ್ ಪೈಪುಗಳನ್ನು ಅಳವಡಿಸಿಕೊಂಡಿದ್ದರಿಂದಾಗಿ ನಮಗೆ ಸಮರ್ಪಕವಾಗಿ ನೀರು ಹರಿದು ಬರುತ್ತಿಲ್ಲ. ಈ ಕುರಿತು ನೀರಾವರಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸಮಜಾಯಿಷಿ ನೀಡುತ್ತಾರೆ. ಈ ನಾಲೆಗೆ ಹರಿದು ಬರುವ ನೀರನ್ನು ನಂಬಿಕೊಂಡು ನೂರಾರು ಜನ ರೈತರು ಸಾಲ ಸೂಲಾ ಮಾಡಿ ಭತ್ತ ಬೆಳೆದಿದ್ದಾರೆ. ಸಮರ್ಪಕವಾಗಿ ನೀರು ಪೂರೈಕೆಯಾಗದ ಕಾರಣದಿಂದಾಗಿ ಸಸಿಗಳೆಲ್ಲ ಒಣಗಿ ಹೋಗಿ ಸಾವಿರಾರು ರೂಪಾಯಿಗಳಷ್ಟು ನಷ್ಟ ಉಂಟಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಇಂದು ರೈತರು ನಷ್ಟಕ್ಕೆ ಒಳಗಾಗಿದ್ದಾರೆ. ಈ ಕುರಿತು ನೀರಾವರಿ ಅಧಿಕಾರಿಗಳು ಎಚ್ಚೆತ್ತುಕೊಂಡು ಆ.10ರ ಒಳಗಾಗಿ ಸಮರ್ಪಕವಾಗಿ ನಿರೋದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದಲ್ಲಿ ಸೂಗೂರು ವಿತರಣೆ ನಾಲೆಯ ತೂಬು ಮುಚ್ಚಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ವಿ.ವೀರೇಶ್, ಜಿಲ್ಲಾ ಉಪಾಧ್ಯಕ್ಷ ಕೆ.ಖಾಸಿಂಸಾಬ್, ಎಮ್ಮಿಗನೂರು ಘಟಕ ಅಧ್ಯಕ್ಷ ಸಣ್ಣ ಜಡೆಪ್ಪ, ಪದಾಧಿಕಾರಿಗಳಾದ ಕಾಗೆ ಈರಣ್ಣ, ಅಡಿವೆಯ್ಯಸ್ವಾಮಿ, ಓ.ಎಂ. ಮಹಾಂತಸ್ವಾಮಿ, ಟಿ.ಜಡೆಪ್ಪ, ಶಿವರುದ್ರಗೌಡ, ಹರಿಜನ ಲಿಂಗಪ್ಪ, ಗುಡಿಸಲು ರಾಜಾಸಾಬ್, ಅಲ್ಲಾಸಾಬ್, ವೀರೇಶಗೌಡ್ರು, ಎಚ್.ಮಲ್ಲಯ್ಯ ಸೇರಿ ರೈತರಿದ್ದರು.