ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ವಿಶ್ವೇಶ್ವರಯ್ಯ (ವಿಸಿ ನಾಲೆ) ನಾಲಾ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಜೂನ್ ತಿಂಗಳಲ್ಲಿ ನಾಲೆಗೆ ನೀರು ಹರಿಸದಿದ್ದರೆ ರೈತರೊಡಗೂಡಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ್ ಎಚ್ಚರಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿ.ಸಿ ನಾಲೆ ಕಾಮಗಾರಿ ನಿರೀಕ್ಷೆಯಂತೆ ನಡೆಯುತ್ತಿಲ್ಲ. ಮೇ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಜೂನ್‌ನಿಂದ ನಾಲೆಗೆ ನೀರು ಹರಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಕಾಮಗಾರಿ ವೇಗ ನೋಡಿದರೆ ಜುಲೈ ಅಂತ್ಯಕ್ಕೂ ಮುಗಿಯುವುದಿಲ್ಲ ಎನ್ನಿಸುತ್ತಿದೆ ಎಂದು ಕಿಡಿಕಾರಿದರು.
ಮಳೆ ಕೊರತೆಯಿಂದ ಭೀಕರ ಬರಗಾಲ ಎದುರಿಸುತ್ತಿರುವ ರೈತರು ಈಗಾಗಲೇ ಒಂದು ಹಂಗಾಮಿನ ಬೆಳೆ ಬೆಳೆಯದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದೆ. ಮುಂಗಾರು ಹಂಗಾಮು ಪ್ರಾರಂಭವಾಗುತ್ತಿದೆ. ಜೂನ್ ತಿಂಗಳಿನಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಹೀಗಾಗಿ ಮೇ ಅಂತ್ಯದೊಳಗೆ ನಾಲೆ ಆಧುನೀಕರಣ ಕಾಮಗಾರಿ ಪೂರ್ಣಗೊಳಿಸಿ ಜೂನ್ ಎರಡನೇ ವಾರದಲ್ಲಿ ನೀರು ಹರಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಸರ್ಕಾರದ ಗಮನ ಸೆಳೆದು ಗುತ್ತಿಗೆದಾರರು ತ್ವರಿತವಾಗಿ ಕಾಮಗಾರಿ ಮುಗಿಸುವಂತೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.
ಎಕೆರೆಗೆ 30 ಸಾವಿರ ರು.ಪರಿಹಾರ ನೀಡಿ:ನೀರಿಲ್ಲದೆ ನಾಲಾ ಅಚ್ಚಕಟ್ಟು ವ್ಯಾಪ್ತಿಯಲ್ಲಿ ಬರುವ ಲಕ್ಷಾಂತರ ತೆಂಗಿನ ಮರಗಳು ಸಂಪೂರ್ಣ ಒಣಗಿ ಸುಳಿಗಳು ಸತ್ತು ಹೋಗಿವೆ. ಅಡಿಕೆ ಮರಗಳದ್ದು ಇದೇ ಪರಿಸ್ಥಿತಿ ಆಗಿದೆ. ಅಡಿಕೆಯನ್ನು ತೋಟಗಾರಿಕೆ ಬೆಳೆ ಎಂದು ಪರಿಗಣಿಸಿ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಡಳಿತ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಎಂಟತ್ತು ವರ್ಷ ಕಷ್ಟ ಪಟ್ಟು ಬೆಳೆದ ಅಡಿಕೆ ಮರಗಳು ಒಣಗುತ್ತಿರುವುದನ್ನು ನೋಡಿದರೆ ಕರುಳು ಹಿಂಡಿದಂತಾಗುತ್ತದೆ. ಸರ್ಕಾರ ಈಗ ಕೊಡುತ್ತಿರುವ ಪರಿಹಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಾತಗಿದೆ ಎಂದು ಕಿಡಿಕಾರಿದರು.ಸರ್ಕಾರ ಎಕರೆಗೆ ಕನಿಷ್ಠ 30 ಸಾವಿರ ರುಪಾಯಿ ಪರಿಹಾರ ಘೋಷಿಸಬೇಕು. ಬರಗಾಲದಿಂದ ಜಿಲ್ಲೆಯ ಎಲ್ಲಾ ಕೆರೆಗಳು ಬತ್ತಿಹೋಗಿವೆ. ಕೆರೆಗಳ ಹೂಳು ಎತ್ತಿಸಲು ಕ್ರಮ ಕೈಗೊಳ್ಳಬೇಕು. ಒಂದರ ಹಿಂದೆ ಒಂದು ಚುನಾವಣೆಗಳು ಬರುತ್ತಿವೆ. ಸರ್ಕಾರ ಚುನಾವಣೆಗಳ ಬಗ್ಗೆ ಗಮನ ಹರಿಸಿದರೆ ರೈತರ ಕಷ್ಟ ಕೇಳುವವರ್‍ಯಾರು?, ಸರ್ಕಾರ ನೀರು ಹರಿಸಲು ಕ್ರಮ ವಹಿಸದಿದ್ದರೆ ಜಿಲ್ಲೆಯ ರೈತರು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎಂ.ಯೋಗೇಶ್, ಮುಖಂಡರಾದ ಬಿ.ಸಿ.ನಾಗೇಂದ್ರ, ಶ್ರೀನಿವಾಸ್, ದಯಾನಂದ, ಶ್ರೀಕಂಠೇಗೌಡ ಇದ್ದರು.