ಹರಪನಹಳ್ಳಿ ತಾಲೂಕಿನ ಅರಸೀಕೆರೆ ಹೋಬಳಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿಸಲು ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ಹಾಗೂ ವಿದ್ಯಾರ್ಥಿ ಫೆಡರೇಷನ್‌ ಹಾಗೂ ಹೊಸಕೋಟೆ ಗ್ರಾಪಂ ಆಶ್ರಯದಲ್ಲಿ ಚಿಕ್ಕಕಬ್ಬಳ್ಳಿ ಗ್ರಾಮದ ಬಳಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಹೋಬಳಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿಸಲು ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ಹಾಗೂ ವಿದ್ಯಾರ್ಥಿ ಫೆಡರೇಷನ್‌ ಹಾಗೂ ಹೊಸಕೋಟೆ ಗ್ರಾಪಂ ಆಶ್ರಯದಲ್ಲಿ ಚಿಕ್ಕಕಬ್ಬಳ್ಳಿ ಗ್ರಾಮದ ಬಳಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಅರಸೀಕೆರೆ ಹೋಬಳಿಯ ಕೆರೆಗುಡಿಹಳ್ಳಿ, ಚಿಕ್ಕ ಕಬಳ್ಳಿ, ಹೊಸಕೋಟೆ, ಮಾದಿಹಳ್ಳಿ ಮಾರ್ಗವಾಗಿ ಉಚ್ಚಂಗಿದುರ್ಗಕ್ಕೆ ಹೋಗುವ ರಸ್ತೆಯಲ್ಲಿ ಆಳವಾಗಿ ಬಿದ್ದಿರುವ ಗುಂಡಿಗಳನ್ನು ಮುಚ್ಚಬೇಕು ಹಾಗೂ ಈ ಮಾರ್ಗದಲ್ಲಿ ಸಾರಿಗೆ ಬಸ್ಸುಗಳನ್ನು ಓಡಿಸಬೇಕು ಎಂದು ಅವರು ಆಗ್ರಹಿಸಿದರು.

ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಕೆರೆಗುಡಿಹಳ್ಳಿ ಹಾಲೇಶ್ ಮಾತನಾಡಿ, ಕೆರೆಗುಡಿಹಳ್ಳಿಯಿಂದ ಗಡಿ ಗುಡಾಳು ವರೆಗೆ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿ ರಸ್ತೆ ನಿರ್ಮಿಸಿ, ಸಾರಿಗೆ ಬಸ್‌ಗಳನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರಿಯಾದ ಸಮಯಕ್ಕೆ ಬಸ್‌ಗಳನ್ನು ಬಿಡಬೇಕು ಎಂದು ಅವರು ಒತ್ತಾಯಿಸಿದರು.

ರಸ್ತೆಯಲ್ಲಿ ಆಳವಾದ ಗುಂಡಿಗಳು ಬಿದ್ದಿದ್ದು, ಸಾಕಷ್ಟು ಅಪಘಾತಗಳಾಗಿವೆ. ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ, ಶಾಲಾ-ಕಾಲೇಜಿಗೆ, ಆಸ್ಪತ್ರೆಗೆ, ಬ್ಯಾಂಕಿಗೆ ಹೋಗಲು ಪರದಾಡುತ್ತಿದ್ದಾರೆ. ಸಾಕಷ್ಟು ಬಾರಿ ಅಧಿಕಾರಿಗಳಿಗೆ, ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಅವರು ದೂರಿದರು.

ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಕಚೇರಿಗಳಿಗೆ ಬಂದು ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ರೈತ ಮುಖಂಡ ಬೂದಿಹಾಳು ಸಿದ್ದೇಶ್ ಮಾತನಾಡಿ, ಈಗಾಗಲೇ ಈ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದಿದ್ದೇವೆ. ಶವಸಂಸ್ಕಾರ ಮಾಡುವಷ್ಟು ಗುಂಡಿಗಳು ಬಿದ್ದಿವೆ. ಈ ರಸ್ತೆಯಲ್ಲಿ ಭಾರವಾದ ವಾಹನಗಳು ಚಲಿಸುವುದರಿಂದ ರಸ್ತೆಗಳು ತುಂಬಾ ಹಾಳಾಗಿವೆ ಎಂದು ಹೇಳಿದರು. ಕೂಡಲೇ ಈ ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಹೇಳಿದರು.

ದಲಿತ ಮುಖಂಡ ಕಬ್ಬಳ್ಳಿ ಮೈಲಪ್ಪ ಮಾತನಾಡಿ, ರಸ್ತೆ ರಿಪೇರಿ ಹಾಗೂ ಸರ್ಕಾರಿ ಬಸ್‌ಗಳನ್ನು ಬಿಡದಿದ್ದರೆ ಮುಂದಿನ ದಿನಗಳಲ್ಲಿ ನಿರಂತರ ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಹೊಸಕೋಟೆ ಗ್ರಾಮದ ನಿವೃತ್ತ ಶಿಕ್ಷಕ ಜಾತಪ್ಪ, ಮಾದಿಹಳ್ಳಿ ಬೊಮ್ಮಲಿಂಗಪ್ಪ, ವಿದ್ಯಾರ್ಥಿ ಯುವ ಫೆಡರೇಷನ್ ಯುವಕ ಡಿ.ಎಚ್. ಅರುಣ್ ಹಾಗೂ ಗ್ರಾಪಂ ಅಧ್ಯಕ್ಷ ಡಿ. ನಾಗಪ್ಪ ಮಾತನಾಡಿದರು. ಮನವಿ ಸ್ವೀಕರಿಸಿದ ಎಇಇ ಕುಬೇಂದ್ರ ನಾಯ್ಕ್, ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕಿ ಮಂಜುಳಾ ಅವರು ಕೂಡಲೇ ಸಮಸ್ಯೆ ಬಗೆಹರಿಸಿ ಕೊಡುವುದಾಗಿ ಭರವಸೆ ನೀಡಿದರು.

ಉಪತಹಸೀಲ್ದಾರ್ ಚಂದ್ರಮೋಹನ್, ಪಿಡಿಒ ಎಚ್.ಎಸ್. ಹೇಮಂತ್ ಕುಮಾರ್, ಗ್ರಾಪಂ ಅಧ್ಯಕ್ಷ ಡಿ. ನಾಗಪ್ಪ, ಶ್ರೀನಿವಾಸ್, ಪುಣಭಘಟ್ಟ ಮಂಜು, ಹಗರಿ ಗುಡಿಹಳ್ಳಿ ಶಿವರಾಮ್, ಅರುಣ್, ಪ್ರದೀಪ್, ಕೆರೆಗುಡಿಹಳ್ಳಿ ಶಿವಣ್ಣ, ಸುತ್ತ ಮುತ್ತಲ ಹಳ್ಳಿಯ ಗ್ರಾಮಸ್ಥರು ಹಾಗೂ ವಿದ್ಯಾರ್ಥಿ ಫೆಡರೇಷನ್ ಯುವಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.