ವಾರದೊಳಗೆ ಪ್ರಜ್ವಲ್‌ ಬಂಧಿಸದಿದ್ದರೆ ಪ್ರತಿಭಟನೆ

| Published : May 15 2024, 01:30 AM IST

ಸಾರಾಂಶ

ರಾಮನಗರ: ವಿದೇಶಕ್ಕೆ ಪರಾರಿಯಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣನನ್ನು ವಾರದೊಳಗೆ ಬಂಧಿಸದಿದ್ದರೆ ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ) ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ತಿಳಿಸಿದರು.

ರಾಮನಗರ: ವಿದೇಶಕ್ಕೆ ಪರಾರಿಯಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣನನ್ನು ವಾರದೊಳಗೆ ಬಂಧಿಸದಿದ್ದರೆ ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ) ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಜ್ವಲ್ ರೇವಣ್ಣ ಜೊತೆಗೆ ಪೆನ್ ಡ್ರೈವ್ ಗಳನ್ನು ಹಂಚಿದವರನ್ನೂ ಬಂಧಿಸಿ ಕಾನೂನು ರೀತಿ ಕ್ರಮ ಜರುಗಿಸಬೇಕು. ಕೇಂದ್ರ ಮತ್ತು ರಾಜ್ಯಸರ್ಕಾರಗಳು ಅಪರಾಧಿಗಳನ್ನು ಬಂಧಿಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲರಾದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೂ ತಿಳಿಯದಂತೆ ವಿದೇಶಕ್ಕೆ ಪರಾರಿಯಾಗಿದ್ದಾನೆ. ಇದು ನಂಬಲು ಸಾಧ್ಯವೆ? ನಮ್ಮ ದೇಶದ ಗುಪ್ತದಳ ಅಷ್ಟೊಂದು ದುರ್ಬಲವಾಗಿದಿಯೇ. ಅವರ ಕಣ್ಣು ತಪ್ಪಿಸಿ ವಿದೇಶಕ್ಕೆ ಹೋಗುವುದಾದರೂ ಹೇಗೆ? ಇದರ ಬಗ್ಗೆ ಸರ್ಕಾರ ಸ್ಪಷ್ಟನೆ ಕೊಡಬೇಕು ಎಂದರು.

ಈ ಪ್ರಕರಣದ ತನಿಖೆಗಾಗಿ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ದಳ (ಎಸ್ ಐಟಿ) ನೇಮಿಸಿರುವ ರಾಜ್ಯಸರ್ಕಾರದ ಕ್ರಮ ಸ್ವಾಗತಾರ್ಹ. ಈ ತನಿಖೆಯು ನಿಸ್ಪಕ್ಷಪಾತ ಮತ್ತು ಪಾರದರ್ಶಕವಾಗಿ ನಡೆಯಬೇಕಿದೆ. ಆದರೆ, ತನಿಖೆಯ ದಿಕ್ಕು ತಪ್ಪಿಸಿ ಸತ್ಯ ಹೊರಬರದಂತೆ ತಡೆಯಲು ಅನೇಕ ಒತ್ತಡಗಳು ಕೆಲಸ ಮಾಡುತ್ತಿವೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಂತ್ರಸ್ತರ ಪರವಾಗಿ ನಿಲ್ಲುವುದನ್ನು ಬಿಟ್ಟು ತನಿಖೆ ದಿಕ್ಕನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ತನಿಖಾಧಿಕಾರಿಗಳ ಬಗ್ಗೆ ಏಕವಚನದಿಂದ ಮಾತನಾಡುತ್ತಿದ್ದಾರೆ. ಸಂತ್ರಸ್ತ ಹೆಣ್ಣು ಮಕ್ಕಳ ಬಗ್ಗೆಯೂ ಹೀನ ಭಾಷೆ ಬಳಸುತ್ತಿದ್ದಾರೆ. ಹೀಗಿರುವಾಗ ಸಂತ್ರಸ್ತರು ಯಾವ ಧೈರ್ಯದಿಂದ ದೂರು ಕೊಡಲು ಸಾಧ್ಯ ಎಂದು ಪ್ರಶ್ನಿಸಿದರು.

ಲೈಂಗಿಕ ದೌರ್ಜನ್ಯಕ್ಕಿಂತ ಪೆನ್ ಡ್ರೈವ್ ತಯಾರು ಮಾಡಿದವರು ಮತ್ತು ಅದನ್ನು ಹಂಚಿದವರು ಯಾರೆಂಬ ವಿಷಯಗಳೇ ಮುನ್ನೆಲೆಗೆ ಬಂದಿವೆ. ಈ ಘಟನೆ ನಡೆದಿರುವುದು ನಿಜ, ಅದು ಅಪರಾಧವಲ್ಲ. ಅದನ್ನು ಬಹಿರಂಗ ಪಡಿಸಿದ್ದೆ ಅಪರಾಧ. ಆ ಅಪರಾಧಿಗಳಿಗೆ ಶಿಕ್ಷೆ ಆಗಬೇಕೆಂದು ಕುಮಾರಸ್ವಾಮಿಯವರ ಹಿಂಬಾಲಕರು ಮತ್ತು ಬಿಜೆಪಿ ಮುಖಂಡರು ವಾದ ಮಾಡುತ್ತಿದ್ದಾರೆ. ಇದು ತನಿಖೆಯ ದಿಕ್ಕು ತಪ್ಪಿಸುವ ಹುನ್ನಾವರವಲ್ಲವೇ ಎಂದು ಪ್ರಶ್ನೆ ಮಾಡಿದರು.

ಪೆನ್ ಡ್ರೈವ್ ಪ್ರಕರಣವನ್ನು ಮುನ್ನಲೆಗೆ ತಂದ ವಕೀಲ ದೇವರಾಜೇಗೌಡ ಪರಿಶಿಷ್ಟ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಮತ್ತು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇವರ ಮೇಲೂ ಕ್ರಮ ತೆಗೆದುಕೊಳ್ಳಬೇಕು. ನಾವೆಲ್ಲರೂ ಹಿಂದುಗಳು ಎಂದು ಹೇಳುವ ಬಿಜೆಪಿಯವರು ಸಂತ್ರಸ್ತ ಹೆಣ್ಣು ಮಕ್ಕಳ ಬೆಂಬಲಕ್ಕೆ ಏಕೆ ನಿಲ್ಲುತ್ತಿಲ್ಲ. ಈ ಹೆಣ್ಣು ಮಕ್ಕಳು ಹಿಂದುಗಳಲ್ಲವೇ ಎಂದು ಕೇಳಿದರು.

ಎಸ್ ಐಟಿ ತಂಡ ದಕ್ಷ ಮತ್ತು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಾ ಬಂದಿದೆ. ಕೂಡಲೇ ಸಂಸದ ಪ್ರಜ್ವಲ್ ರೇವಣ್ಣರನ್ನು ಪತ್ತೆ ಹಚ್ಚಿ ಬಂಧಿಸಬೇಕು. ಜೊತೆಗೆ ಸಂತ್ರಸ್ತ ಹೆಣ್ಣು ಮಕ್ಕಳಿಗೆ ಎಸ್ ಐಟಿ ಅಧಿಕಾರಿಗಳು ಮತ್ತು ಸಾರ್ವಜನಿಕರು ಮನೋಸ್ಥೈರ್ಯ ತುಂಬಿ ನ್ಯಾಯ ಒದಗಿಸಿಕೊಟ್ಟು ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.

ಶಾಸಕ ಎಚ್.ಡಿ.ರೇವಣ್ಣ ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ. ಇದು ಸಂತ್ರಸ್ತರ ಪಾಲಿಗೆ ಮಾತ್ರವಲ್ಲದೆ ನಾಗರಿಕರಿಗೆ ಆಘಾತಕಾರಿ ಬೆಳವಣಿಗೆಯಾಗಿದೆ. ರೇವಣ್ಣ ಪ್ರಭಾವ ಶಾಲಿಯಾಗಿರುವ ಕಾರಣ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಹಾಗೂ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಎಲ್ಲಾ ಸಾದ್ಯತೆಗಳಿವೆ. ಆದಕಾರಣ ಎಸ್‌ಐಟಿ ಅಧಿಕಾರಿಗಳು ರೇವಣ್ಣರ ಜಮೀನನ್ನು ರದ್ದುಪಡಿಸಿ, ಅವರನ್ನು ಮತ್ತೆ ತಮ್ಮ ವಶಕ್ಕೆ ಪಡೆದುಕೊಳ್ಳಲು ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬೇಕೆಂದು ಮಾರಸಂದ್ರ ಮುನಿಯಪ್ಪ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಎಂ.ನಾಗೇಶ್ , ರಾಜ್ಯ ಸಂಯೋಜಕ ಗೋಪಿನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮನಿಯಪ್ಪ, ಅನ್ನದಾನಪ್ಪ, ಮುಖಂಡರಾದ ಕೃಷ್ಣಪ್ಪ, ಗೌರಮ್ಮ, ಪಾರ್ವತಮ್ಮ, ಮುರುಗೇಶ್ , ಮಹದೇವ್ , ದೊಡ್ಡಾಲಹಳ್ಳಿ ರಮೇಶ್ , ಜಕ್ಕಸಂದ್ರ ಕೃಷ್ಣಮೂರ್ತಿ, ರಜನಿಕಾಂತ್ , ಶಿವಕುಮಾರ್ ಇತರರಿದ್ದರು.

14ಕೆಆರ್ ಎಂಎನ್ 1.ಜೆಪಿಜಿ

ರಾಮನಗದಲ್ಲಿ ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.