ಬೇಂಗ್ರೆ ಮಲ್ಲಾರಿ ಶಿಲೆಕಲ್ಲು ಕ್ವಾರಿ ವಿರೋಧಿಸಿ ಪ್ರತಿಭಟನೆ

| Published : Mar 28 2024, 12:48 AM IST

ಬೇಂಗ್ರೆ ಮಲ್ಲಾರಿ ಶಿಲೆಕಲ್ಲು ಕ್ವಾರಿ ವಿರೋಧಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕ್ವಾರಿ ವಿರುದ್ದ ಕ್ರಮಕ್ಕೆ ಮುಂದಾಗದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಭಟ್ಕಳ: ತಾಲೂಕಿನ ಬೆಂಗ್ರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಾರಿಯಲ್ಲಿ ಶಿಲೆಕಲ್ಲು ಕ್ವಾರಿ ನಡೆಸುವುದನ್ನು ವಿರೋಧಿಸಿ ಮಹಿಳೆಯರು ಕಲ್ಲು ಕ್ವಾರಿಯಲ್ಲಿ ಕುಳಿತು ಮಲ್ಲಿಗೆ ಹೂವನ್ನು ಕಟ್ಟುವ ಮೂಲಕ ಪ್ರತಿಭಟನೆ ನಡೆಸಿ ನಂತರ ಸ್ಥಳಕ್ಕಾಗಮಿಸಿದ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ತಾಲೂಕಿನ ಬೇಂಗ್ರೆಯ ಮಲ್ಲಾರಿ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಕಲ್ಲು ಕ್ವಾರಿಯನ್ನು ನಡೆಸಲಾಗುತ್ತಿದ್ದು, ಇದರಿಂದ ಸ್ಥಳೀಯರು ರೋಸಿ ಹೋಗಿದ್ದಾರೆ. ಈ ಹಿಂದೆ ಈ ಬಗ್ಗೆ ಸ್ಥಳೀಯರು ಸಹಾಯಕ ಆಯುಕ್ತರ ಮೂಲಕ ಕ್ವಾರಿ ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದರು. ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗದೇ ಇದ್ದಾಗ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯೆ ಮೇಘನಾ ಅವರು ಗ್ರಾಮಸ್ಥರೊಂದಿಗೆ ಕಾರವಾರಕ್ಕೆ ತೆರಳಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಖುದ್ದಾಗಿ ಕಂಡು ದೂರು ಸಲ್ಲಿಸಿದ್ದರು. ದೂರಿನಲ್ಲಿ ಗ್ರಾಮ ಪಂಚಾಯಿತಿಯಿಂದ ಕಲ್ಲು ಕ್ವಾರಿಯನ್ನು ನಡೆಸಲು ಯಾವುದೇ ಪರವಾನಗಿ ಕೊಟ್ಟಿಲ್ಲ. ಕ್ರಷರ್ ನಡೆಸಲು ಕೂಡಾ ಅನುಮತಿ ನೀಡಿಲ್ಲ. ಗ್ರಾಮ ಪಂಚಾಯಿತಿಗೆ ಮಾಹಿತಿ ಇಲ್ಲದೇ ಕಲ್ಲುಕ್ವಾರಿ, ಕೃಷರ್ ನಡೆಸಲಾಗುತ್ತಿದೆ ಎಂದು ದೂರಿದ್ದರು. ಸ್ಥಳೀಯಾಡಳಿತಕ್ಕೆ ಮಾಹಿತಿಯೇ ಇಲ್ಲದೇ ಪರವಾನಗಿಯನ್ನು ನೀಡಿದ್ದರ ಕುರಿತು ಆಕ್ಷೇಪಣೆ ಕೂಡ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಮಾಹಿತಿ ನೀಡಿದ್ದ ಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಬೇಂಗ್ರೆಯಲ್ಲಿ ಕ್ವಾರಿ ನಡೆಸುವ ಪ್ರದೇಶವು ಸೇಫ್ ಝೋನ್ ಆಗಿದ್ದರಿಂದ ಸ್ಥಳೀಯಾಡಳಿತ ಪರವಾನಗಿಯಿಲ್ಲದೇನೇ ನೇರವಾಗಿ ಪರವಾನಗಿ ನೀಡಬಹುದು. ಆದರೆ ಸ್ಥಳಿಯ ಸಂಸ್ಥೆಗಳ, ಸ್ಥಳೀಯ ಸಾರ್ವಜನಿಕರ ತಕರಾರು ಇದ್ದಲ್ಲಿ ಪರಿಶೀಲಿಸಿ ಪರವಾನಗಿ ನೀಡಬೇಕು ಎಂದು ಹೇಳಿದ್ದರು. ಆದರೆ ಸ್ಥಳೀಯ ಜನ ಪ್ರತಿನಿಧಿಯೇ ದೂರು ಸಲ್ಲಿಸಿದ್ದರೂ ಸ್ಥಳೀಯರ ವಿರೋಧವನ್ನು ಗಣನೆಗೆ ತೆಗೆದುಕೊಳ್ಳದ ಅಧಿಕಾರಿಗಳ ವಿರುದ್ಧ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ಅಧಿಕಾರಿಗಳು ಮತ್ತು ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳ ಗಮನ ಸೆಳೆಯಲು ಮಲ್ಲಿಗೆ ಹೂವುಗಳನ್ನು ಕಲ್ಲು ಕ್ವಾರಿಗೆ ತಂದು ಮಲ್ಲಿಗೆ ಹೂವು ಕಟ್ಟುವ ಮೂಲಕ ವಿಶೇಷ ರೀತಿಯಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ನಾಗರಾಜ ನಾಯ್ಕಡ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಕಲ್ಲು ಕ್ವಾರಿಯನ್ನು ಮಾಡಿ ಹಾಗೆಯೇ ಬಿಟ್ಟಿರುವ ಬೃಹತ್ ಹೊಂಡಗಳನ್ನು, ಪರವಾನಗಿ ಇಲ್ಲದೇ ಬ್ಲಾಸ್ಟಿಂಗ್ ಮಾಡುತ್ತಿರುವುದನ್ನು ಸ್ಥಳೀಯ ಜನ ಪ್ರತಿನಿಧಿಗಳು, ಮಹಿಳೆಯರು ತಂದು ತಕ್ಷಣದ ಕ್ರಮಕ್ಕೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು ಚುನಾವಣಾ ಸಮಯವಾದ್ದರಿಂದ ಯಥಾಸ್ಥಿತಿ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಚುನಾವಣೆಯ ನಂತರ ಜಿಲ್ಲಾಧಿಕಾರಿಗಳ ಸಮಕ್ಷಮ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಜರುಗಿಸಲಾಗುವುದು ಎಂದರು. ಕ್ವಾರಿ ವಿರುದ್ದ ಕ್ರಮಕ್ಕೆ ಮುಂದಾಗದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.