ಪೆಂಡಾಲ್ ಗಣಪತಿ ಉತ್ಸವ ಸಮಿತಿಯ ಗೌರವಾಧ್ಯಕ್ಷನಾಗಿರುವುದರಿಂದ ತಮಗೂ ಜವಾಬ್ದಾರಿ ಇದೆ. ಗಣಪತಿ ವಿಸರ್ಜನೆಗೆ ಅಗತ್ಯ ಅನುಮತಿ ಪಡೆಯಲಾಗಿತ್ತು. ಅ.೩ರಂದು ಗಣಪತಿ ಮೆರವಣಿಗೆಗೆ ಚಾಲನೆ ನೀಡುವ ಸಂದರ್ಭದಲ್ಲೂ ಯಾವುದೇ ನಿರ್ಬಂಧ ಹೇರಿರಲಿಲ್ಲ. ಆದರೆ ಮೆರವಣಿಗೆ ಆರಂಭವಾದ ಬಳಿಕ ಮಧ್ಯಾಹ್ನದ ವೇಳೆಗೆ ನೋಟಿಸ್ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ದೇವಿಗೆರೆ ಕೊಳದಲ್ಲಿ ಪೆಂಡಾಲ್ ಗಣಪತಿ ವಿಸರ್ಜನೆ ಮಾಡದಂತೆ ಜಿಲ್ಲಾಧಿಕಾರಿ ಲತಾಕುಮಾರಿ ಅವರು ನಿಷೇಧಾಜ್ಞೆ ಜಾರಿ ಮಾಡಿರುವುದು ಹಾಗೂ ಇದೇ ವಿಚಾರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೋಟಿಸ್ ನೀಡಿರುವುದನ್ನು ಖಂಡಿಸಿರುವ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್, ನೋಟಿಸನ್ನು ಕೂಡಲೇ ವಾಪಸ್ ಪಡೆಯದಿದ್ದರೆ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಪ್ರತಿಭಟನೆಯಲ್ಲಿ ಪೆಂಡಾಲ್ ಗಣಪತಿ ಉತ್ಸವ ಸಮಿತಿಯ ಪದಾಧಿಕಾರಿಗಳು, ಭಕ್ತರು ಹಾಗೂ ಹಾಸನ ನಗರದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾಧಿಕಾರಿಗಳ ನಿರ್ಧಾರದಿಂದ ಭಕ್ತರ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆ. ದೇವಿಗೆರೆ ಕೊಳದಲ್ಲಿ ಗಣಪತಿ ವಿಸರ್ಜನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ನಡೆ ಜವಾಬ್ದಾರಿಯುತವಾಗಿಲ್ಲ. ಎಸ್ಪಿ ಅವರಿಗೆ ನೋಟಿಸ್ ನೀಡಿರುವುದಲ್ಲದೆ, ಗಣಪತಿ ಸೇವಾ ಸಮಿತಿ ಅಧ್ಯಕ್ಷರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದು ಸರಿಯಲ್ಲ. ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕೈಗೊಂಡ ನಿರ್ಧಾರಗಳಿಗೆ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಉಸ್ತುವಾರಿ ಸಚಿವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಜವಾಬ್ದಾರಿ ವಹಿಸಿಕೊಳ್ಳಬೇಕು. ಈ ವಿಚಾರ ನನಗೆ ಗೊತ್ತಿಲ್ಲ ಎಂದು ಹೇಳಿ ದೂರ ಉಳಿಯುವುದು ಸರಿಯಲ್ಲ. ಜಿಲ್ಲಾಧಿಕಾರಿಗಳೇ ಹಾಸನದಲ್ಲಿ ಉಸ್ತುವಾರಿ ಸಚಿವರಂತೆ ವರ್ತಿಸುತ್ತಿದ್ದು, ಜನಪ್ರತಿನಿಧಿಗಳ ಅಭಿಪ್ರಾಯ ಹಾಗೂ ಸ್ಥಳೀಯರ ಭಾವನೆಗಳಿಗೆ ಬೆಲೆ ನೀಡುತ್ತಿಲ್ಲ ಎಂದು ಆರೋಪಿಸಿದರು.

ದೇವಿಗೆರೆ ಕೆರೆಯ ಸ್ವಚ್ಛತೆ ಮತ್ತು ಸಂರಕ್ಷಣೆಗಾಗಿ ಸಮಿತಿ ರಚಿಸಿರುವ ವಿಚಾರವೂ ತಮ್ಮ ಗಮನಕ್ಕೆ ಬಂದಿಲ್ಲ. ಸ್ಥಳೀಯ ಶಾಸಕನಾಗಿರುವ ತಮ್ಮನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಮಿತಿ ರಚಿಸಿರುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ದೇವಿಗೆರೆ ಬಗ್ಗೆ ಈಗ ಕಾಳಜಿ ವ್ಯಕ್ತಪಡಿಸುತ್ತಿರುವ ಜಿಲ್ಲಾಧಿಕಾರಿಗಳು, ಹಿಂದೆ ಇದೇ ಕೊಳದಲ್ಲಿ ಗಣಪತಿ ವಿಸರ್ಜನೆ ನಡೆದಾಗ ಏಕೆ ತಡೆಯಲಿಲ್ಲ? ಕಳೆದ ವರ್ಷವೂ ಇದೇ ಜಿಲ್ಲಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದರು. ಆಗ ಯಾವುದೇ ಸಮಸ್ಯೆ ಇಲ್ಲದೆ ವಿಸರ್ಜನೆ ನಡೆದಿತ್ತು. ಈ ಬಾರಿ ಮಾತ್ರ ಏಕಾಏಕಿ ನಿರ್ಬಂಧ ವಿಧಿಸಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು.

ದೇವಿಗೆರೆ ಕೊಳದಲ್ಲಿ ಈ ವರ್ಷವೂ ಹಲವು ಗಣೇಶ ಮೂರ್ತಿಗಳ ವಿಸರ್ಜನೆ ನಡೆದಿದೆ. ಆದರೆ ಪೆಂಡಾಲ್ ಗಣಪತಿ ವಿಸರ್ಜನೆಗೆ ಮಾತ್ರ ನಿರ್ಬಂಧ ವಿಧಿಸಿರುವುದು ಸಾರ್ವಜನಿಕರಲ್ಲಿ ಪ್ರಶ್ನೆ ಮೂಡಿಸಿದೆ. ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಸ್ಥಳೀಯ ಪರಿಸ್ಥಿತಿ ಹಾಗೂ ಹಿಂದಿನ ಆಚರಣೆಗಳನ್ನು ಪರಿಗಣಿಸಬೇಕಿತ್ತು ಎಂದರು. ಪೆಂಡಾಲ್ ಗಣಪತಿ ಉತ್ಸವ ಸಮಿತಿಯ ಗೌರವಾಧ್ಯಕ್ಷನಾಗಿರುವುದರಿಂದ ತಮಗೂ ಜವಾಬ್ದಾರಿ ಇದೆ. ಗಣಪತಿ ವಿಸರ್ಜನೆಗೆ ಅಗತ್ಯ ಅನುಮತಿ ಪಡೆಯಲಾಗಿತ್ತು. ಅ.೩ರಂದು ಗಣಪತಿ ಮೆರವಣಿಗೆಗೆ ಚಾಲನೆ ನೀಡುವ ಸಂದರ್ಭದಲ್ಲೂ ಯಾವುದೇ ನಿರ್ಬಂಧ ಹೇರಿರಲಿಲ್ಲ. ಆದರೆ ಮೆರವಣಿಗೆ ಆರಂಭವಾದ ಬಳಿಕ ಮಧ್ಯಾಹ್ನದ ವೇಳೆಗೆ ನೋಟಿಸ್ ನೀಡಲಾಗಿದೆ. ಹೀಗಿರುವಾಗ ಪೊಲೀಸ್ ಇಲಾಖೆಯ ಮೇಲೆ ಆರೋಪ ಹೊರಿಸುವುದು ಸರಿಯಲ್ಲ ಎಂದು ಸ್ವರೂಪ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಗಿರೀಶ್ ಚನ್ನವೀರಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಸ್ವಾಮಿಗೌಡ, ನಗರಪಾಲಿಕೆ ಮಾಜಿ ಸದಸ್ಯ ವಾಸುದೇವ್, ಮುಖಂಡರಾದ ರಾಮಚಂದ್ರು, ಶಿವಣ್ಣ, ಜಯರಾಮ್, ದಿನೇಶ್ ಹಾಗೂ ಜಿಲ್ಲಾ ಜೆಡಿಎಸ್ ವಕ್ತಾರ ಹೊಂಗೆರೆ ರಘು ಇದ್ದರು.